ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಚಂಗಡಿ ಗ್ರಾಮದಲ್ಲಿ ಪ್ರತಿನಿತ್ಯ ಹಾಡಹಗಲೇ ಕಾಡಾನೆಯೊಂದು ದಾಂಧಲೆ ನಡೆಸುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಟ್ಟಾರಣ್ಯದ ಮಧ್ಯದಲ್ಲಿರುವ ಚಂಗಡಿ ಗ್ರಾಮಕ್ಕೆ ಬಂದು ದಿನನಿತ್ಯ ಸಂಜೆ ವೇಳೆ ಒಂಟಿ ಕಾಡಾನೆ ಉಪಟಳ ನಡೆಸುತ್ತಿದೆ.ಅರಣ್ಯಾಧಿಕಾರಿಗಳ ವೈಫಲ್ಯಕ್ಕೆ ಗ್ರಾಮಸ್ಥರ ಆರೋಪ:
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಮಹದೇಶ್ವರ ಬೆಟ್ಟ ವಲಯ ವ್ಯಾಪ್ತಿಗೆ ಬರುವ ಚಂಗಡಿ ಗ್ರಾಮದಲ್ಲಿ 250ಕ್ಕೂ ಹೆಚ್ಚು ಕುಟುಂಬಗಳಿದ್ದು, ಗ್ರಾಮ ಅರಣ್ಯ ಪ್ರದೇಶದ ಮಧ್ಯ ಭಾಗದಲ್ಲಿ ಇರುವುದರಿಂದ ಇಲ್ಲಿನ ನಿವಾಸಿಗಳು ಉದ್ಯೋಗಕ್ಕಾಗಿ ನೆರೆಯ ತಮಿಳುನಾಡು, ಬೆಂಗಳೂರು ಸೇರಿ ವಿವಿಧ ಕಡೆ ಕೆಲಸ- ಕಾರ್ಯಗಳಿಗೆ ತೆರಳಿರುವುದರಿಂದ ಇಲ್ಲಿನ ಹಿರಿಯ ನಾಗರಿಕರು ಮಾತ್ರ ಗ್ರಾಮದಲ್ಲಿ ಉಳಿಯುತ್ತಿದ್ದು, ಕಾಡುಪ್ರಾಣಿಗಳಾದ ಚಿರತೆ, ಕಾಡಾನೆಗಳ ಉಪಟಳದಿಂದ ಜೀವ ಭಯ ಹೆಚ್ಚಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಪ್ರಾಣಿಗಳನ್ನು ಗ್ರಾಮಕ್ಕೆ ಬರುವುದನ್ನು ತಡೆಗಟ್ಟಲು ವಿಫಲರಾಗಿದ್ದಾರೆ ಎಂದು ನಿವಾಸಿಗಳು ತಿಳಿಸಿದ್ದು, ಭಯದ ವಾತಾವರಣದಲ್ಲೇ ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಜೆ ಆಗುತ್ತಿದ್ದಂತೆ ಕಾಡಾನೆ ಉಪಟಳ:
ಚಂಗಡಿ ಗ್ರಾಮದ ಬಳಿ ಒಂಟಿ ಕಾಡಾನೆ ಹಾಡಹಗಲೇ ಬರುತ್ತಿರುವುದರಿಂದ ಅಲ್ಲಿನ ಮರಗಳಲ್ಲಿರುವ ಹಲಸು, ತೆಂಗು, ಮಾವಿನ ಹಣ್ಣುಗಳನ್ನು ತಿಂದು ಹಾಳು ಮಾಡುತ್ತಿದೆ, ನಿತ್ಯವೂ ಉಪಟಳ ನೀಡುತ್ತಿರುವ ಒಂಟಿ ಕಾಡಾನೆಯನ್ನು ಬೇರಡೆ ಬಿಡಲು ಅರಣ್ಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.