ಶಾಲೆಗೆ ಮಕ್ಕಳ ಕಳುಹಿಸಲು ರಸ್ತೆ ದುರಸ್ತಿ ಮಾಡಿದ ಗ್ರಾಮಸ್ಥರು!

| Published : Sep 10 2025, 01:03 AM IST

ಶಾಲೆಗೆ ಮಕ್ಕಳ ಕಳುಹಿಸಲು ರಸ್ತೆ ದುರಸ್ತಿ ಮಾಡಿದ ಗ್ರಾಮಸ್ಥರು!
Share this Article
  • FB
  • TW
  • Linkdin
  • Email

ಸಾರಾಂಶ

ಮುದ್ಲಾಪುರದಿಂದ ಕಿನ್ನಾಳ ವರೆಗಿನ 3.5 ಕಿಲೋಮೀಟರ್‌ ರಸ್ತೆ ದುರಸ್ತಿ ಮಾಡಿಸುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹದಗೆಟ್ಟ ರಸ್ತೆಯಿಂದ ಬಸ್‌ ಸಂಚರಿಸಲು ಆಗದೆ ಮಕ್ಕಳು ಕಿನ್ನಾಳ ಹಾಗೂ ಕೊಪ್ಪಳಕ್ಕೆ ಶಾಲಾ-ಕಾಲೇಜಿಗೆ ಹೋಗಲು ಆಗುತ್ತಿಲ್ಲ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ತಮ್ಮೂರ ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳುಹಿಸಲು ಹದಗೆಟ್ಟ ರಸ್ತೆ ದುರಸ್ತಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ವಂತಿಗೆ ಸಂಗ್ರಹಿಸಿ ರಸ್ತೆ ದುರಸ್ತಿಗೆ ನಾಂದಿ ಹಾಡಿದ್ದಾರೆ. ಈ ಮೂಲಕ ಆಡಳಿತ ಯಂತ್ರಕ್ಕೆ ತಿರುಗೇಟು ನೀಡಿದ್ದಾರೆ.

ತಾಲೂಕಿನ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುದ್ಲಾಪುರ ಗ್ರಾಮಸ್ಥರು ತಮ್ಮೂರ ಮಕ್ಕಳ ಶಿಕ್ಷಣಕ್ಕಾಗಿ ರಸ್ತೆ ಅಭಿವೃದ್ಧಿಪಡಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಬೇಡಿಕೆಗೂ ಸಿಗದ ಸ್ಪಂದನೆ:

ಮುದ್ಲಾಪುರದಿಂದ ಕಿನ್ನಾಳ ವರೆಗಿನ 3.5 ಕಿಲೋಮೀಟರ್‌ ರಸ್ತೆ ದುರಸ್ತಿ ಮಾಡಿಸುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹದಗೆಟ್ಟ ರಸ್ತೆಯಿಂದ ಬಸ್‌ ಸಂಚರಿಸಲು ಆಗದೆ ಮಕ್ಕಳು ಕಿನ್ನಾಳ ಹಾಗೂ ಕೊಪ್ಪಳಕ್ಕೆ ಶಾಲಾ-ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಳೆಗಾಲದಲ್ಲಂತೂ ಸಂಚರಿಸಲು ಆಗುವುದಿಲ್ಲ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಲು ಆಟೋ ಬರುತ್ತಿಲ್ಲವೆಂದು ಗ್ರಾಮಸ್ಥರು ಪ್ರತಿಭಟನೆ ಸಹ ನಡೆಸಿದ್ದರು. ಮನವಿ ಪತ್ರ ಹಿಡಿದು ಅಧಿಕಾರಿಗಳು, ಶಾಸಕರ ಬಳಿ ಸುತ್ತಾಡಿ ಚಪ್ಪಲಿ ಸವೆಸಿದರೂ ರಸ್ತೆ ದುರಸ್ತಿಯಾಗಲಿಲ್ಲ. ಹೀಗಾಗಿ ಗ್ರಾಮಸ್ಥರೇ ಸಭೆ ಸೇರಿ ನಾವೇ ವಂತಿಗೆ ಹಾಕಿ ರಸ್ತೆ ನಿರ್ಮಿಸಿಕೊಳ್ಳೋಣ. ಚುನಾವಣೆ ವೇಳೆ ಮತ ಕೇಳಲು ಬರುವವರನ್ನು ಅಂದು ನೋಡಿಕೊಳ್ಳೋಣ. ಈಗ ಅವರ ಮುಂದೇ ಹೋಗಿ ನಿಲ್ಲುವುದು ಬೇಡವೆಂದು ನಿರ್ಧರಿಸಿ ರಸ್ತೆ ದುರಸ್ತಿ ಮಾಡಿಕೊಂಡಿದ್ದಾರೆ.

