ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ:
ತಾಲೂಕಿನ ಮುಳವಾಡದ ಬಳಿಯ ಟೋಲ್ ಗುರುವಾರ ತಡರಾತ್ರಿ ಆರಂಭವಾದ ಹಿನ್ನೆಲೆಯಲ್ಲಿ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ರೈತರು ಟೋಲ್ ನಾಕಾ ಬಂದ್ ಮಾಡಿ ಪ್ರತಿಭಟನೆ ನಡೆಸಿದರುಟೋಲ್ ನಾಕಾಕ್ಕೆ ಸಂಬಂಧಪಟ್ಟ ಕೊಲ್ಹಾರ, ಬಬಲೇಶ್ವರ ತಾಲೂಕಿನ ಗ್ರಾಮಗಳ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಮಕ್ಷಮದಲ್ಲಿ ಸದರಿ ಟೋಲ್ ನಾಕಾವನ್ನು ಪ್ರಾರಂಭಿಸಬೇಕು. ಪ್ರಾರಂಭಿಸುವ ಮುಂಚೆ ರಸ್ತೆ ಶುಲ್ಕ ಕೇಂದ್ರಕ್ಕೆ ಸಂಬಂಧಪಡುವ ಗ್ರಾಮಗಳ ಗ್ರಾಮಸ್ಥರನ್ನು ಕರೆಸಿ ಸಭೆ ನಡೆಸಿ ಅವರ ಕುಂದು ಕೊರತೆಗಳನ್ನು ಗಮನದಲ್ಲಿಟ್ಟುಕೊಂಡು ಟೋಲ್ ಪ್ರಾರಂಭಿಸಬೇಕು. ಟೋಲ್ ನಾಕಾದಲ್ಲಿ ಉಚಿತವಾಗಿ ಸಂಚರಿಸುವ ಸರಹದ್ದು ಬಗ್ಗೆ ದೃಢೀಕರಣ ನಕಲು ಪ್ರತಿ ನೀಡಬೇಕು ಎಂದು ಆ.6 ರಂದೆ ಕಾರ್ಯನಿರ್ವಾಹಕ ಅಭಿಯಂತರರು ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ವಿಜಯಪುರ ಇವರಿಗೆ ಈ ಮೊದಲೇ ಮನವಿ ಪತ್ರ ನೀಡಲಾಗಿತ್ತು. ಯಾವುದನ್ನು ಲೆಕ್ಕಿಸದೆ ಏಕಾಏಕಿ ಗುರುವಾರ ರಾತ್ರಿ ಟೋಲ್ ಆರಂಭ ಮಾಡಿರುವುದನ್ನು ಖಂಡಿಸಿ ರೈತಪರ ಹೋರಾಟಗಾರ ಸುರೇಶ ಗರಸಂಗಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ- 218ರ ಟೋಲ್ ಬಂದ್ ಮಾಡಿಸಿ ಸುತ್ತಮುತ್ತಲಿನ ರೈತರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಕೊಲ್ಹಾರ ಎಎಸ್ಐ ಎಚ್.ಎಸ್.ಗೌಡರ ಭೇಟಿ ನೀಡಿದ್ದು, ಈ ವೇಳೆ ರೈತ ಮುಖಂಡರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಇದರಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿ ಟ್ರಾಫಿಕ್ ಜಾಮ್ ಉಂಟಾಯಿತು. ವಿಜಯಪುರ-ಬಾಗಲಕೋಟ- ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುವ ವಾಹನಗಳು ಹಾಗೂ ಸಾರಿಗೆ ಬಸ್ ನಿಂತಿದ್ದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಈ ವೇಳೆ ರೈತರಾದ ಸುರೇಶ ಗರಸಂಗಿ, ಪರಸು ಗರಸಂಗಿ, ಗ್ರಾಪಂ ಸದಸ್ಯ ಪುಟ್ಟು ಗರಸಂಗಿ, ಮುತ್ತು ಇಳಿಗೇರ, ಇರ್ಫಾನ್ ಕಲಬುರ್ಗಿ ಸೇರಿದಂತೆ ಮಲಘಾಣ, ಮುಳವಾಡ ಸುತ್ತಮುತ್ತಿನ ಗ್ರಾಮಸ್ಥರು ಇದ್ದರು.