ಸಾರಾಂಶ
ತಾಲೂಕಿನ ಮಾದೇಗೌಡನಕೊಪ್ಪಲು ಹಾಗೂ ಮಾರನಚಾಕನಹಳ್ಳಿ ಗ್ರಾಮದ ಕೆರೆಗಳನ್ನು ಅರಣ್ಯಕ್ಕಾಗಿ ಮೀಸಲಿರಿಸಿರುವುದನ್ನು ವಿರೋಧಿಸಿ ಮಾರನಚಾಕನಹಳ್ಳಿ ಗ್ರಾ.ಪಂ. ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
-ಕೆರೆಗಳನ್ನು ಕೆರೆಗಳಾಗಿಯೇ ಉಳಿಸುವಂತೆ ಜಿಲ್ಲಾಡಳಿತಕ್ಕೆ ಗ್ರಾಮಸ್ಥರ ಒತ್ತಾಯ
ಕನ್ನಡಪ್ರಭ ವಾರ್ತೆ, ಮಂಡ್ಯತಾಲೂಕಿನ ಮಾದೇಗೌಡನಕೊಪ್ಪಲು ಹಾಗೂ ಮಾರನಚಾಕನಹಳ್ಳಿ ಗ್ರಾಮದ ಕೆರೆಗಳನ್ನು ಅರಣ್ಯಕ್ಕಾಗಿ ಮೀಸಲಿರಿಸಿರುವುದನ್ನು ವಿರೋಧಿಸಿ ಮಾರನಚಾಕನಹಳ್ಳಿ ಗ್ರಾ.ಪಂ. ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ದುದ್ದ ಹೋಬಳಿ ಮಾರನಚಾಕನಹಳ್ಳಿ ದಾಖಲೆ ಸರ್ವೆ ನಂ. ೫೪ ರ ಮಾದೇಗೌಡನಕೊಪ್ಪಲು ಗ್ರಾಮಕ್ಕೆ ಸೇರಿದ ೩೫ ಎಕರೆ ೨೦ ಗುಂಟೆ ಮತ್ತು ಮಾರನಚಾಕನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ.೧೭೨ ರಲ್ಲಿ ಇರುವ ೧೯ ಎಕರೆ ೩೭ ಗುಂಟೆ ಸರ್ಕಾರಿ ಕೆರೆಯನ್ನು (ಸಿಡಿ) ಅರಣ್ಯಕ್ಕಾಗಿ ವರ್ಗಾಯಿಸಿರುದುವುದನ್ನು ರದ್ದುಗೊಳಿಸಬೇಕೆಂದು ಗ್ರಾಮಸ್ಥರು ಒತಾಯಿಸಿದರು.ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಈ ಕೆರೆಗಳಿಂದ ತುಂಬಾ ಅನುಕೂಲವಾಗುತ್ತಿದ್ದು, ಕೆರೆಗಳನ್ನು ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದೆ ಅರಣ್ಯಕ್ಕಾಗಿ ಮೀಸಲಿರಿಸಿರುತ್ತಾರೆ. ಅರಣ್ಯಕ್ಕೆ ಮೀಸಲಿಟ್ಟಿರುವ ಕೆರೆಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ಗ್ರಾಮಗಳ ಸುಪರ್ದಿಗೆ ಬಿಡಿಸಿಕೊಡಬೇಕೆಂದು ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ರೋಹಿಣಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮದ ಮುಖಂಡರಾದ ಜಗದೀಶ್, ಕುಮಾರ್, ರಂಗಪ್ಪ, ಸೋಮಶೇಖರ್, ಪುಟ್ಟಸ್ವಾಮಿ, ಹನುಮೇಗೌಡ, ಕರುಣ್‌ಕುಮಾರ್, ಲಕ್ಷ್ಮೀನಾರಾಯಣ್, ನಾಗೇಶ್ ಇದ್ದರು.