ಮದುವೆಗಾಗಿ ವರ ಹಾಗೂ ವಧುವಾಗಿ ಇಬ್ಬರು ಗಂಡು ಮಕ್ಕಳನ್ನೇ ಗ್ರಾಮದ ಮುಖಂಡರು ಹುಡುಕಾಡಿ ಆಯ್ಕೆ ಮಾಡಿಕೊಂಡರು. ವರವಾದ ಸೂರ್ಯದೇವನಾಗಿ ಕುಶಾಲ್, ಮಧುಮಗಳಾದ ಚಂದ್ರಮತಿಯಂತೆ ವಿಶಿತ್‌ರನ್ನು ವಧುವರರನ್ನಾಗಿ ಸಜ್ಜುಗೊಳಿಸಿದರು. ಕುಶಾಲ್‌ಗೆ ಮೈಸೂರು ಪೇಟ, ಬಿಳಿ ಷರ್ಟು, ಕಚ್ಚೆ ತೊಡಿಸಿದರೆ, ವಿಶಿತ್‌ಗೆ ಸೀರೆ ಕುಪ್ಪಸ, ಬಳೆ, ಒಡವೆ ತೊಡಿಸಿ ಶೃಂಗರಿಸಿದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಗಡಿಭಾಗದ ಗೂಡೇಹೊಸಹಳ್ಳಿಯಲ್ಲಿ ಮಳೆಗಾಗಿ ವರುಣ ದೇವರನ್ನು ಪ್ರಾರ್ಥಿಸಿ, ರೈತಾಪಿ ಜನತೆ ತಿಂಗಳ ಮಾಮನಾದ ಚಂದಿರ ಮಾಮನ(ಸೂರ್ಯ-ಚಂದ್ರ) ಮದುವೆ ಮಾಡಿಸಿದರು.

ಈ ರೀತಿಯ ಮದುವೆ ಮಾಡುವುದರಿಂದ ಸಕಾಲದಲ್ಲಿ ಸಮೃದ್ಧಿಯಾಗಿ ಮಳೆ ಬೀಳಲಿದೆ ಎಂಬ ಜನಪದ ನಂಬಿಕೆಯಿಂದ ಇಡೀ ಗ್ರಾಮಸ್ಥರು ಒಂದೆಡೆ ಕೂಡಿ ವಿವಾಹದ ಸಂಭ್ರಮ ಆಚರಣೆಯಲ್ಲಿ ಭಾಗಿಯಾಗಿದ್ದರು.

ಗ್ರಾಮದ ಮಕ್ಕಳನ್ನು ವಾರದಿಂದ ಒಂದೆಡೆ ಕಲೆ ಹಾಕಿ ಮಳೆರಾಯ ಬರಲು ಜಾನಪದ ನಂಬುಗೆಯ ಮದುವೆ ಶಾಸ್ತ್ರ ಮಾಡಲು ಮುಂದಾದರು. ಮಕ್ಕಳನ್ನು ದೇವರಂತೆ ಪ್ರಾರ್ಥಿಸಿಕೊಂಡು ತಿಂಗಳ ಮಾಮನ ಮದುವೆ ನೆರವೇರಿಸಿದರೆ ಮಳೆ ತಪ್ಪದೆ ಬರಲಿದೆ ಎಂದು ಮದುವೆ ಶಾಸ್ತ್ರದ ವಿವಿಧ ಕಾರ್ಯಗಳಿಗೆ ಅಣಿಯಾದರು.

ಮದುವೆಗಾಗಿ ವರ ಹಾಗೂ ವಧುವಾಗಿ ಇಬ್ಬರು ಗಂಡು ಮಕ್ಕಳನ್ನೇ ಗ್ರಾಮದ ಮುಖಂಡರು ಹುಡುಕಾಡಿ ಆಯ್ಕೆ ಮಾಡಿಕೊಂಡರು. ವರವಾದ ಸೂರ್ಯದೇವನಾಗಿ ಕುಶಾಲ್, ಮಧುಮಗಳಾದ ಚಂದ್ರಮತಿಯಂತೆ ವಿಶಿತ್‌ರನ್ನು ವಧುವರರನ್ನಾಗಿ ಸಜ್ಜುಗೊಳಿಸಿದರು. ಕುಶಾಲ್‌ಗೆ ಮೈಸೂರು ಪೇಟ, ಬಿಳಿ ಷರ್ಟು, ಕಚ್ಚೆ ತೊಡಿಸಿದರೆ, ವಿಶಿತ್‌ಗೆ ಸೀರೆ ಕುಪ್ಪಸ, ಬಳೆ, ಒಡವೆ ತೊಡಿಸಿ ಶೃಂಗರಿಸಿದರು.

