ಹೆಬ್ರಿ ಗ್ರಾಮದ ಸಾಂತೊಳ್ಳಿ, ಮಣಿಗುಂಡಿ ಹಾಗೂ ಕಾರ್ಕಳ ಜಡ್ಡು ಪರಿಸರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ಮಣಿಗುಂಡಿ ಹೊಳೆಗೆ ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ ನೇತೃತ್ವದಲ್ಲಿ ಗ್ರಾಮಸ್ಥರು ಶುಕ್ರವಾರ ಹೆಬ್ರಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹೆಬ್ರಿ

ಹೆಬ್ರಿ ಗ್ರಾಮದ ಸಾಂತೊಳ್ಳಿ, ಮಣಿಗುಂಡಿ ಹಾಗೂ ಕಾರ್ಕಳ ಜಡ್ಡು ಪರಿಸರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ಮಣಿಗುಂಡಿ ಹೊಳೆಗೆ ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ ನೇತೃತ್ವದಲ್ಲಿ ಗ್ರಾಮಸ್ಥರು ಶುಕ್ರವಾರ ಹೆಬ್ರಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಸಾಂತೊಳ್ಳಿ, ಮಣಿಗುಂಡಿ ಹಾಗೂ ಕಾರ್ಕಳ ಜಡ್ಡು ಪರಿಸರದ ಮನೆಗಳಿಗೆ ಹೆಬ್ರಿ–ಬಚ್ಚಪ್ಪು–ಕಬ್ಬಿನಾಲೆ ಮುಖ್ಯ ರಸ್ತೆಯಿಂದ ಸುಮಾರು 3 ಕಿ.ಮೀ. ಕ್ರಮಿಸಬೇಕಾಗಿದೆ. ಆದರೆ ಈ ಭಾಗದಲ್ಲಿ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೆ, ಇರುವ ಮಣ್ಣಿನ ರಸ್ತೆಯು ಕಲ್ಲು, ಹೊಂಡ ಹಾಗೂ ಕೆಸರಿನಿಂದ ಕೂಡಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.ಪ್ರತಿನಿತ್ಯ ಹಾಲು ಡೈರಿಗೆ ಹಾಲು ಪೂರೈಸುವವರು, ಶಾಲಾ ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಸ್ಥಳೀಯರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದ್ದು, ಮಣಿಗುಂಡಿ ಹೊಳೆ ತುಂಬಿ ಹರಿಯುವ ಸಂದರ್ಭ ಸೇತುವೆ ಇಲ್ಲದ ಕಾರಣ ಗ್ರಾಮಸ್ಥರು ಜೀವದ ಹಂಗು ತೊರೆದು ಹೊಳೆ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.ತುರ್ತು ಆರೋಗ್ಯ ಸಮಸ್ಯೆ ಸೇರಿದಂತೆ ಯಾವುದೇ ಅವಘಡ ಸಂಭವಿಸಿದ ಸಂದರ್ಭದಲ್ಲಿ ರಸ್ತೆ ಹದಗೆಟ್ಟಿರುವುದರಿಂದ ಬಾಡಿಗೆ ವಾಹನಗಳೂ ಈ ಪ್ರದೇಶಕ್ಕೆ ಬರಲು ಹಿಂದೇಟು ಹಾಕುತ್ತವೆ. ಅಲ್ಲದೆ, ಮೊಬೈಲ್ ನೆಟ್‌ವರ್ಕ್ ಸಂಪರ್ಕದ ಸಮಸ್ಯೆಯೂ ಇರುವುದರಿಂದ ತುರ್ತು ಸಂದರ್ಭಗಳಲ್ಲಿ ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸುವುದು ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಈ ಮೂಲಭೂತ ಸಮಸ್ಯೆಗಳ ಕುರಿತು ಈ ಹಿಂದೆಯೂ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಆದ್ದರಿಂದ ಕೂಡಲೇ ಮಣಿಗುಂಡಿ ಹೊಳೆಗೆ ಸೇತುವೆ ನಿರ್ಮಿಸುವುದರ ಜೊತೆಗೆ, ಹದಗೆಟ್ಟಿರುವ ಮಣ್ಣಿನ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ಸಂದರ್ಭ ರಜಿನಿ, ಮಂಜುನಾಥ್, ರಮೇಶ್ ಕುಲಾಲ್, ಕರುಣಾಕರ ಹೆಗಡೆ, ಕೃಷ್ಣ ಹೆಗಡೆ, ಬೇಬಿ, ಸುಂದರ ಕುಲಾಲ್, ಲಲಿತ, ರವೀಂದ್ರ ಕುಲಾಲ್, ಸೀನ ಕುಲಾಲ್, ನಾರಾಯಣ, ಅಮ್ಮಣಿ, ಅರವಿಂದ ಆಚಾರ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.