ಸ್ಮಶಾನ ಜಾಗ ನಿಗದಿಪಡಿಸುವಂತೆ ಆಗ್ರಹಿಸಿ ಶವದೊಂದಿಗೆ ಗ್ರಾಮಸ್ಥರ ಪ್ರತಿಭಟನೆ

| Published : Feb 21 2025, 11:45 PM IST

ಸಾರಾಂಶ

ದಲಿತ ಜನಾಂಗಕ್ಕೆ ಸ್ಮಶಾನ ಜಾಗ ನಿಗದಿ ಪಡಿಸುವಂತೆ ಆಗ್ರಹಿಸಿ ತಾಲೂಕಿನ ಕೊಡಿಯಾಲ ಗ್ರಾಮಸ್ಥರು ರಸ್ತೆ ಮಧ್ಯ ಶವಹೊತ್ತ ವಾಹನ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಗ್ರಾಮದ ಮಂಡ್ಯ- ಅರಕೆರೆ ಮುಖ್ಯ ರಸ್ತೆಯಲ್ಲಿ ಶವಹೊತ್ತ ವಾಹನ ನಿಲ್ಲಿಸಿ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸಿದ ಗ್ರಾಮಸ್ಥರು, ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ದಲಿತ ಜನಾಂಗಕ್ಕೆ ಸ್ಮಶಾನ ಜಾಗ ನಿಗದಿ ಪಡಿಸುವಂತೆ ಆಗ್ರಹಿಸಿ ತಾಲೂಕಿನ ಕೊಡಿಯಾಲ ಗ್ರಾಮಸ್ಥರು ರಸ್ತೆ ಮಧ್ಯ ಶವಹೊತ್ತ ವಾಹನ ನಿಲ್ಲಿಸಿ ಪ್ರತಿಭಟನೆ ನಡೆಸಿದರು.

ಗ್ರಾಮದ ಮಂಡ್ಯ- ಅರಕೆರೆ ಮುಖ್ಯ ರಸ್ತೆಯಲ್ಲಿ ಶವಹೊತ್ತ ವಾಹನ ನಿಲ್ಲಿಸಿ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸಿದ ಗ್ರಾಮಸ್ಥರು, ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ದಲಿತ ಜನಾಂಗದ ಸಿದ್ದಯ್ಯ (55) ವ್ಯಕ್ತಿ ಮೃತಪಟ್ಟಿದ್ದು, ಶವ ಸಂಸ್ಕಾರ ಮಾಡಲು ಜಾಗ ಇಲ್ಲ ಎಂದು ಗ್ರಾಮಸ್ಥರು ದೂರಿದರು. ಗ್ರಾಮದ ಎಲ್ಲಾ ಜನಾಂಗಕ್ಕೂ ಪ್ರತ್ಯೇಕ ಸ್ಮಶಾಣ ಇದೆ. ಈ ಗ್ರಾಮದಲ್ಲಿ ದಲಿತ ಜನಾಂಗದವರಿಗೆ ಸ್ಮಶಾನ ಇಲ್ಲದಂತಾಗಿದೆ ಎಂದು ದೂರಿದರು.

ಈ ಹಿಂದೆ ಗ್ರಾಮದ ಸರ್ವೇ ನಂ 84ರಲ್ಲಿ ಸ್ಮಶಾನ ಜಾಗ ನಿಗದಿ ಪಡಿಸಲಾಗಿತ್ತು. ಆದರೆ, ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿದೆ. ನಮ್ಮ ಜನಾಂಗದವರು ಮೃತಪಟ್ಟಲ್ಲಿ ಸ್ಮಶಾನ ಇಲ್ಲದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಸ್ಮಶಾನದಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವವರೆವಿಗೂ ಶವ ಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದರು.