ವರನಕಡೆಯಿಂದ ಕೌಶಲ್ಯಾ ನಾಗೇಶ್ ಹಾಗೂ ವಧುವಿನ ಕಡೆಯಿಂದ ಭಾರತಿ ಲೋಕೇಶ್ ತಿಂಗಳ ಮಾಮನ ಮದುವೆಗೆ ಸಾರಥ್ಯ ವಹಿಸಿದರು.

ವಿವಾಹಕ್ಕೂ ಮುನ್ನ ವಾರದಿಂದ ಗ್ರಾಮದ ಪ್ರತಿ ಮನೆಗಳಿಗೆ ತೆರಳಿದ ಮಕ್ಕಳು ಮನೆ ಮನೆಗಳಲ್ಲಿ ಕೇಳಿ ರೊಟ್ಟಿ ಹಿಟ್ಟನ್ನು ತಂದರು. ಎಲ್ಲವನ್ನೂ ಒಂದೆಡೆ ಕಲೆಹಾಕಿ ನೀರಿನಿಂದ ಕಲೆಸಿ ಹದವಾಗಿ ರೊಟ್ಟಿ ತಯಾರಿಸಿದರು. 9 ದಿನಗಳ ಕಾಲ ನಡೆದ ಮದುವೆ ಶಾಸ್ತ್ರದಲ್ಲಿ ದಿನಕ್ಕೊಂದು ರೊಟ್ಟಿಯಂತೆ 9 ರೊಟ್ಟಿ ಹಾಗೂ 9 ಸಿಹಿ ಹೋಳಿಗೆ ತಯಾರಿಸಲಾಯಿತು.

ರೊಟ್ಟಿಯ ಮೇಲೆ ನಿತ್ಯವೂ ಚಂದಿರನ ಚಿತ್ತಾರ ಬಿಡಿಸಿದರು. ಕಲೆ ಹಾಕಿದ್ದ ರೊಟ್ಟಿಗಳನ್ನು ಮದುವೆಯ ದಿನದಂದು ಮಕ್ಕಳು ಪೈಪೋಟಿಯಲ್ಲಿ ಪರಸ್ಪರ ಕಸಿಯಲು ಯತ್ನಿಸಿದರು. ಅಂತಿಮವಾಗಿ ಒಂದೆಡೆ ಕಲೆತು ಮಳೆರಾಯನ ಕುರಿತು ಹಾಡಿದರು. ನೃತ್ಯ ಮಾಡಿ‘ಬಾರೋ ಮಳೆರಾಯ’ಎಂದು ಮಳೆರಾಯನ ಕರೆದರು. ಪರಸ್ಪರ ನೀರು ಎರಚಾಡಿ ಸಂಭ್ರಮಿಸಿದರು. ಊರಿನ ಗ್ರಾಮಸ್ಥರು ಮಕ್ಕಳಿಗೆ ಸಾಥ್ ನೀಡಿ ಮಕ್ಕಳೊಂದಿಗೆ ತಾವು ನೃತ್ಯ ಮಾಡಿದರು.

ಗ್ರಾಮದಲ್ಲಿ ಮದುವೆ ಸಮಾರಂಭದಂತೆ ನಗುನಗುತ್ತ ವರ ಪೂಜೆ, ಬಳೆ, ಮಾಂಗಲ್ಯ ಶಾಸ್ತ್ರ ಸೇರಿದಂತೆ ವಿವಿಧ ಶಾಸ್ತ್ರಗಳನ್ನು ಆಚರಿಸಿ ವಿವಾಹ ಸಂಭ್ರಮವನ್ನು ಸವಿದರು. ಬಿಜುಗಿನ ಪೆಟ್ಟಿಗೆಯನ್ನು ಮಹಿಳೆಯರು ತಲೆ ಮೇಲೆ ಹೊತ್ತುಕೊಂಡು ಗಂಡು- ಹೆಣ್ಣಿನ ಪರವಾಗಿ ಮುಖಂಡರೊಂದಿಗೆ ಆಂಜನೇಯ ದೇಗುಲದಿಂದ ವೆಂಕಟೇಶ್ವರ ದೇಗುಲದವರೆಗೆ ಮೆರವಣಿಗೆಯಲ್ಲಿ ಸಾಗಿದರು.

ಈ ವೇಳೆ ಬಾವಿ ಮನೆ ಕುಮಾರ್, ನಾಗೇಶ್, ಜಿ.ಬಿ. ನಾಗೇಶ್, ರೇಣುಕಾ, ಜಯಮ್ಮ, ಭಾರತಿ, ಬೇಬಿ, ಲಕ್ಷ್ಮಮ್ಮ, ಶಾಂತಮ್ಮ ಮತ್ತಿತರರು ಭಾಗವಹಿಸಿದ್ದರು.