ನಗರ, ಪಟ್ಟಣಗಳಲ್ಲಿ ಪೌರ ಕಾರ್ಮಿಕರಿಂದ ಹೇಗೆ ಸ್ವಚ್ಛತೆಯಿಂದ ಕೂಡಿರುತ್ತದೆಯೋ ಅದೇ ರೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಂಡಾಗ ಮಾತ್ರ ಗ್ರಾಮಗಳ ಸ್ವಚ್ಛತೆ ಕಾಪಾಡಲು ಸಾಧ್ಯ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರ, ಪಟ್ಟಣಗಳಲ್ಲಿ ಪೌರ ಕಾರ್ಮಿಕರಿಂದ ಹೇಗೆ ಸ್ವಚ್ಛತೆಯಿಂದ ಕೂಡಿರುತ್ತದೆಯೋ ಅದೇ ರೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಂಡಾಗ ಮಾತ್ರ ಗ್ರಾಮಗಳ ಸ್ವಚ್ಛತೆ ಕಾಪಾಡಲು ಸಾಧ್ಯ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.ತಾಲೂಕಿನ ಆನಗೋಡು ಗ್ರಾಮದ ಶ್ರೀವಾಲ್ಮೀಕಿ ಸಮುದಾಯ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ತಾಲೂಕು ಆಡಳಿತದ ವತಿಯಿಂದ ‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಪರಿಸರ ಜಾಗೃತಿ ಸಮಾವೇಶ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ನಗರ, ಪಟ್ಟಣಗಳು ಸ್ವಚ್ಛ ನಗರಿ ಎಂದು ಹೆಸರು ಪಡೆಯಲು ಪೌರ ಕಾರ್ಮಿಕರೇ ಕಾರಣವಾಗಿದ್ದಾರೆ. ಅದೇ ರೀತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೌರ ಕಾರ್ಮಿಕರನ್ನು ನೇಮಿಸಿಕೊಂಡರೆ ಗ್ರಾಮೀಣ ಪ್ರದೇಶಗಳು ಕೂಡ ಸ್ವಚ್ಛ ಗ್ರಾಮಗಳಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮಾಡಳಿತಗಳು ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.ಮಾಲಿನ್ಯವು ಗಾಳಿ, ನೀರು ಮತ್ತು ಮಣ್ಣಿನಲ್ಲಿ ಹಾನಿಕಾರಕ ವಸ್ತುಗಳ ಸೇರ್ಪಡೆಯಿಂದ ಪರಿಸರ ಮತ್ತು ಮಾನವ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪರಿಸರ ಸಂರಕ್ಷಣೆಯು ಗಿಡ ಮರಗಳನ್ನು ಬೆಳೆಸುವುದು, ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡುವ ಮತ್ತು ಸುಸ್ಥಿರ ಜೀವನವನ್ನು ಉತ್ತೇಜಿಸುವುದು ಅತ್ಯಗತ್ಯವಾಗಿದೆ ಎಂದು ಸಲಹೆ ನೀಡಿದರು.
ಅರಣ್ಯ ನಾಶವನ್ನು ತಡೆದು ಹೆಚ್ಚು ಗಿಡಗಳನ್ನು ನೆಡುವುದರಿಂದ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಬಹುದು. ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ. ಅಷ್ಟೇ ಅಲ್ಲ, ನಾವು ಸ್ವಚ್ಛ ಮತ್ತು ಸುರಕ್ಷಿತ ಭೂಮಿಯನ್ನು ಭವಿಷ್ಯದ ಪೀಳಿಗೆಗೆ ಬಿಟ್ಟು ಕೊಟಬಹುದಾಗಿದೆ. ಲಕ್ಷಾಂತರ ಗಿಡ ಮರಗಳನ್ನು ಬೆಳೆಸಿದ್ದೇವೆ ಎಂದು ಅಧಿಕಾರಿಗಳು ಬರೀ ಕಡತಗಳಲ್ಲಿ ತೋರಿಸುವುದಲ್ಲ, ವಾಸ್ತವದಲ್ಲಿ ಗಿಡ ಮರಗಳನ್ನು ಬೆಳೆಸಿರಬೇಕು ಎಂದರು.ತಹಸೀಲ್ದಾರ್ ಡಾ.ಎಂ.ಜಿ.ಅಶ್ವಥ, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ವಿಶಾಲಕ್ಷಿ, ಪ್ರಾಧ್ಯಾಪಕ ಡಾ.ಎಸ್.ಶಿಶುಪಾಲ, ಉಪ ವೈಜ್ಞಾನಿಕ ಅಧಿಕಾರಿ ಡಾ.ಎಲ್.ಮಂಜುನಾಥ್, ಜಿಲ್ಲಾ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್, ಗ್ರಾಮಸ್ಥರು ಹಾಜರಿದ್ದರು.
ಸ್ವಚ್ಛತೆ ಆರೋಗ್ಯಕ್ಕೆ ಮೂಲ. ನಮ್ಮ ಊರಿನ ಸ್ವಚ್ಛತೆ ನಮ್ಮ ಜವಾಬ್ದಾರಿ. ಕಸ ಸಂಗ್ರಹ ಮತ್ತು ವಿಲೇವಾರಿ, ಬೀದಿ ಮತ್ತು ಪರಿಸರ ಸ್ವಚ್ಚಗೊಳಿಸುವುದು, ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುವುದು ಗ್ರಾಮಾಡಳಿತದ ಜವಾಬ್ದಾರಿಯಾಗಿದೆ.ಕೆ.ಎಸ್.ಬಸವಂತಪ್ಪ ಶಾಸಕ.