ಮಾಲೀಕರ ಸಾಥ್‌:

ಸಭೆಯಲ್ಲಿ ಹಿಟ್ಯಾಚ್‌ ಮತ್ತು ಟ್ರ್ಯಾಕ್ಟರ್‌ ಮಾಲೀಕರು ನಾವು ಉಚಿತವಾಗಿ ವಾಹನ ನೀಡುತ್ತೇವೆ ಎನ್ನುತ್ತಿದ್ದಂತೆ ಉಳಿದವರು ಸಹ ತಮ್ಮ ಕೈಲಾದ ವಂತಿಗೆ ನೀಡಿದ್ದಾರೆ. ಈ ವೇಳೆ ₹ 1.5 ಲಕ್ಷ ಸಂಗ್ರಹವಾಗಿದೆ. ಜತೆಗೆ 6 ಹಿಟ್ಯಾಚ್ ಮತ್ತು 10 ಟ್ರ್ಯಾಕ್ಟರ್‌ ಉಚಿತ ಸೇವೆಗೆ ಸಿಕ್ಕಿದ್ದರಿಂದ ನಾಲ್ಕಾರು ಲಕ್ಷ ರುಪಾಯಿ ವ್ಯಯಿಸಿ ರಸ್ತೆ ದುರಸ್ತಿ ಮಾಡೋಣವೆಂದು ತೀರ್ಮಾನಿಸಿ ಕಾಮಗಾರಿ ಶುರು ಮಾಡಿದ್ದರು. ಮುದ್ಲಾಪುರದಿಂದ ಕಿನ್ನಾಳ ವರೆಗೆ ಇರುವ 3.5 ಕಿಮೀ ರಸ್ತೆಯನ್ನು ಶ್ರಮದಾನದ ಮೂಲಕ ಮಾಡಿ ಮುಗಿಸಿದ್ದಾರೆ.

ಗ್ರಾಮದ ವಿರೂಪಾಕ್ಷಪ್ಪ ಬಾರಕೇರ, ಯಲ್ಲಪ್ಪ ಹಳೆಮನಿ, ಬಸವರಾಜ ಎತ್ತಿಮನಿ, ರಮೇಶ ಎತ್ತಿನಮನಿ, ಗವಿಸಿದ್ದಪ್ಪ ಪೊಲೀಸ್, ಗವಿಸಿದ್ದಪ್ಪ ಎತ್ತಿಮನಿ, ಚಿದಾನಂದ ಕಮ್ಮಾರ ಸೇರಿದಂತೆ ಹಿರಿಯರು ರಸ್ತೆ ದುರಸ್ತಿ ಮಾಡಿಕೊಳ್ಳುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡಿದ್ದಾರೆ. ಇದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಜಿಲ್ಲಾದ್ಯಂತ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳ ಸ್ಥಿತಿ ಇದೇ ಆಗಿದೆ. ಕಳೆದ ವಾರ ಬಿ. ಹೊಸಳ್ಳಿ ಗ್ರಾಮದ ವಿದ್ಯಾರ್ಥಿಗಳು ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ಸಹ ನಡೆಸಿದ್ದಾರೆ.ರಸ್ತೆ ಹದಗೆಟ್ಟ ಪರಿಣಾಮ ನಮ್ಮೂರಿಗೆ ಬಸ್‌, ಆಟೋ ಸಹ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಹೀಗಾಗಿ ನಾವೇ ರಸ್ತೆ ದುರಸ್ತಿ ಮಾಡಿಕೊಂಡಿದ್ದೇವೆ ಎಂದು ವಿರೂಪಾಕ್ಷಪ್ಪ ಬಾರಕೇರ ಹೇಳಿದರು.