ವಿಷಯ ತಿಳಿದು ಉಪ ತಹಸೀಲ್ದಾರ್ ದಿನೇಶ್ ಸ್ಥಳಕ್ಕೆ ಆಗಮಿಸಿ ಮೇಲಾಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತಂದು ಸ್ಮಶಾನಕ್ಕೆ ಜಾಗ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ವಾಹನಗಳು ರಸ್ತೆ ಸಂಚಾರಕ್ಕೆ ಅವಕಾಶ ನೀಡಿ ಶವ ಸಂಸ್ಕಾರ ನೆರವೇರಿಸಿದರು.

೨೪ರಿಂದ ಹನುಮಂತನಗರದಲ್ಲಿ ಭಾರೀ ದನಗಳ ಜಾತ್ರೆ

ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರು ತಾಲೂಕು ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಫೆ.೨೪ರಿಂದ ಮಾ.೧ರವರೆಗೆ ಭಾರೀ ದನಗಳ ಜಾತ್ರೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯಾಧ್ಯಕ್ಷ ಬಿ.ಬಸವರಾಜು ತಿಳಿಸಿದರು.

ಕಳೆದ ೩೨ ವರ್ಷಗಳಿಂದ ಶ್ರೀಕ್ಷೇತ್ರದಲ್ಲಿ ಶಿವರಾತ್ರಿ ಉತ್ಸವ, ರಥೋತ್ಸವಗಳನ್ನು ನಡೆಸಿಕೊಂಡು ಬರಲಾಗಿದೆ. ಪ್ರಶಾಂತ ವಾತಾವರಣದಲ್ಲಿರುವ ಶ್ರೀಕ್ಷೇತ್ರದಲ್ಲಿ ಫೆ.೨೬ರಂದು ಮಹಾಶಿವರಾತ್ರಿ ಪ್ರಯುಕ್ತ ಜಾಗರಣೆ, ವಿಶೇಷ ಅಭಿಷೇಕಗಳು, ಕೋಲಾಟ, ದೊಣ್ಣೆವರಸೆ, ಭಜನೆ, ಭರತನಾಟ್ಯ, ಪ್ರವಚನ, ಜಾನಪದ ನೃತ್ಯರೂಪಕ, ಡೊಳ್ಳು ಕುಣಿತ, ಭಕ್ತಿ ಪ್ರಧಾನ ಚಲನಚಿತ್ರ ಪ್ರದರ್ಶನ ಧಾರ್ಮಿಕ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ೬ ದಿನಗಳ ಕಾಲ ನಡೆಯಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಫೆ.೨೮ರಂದು ರಥೋತ್ಸವ, ವಿವಿಧ ದೇವರ ಉತ್ಸವ, ಕೀಲುಕುದುರೆ, ಗಾರುಡಿಗೊಂಬೆ, ಡೊಳ್ಳು ಕುಣಿತ ಕಾರ್ಯಕ್ರಮಗಳು ಜರುಗಲಿದ್ದು, ಅದೇ ದಿನ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿವೆ. ಉತ್ತಮ ರಾಸುಗಳಿಗೆ ೧೦ ಸಾವಿರ ರು. ಪ್ರಥಮ, ೭೫೦೦ ರು. ದ್ವಿತೀಯ, ೫ ಸಾವಿರ ರು. ತೃತೀಯ ಬಹುಮಾನದ ಜೊತೆಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಫಲಕಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಮಾ.೧ರಂದು ಸಂಜೆ ೬.೩೦ರಿಂದ ತೆಪ್ಪೋತ್ಸವ, ರಾತ್ರಿ ೮.೧೫ ರಿಂದ ಶಯನೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಭಾರೀ ದನಗಳ ಜಾತ್ರೆಯಲ್ಲಿ ಸುಮಾರು ೫೦೦ ರಾಸುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಿದ್ದೇಗೌಡ, ಕೆ.ಎಸ್.ಗೌಡ, ಎಸ್.ನಾಗರಾಜು, ಶಿವಲಿಂಗೇಗೌಡ ಇದ್ದರು.