ಬೆಳೆಗೆರೆ ಕೆರೆ ಉಳಿಸಲು ಗ್ರಾಮಸ್ಥರ ಪ್ರತಿಭಟನೆ

| Published : Dec 25 2024, 12:47 AM IST

ಸಾರಾಂಶ

ಗೌರಿಬಿದನೂರು ತಾಲೂಕಿನ ಬೆಳಗೆರೆ ಕೆರೆ ಸುಮಾರು 500 ಎಕರೆಯಷ್ಟು ಜಮೀನುಗಳಿಗೆ ನೀರು ಪೂರೈಸುತ್ತದೆ. ಮುಂದಿನ ಗ್ರಾಮದ ಯುವ ಪೀಳಿಗೆ ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಪರಿಸರದ ದೃಷ್ಟಿಯಿಂದ ನಮ್ಮ ಊರಿನ ಕೆರೆಯನ್ನು ಉಳಿಸಿಕೊಡಬೇಕೆಂಬುದು ಗ್ರಾಮಸ್ಥರ ಒತ್ತಾಯ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನ ಬೆಳಗೆರೆ ಗ್ರಾಮದ ಕೆರೆಯನ್ನು ಉಳಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ತಾಲೂಕು ಆಡಳಿತ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

ಹೊಸೂರು ಹೋಬಳಿಯ ಬೆಳಗೆರೆ ಗ್ರಾಮದಲ್ಲಿ ಶತಮಾನದಷ್ಟು ಹಳೆಯದಾದ ಕೆರೆ ಇದೆ, ಈಗ ಕೆರೆಯ ಜಾಗದ ಪಹಣಿಯಲ್ಲಿ ಖಾಸಗಿ ವ್ಯಕ್ತಿಗಳ ಹೆಸರು ಉಲ್ಲೇಖವಾಗಿದೆ. ಈ ಪಹಣಿದಾರರು ಸರ್ಕಾರಿ ಕೆರೆ ಜಾಗವನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಸರ್ಕಾರಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ

ಈ ಕೆರೆಯ ಅಭಿವೃದ್ಧಿಗಾಗಿ ಸರ್ಕಾರದ ವತಿಯಿಂದ ಕೆರೆ ಕಟ್ಟೆಯ ನಿರ್ಮಾಣಕ್ಕೆ ಸುಮಾರು 10 ಲಕ್ಷ ರು.ಗಳು, ಕೋಡಿ ನಿರ್ಮಾಣಕ್ಕೆ 2 ಲಕ್ಷ ರುಪಾಯಿ, ಕೆರೆ ತೂಬು ನಿರ್ಮಾಣಕ್ಕೆ 1ಲಕ್ಷ ರುಪಾಯಿಗಳನ್ನು ವೆಚ್ಚ ಮಾಡಿ ನಿರ್ಮಾಣವಾಗಿದೆ. ಪಂಚಾಯಿತಿಯಿಂದಲೂ ಕೂಡ ನರೇಗಾಯೋಜನೆ ಅಡಿಯಲ್ಲಿ, 2016-17ರಲ್ಲಿ ಸಸಿನೆಡಲು 10ಲಕ್ಷರೂಪಾಯಿಗಳು 2018-19 ಗೋಕುಂಟೆ ಕಾಮಗಾರಿಗೆ 20 ಲಕ್ಷ ರು.ಗಳನ್ನು ನೀಡಲಾಗಿದೆ ಎಂದರು.

ಅಲ್ಲದೆ ಈ ಕೆರೆಯಲ್ಲಿ, ಲೋಕೋಪಯೋಗಿ ಇಲಾಖೆಯಡಿಯಲ್ಲಿ ಗ್ರಾಮದ ಕುಡಿಯುವ ನೀರಿಗಾಗಿ 15 ಲಕ್ಷ ರು. ವೆಚ್ಚದಲ್ಲಿ 8 ಬಾವಿಗಳನ್ನು ಕೊರೆಸಲಾಗಿದೆ. 2024-25ಜಲಜೀವನ್ ಮಿಷನ್ ವತಿಯಿಂದ ಮನೆ-ಮನೆಗೆ ಕೊಳಾಯಿ ಮತ್ತು ನೀರು ಯೋಜನೆಗೆ ಕೊಳವೆ ಬಾವಿಯನ್ನು ಕೂಡ ಇದೇ ಕೆರೆಯಲ್ಲಿ ಕೊರೆಸಲಾಗಿದೆ ಎಂದರು. 500 ಎಕರೆಗೆ ನೀರಾವರಿ

ಈ ಭಾಗದಲ್ಲಿ ಬಹುತೇಕ ರೈತಾಪಿ ಕುಟುಂಬಗಳೇ ವಾಸವಾಗಿದ್ದು, ಸುಮಾರು 500 ಎಕರೆಯಷ್ಟು ಜಮೀನು, ಇದೇ ಕೆರೆ ನೀರಿನ ಮೇಲೆ ಅವಲಂಭಿತವಾಗಿದೆ, ಮುಂದಿನ ಗ್ರಾಮದ ಯುವ ಪೀಳಿಗೆ ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಪರಿಸರದ ದೃಷ್ಟಿಯಿಂದ ನಮ್ಮ ಊರಿನ ಕೆರೆಯನ್ನು ಉಳಿಸಿಕೊಡಬೇಕೆಂದು ಗ್ರಾಮಸ್ಥರು ಮನವಿ ಪತ್ರದಲ್ಲಿ ತಹಸೀಲ್ದಾರ್‌ಗೆ ಆಗ್ರಹಿಸಿದ್ದಾರೆ.ಲಕ್ಷಾಂತರ ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸಲಾಗಿದೆ. ಆದರೆ ಈಗ ಖಾಸಗಿ ವ್ಯಕ್ತಿಗಳು ಕೆರೆಯನ್ನು ತಮ್ಮದೆಂದು ಪಹಣಿಯನ್ನು ಸಹ ಮಾಡಿಸಿಕೊಂಡು ಮಾರಾಟಕ್ಕೆ ಮುಂದಾಗಿದ್ದಾರೆ. ಸರ್ಕಾರ ಈ ಕೂಡಲೇ ಇದರ ಬಗ್ಗೆ ಸೂಕ್ತಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ದಾಖಲೆ ಪರಿಶೀಲಿಸಿ ಕ್ರಮ

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮಹೇಶ್.ಎಸ್. ಪತ್ರಿ, ಈ ಕೆರೆ ಸಂಬಂಧ ಕೆಲವು ಕಾನೂನು ತೊಡಕುಗಳಿದ್ದು, ದಾಖಲೆಗಳನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ನಾಗೇಶ್, ಶಾಂತರಾಜು, ವೆಂಕಟ ಸ್ವಾಮಿ, ಶಶಿಧರ್, ಕೆಂಚಣ್ಣ, ಶರತ್ ತಿಪ್ಪಣ್ಣ, ನಾಗಣ್ಣ, ಶಿವಕುಮಾರ್, ಭಾಗ್ಯಮ್ಮ, ಲತಾ, ಮಂಜುಳಾ, ಲಕ್ಷ್ಮೀ ದೇವಮ್ಮ ಮತ್ತಿತರರು ಪಾಲ್ಗೊಂಡಿದ್ದರು.