ಅಧಿಕಾರಿಗಳ ನಿಷ್ಕಾಳಜಿಗೆ ಹಿಡಿದ ಕನ್ನಡಿ । ಮಳೆಗಾಲ ಬಂತೆಂದರೆ ಶಾಪ ಕಾಡಿದಂತಹ ಅನುಭವ
ಅನಂತ ದೇಸಾಯಿ
ಕನ್ನಡಪ್ರಭ ವಾರ್ತೆ ಜೋಯಿಡಾತಾಲೂಕಿನ ಕರಂಜೆ, ಸಿಸೈ, ಡಿಗ್ಗಿ, ಧೂಧಮಳ ಸೇರಿದಂತೆ ಬಜಾರಕುಣಂಗ ಗ್ರಾಮ ಪಂಚಾಯಿತಿ ಮತ್ತು ಕಾತೇಲಿ ಗ್ರಾಪಂ ವ್ಯಾಪ್ತಿಯ ಹಲವಾರು ಹಳ್ಳಿಗಳಿಗೆ ರಸ್ತೆಗಳಿಲ್ಲ. ಬಹುತೇಕ ಗ್ರಾಮಗಳು ಮೂಲಭೂತ ಸೌಲಭ್ಯದಿಂದ ವಂಚಿತಗೊಂಡಿವೆ.
ಇಲ್ಲಿನ ಹಳ್ಳ-ಕೊಳ್ಳಗಳಿಗೆ ಸೇತುವೆಗಳಿಲ್ಲ. ಗ್ರಾಮಸ್ಥರೇ ನಿರ್ಮಿಸಿಕೊಂಡ ಕಟ್ಟಿಗೆಯ ಕಾಲುಸಂಕಗಳ ಮೂಲಕ ಓಡಾಡಬೇಕಾಗಿದೆ. ಮಳೆಗಾಲ ಬಂದರೆ ಸಾಕು ಇಲ್ಲಿ ಸರಿಯಾಗಿ ವಿದ್ಯುತ್ ಇರಲ್ಲ. ಜನರು ಮಳೆಗಾಲ ಸೇರಿ ಒಟ್ಟು ಸುಮಾರು ಆರು ತಿಂಗಳು ಪಡಬಾರದ ಕಷ್ಟ ಪಡುತ್ತಾರೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಂಟು ದಶಕಗಳೇ ಕಳೆಯುತ್ತಿದ್ದರೂ ಈ ಭಾಗದ ನಮ್ಮ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ಜನರಿಗೆ ಕನಿಷ್ಠ ಸೌಲಭ್ಯವನ್ನಾದರೂ ಕೊಡೋಣ ಎಂಬಂತ ಕಾಳಜಿ ಬರಲಿಲ್ಲ. ಅದರಲ್ಲೂ ದೇಶಕ್ಕೆ ಬೆಳಕನ್ನು ನೀಡಿದ ಸುಪಾ ತಾಲೂಕಿನ ಜನತೆ ಸರ್ವಸ್ವವನ್ನು ಕಳೆದುಕೊಂಡರೂ ಅವರಿಗೆ ಮೂಲಭೂತ ಸೌಲಭ್ಯವನ್ನು ಸರಕಾರ ನೀಡಲಿಲ್ಲ. ಇದು ಅತ್ಯಂತ ದುರಂತದ ಸಂಗತಿಯಾಗಿದೆ.
ಇದರಿಂದಾಗಿ ಜೋಯಿಡಾದ ಜನತೆ ಇನ್ನೂ ಹಿಂದುಳಿಯಲು ಕಾರಣವಾಗಿದೆ. ಜನತೆಗೆ ಬೇಕಾದ ರಸ್ತೆ ಸೇತುವೆ, ವಿದ್ಯುತ್ ಸರಿಯಾಗಿ ಇಲ್ಲದ ಕಾರಣ ಜನತೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಿಂದೆ ಸುಪಾದ ಕಾಳಿ ನದಿಗೆ ಕಟ್ಟಲಾದ ಜಲಾಶಯದಲ್ಲಿ 47 ಹಳ್ಳಿಗಳು ಮುಳುಗಡೆಯಾದವು. ಇಲ್ಲಿನ ಹಳ್ಳಿಗಳ ರಸ್ತೆ, ಸೇತುವೆ ಮುಳುಗಿದವು. ಆದರೆ ಕರ್ನಾಟಕ ವಿದ್ಯುತ್ ನಿಗಮ ಇವುಗಳನ್ನು ಸರಿ ಮಾಡಿಕೊಡಬೇಕಿತ್ತು. ಸರಿಮಾಡಲೇ ಇಲ್ಲ. ಇದರಿಂದ ಗ್ರಾಮಗಳಿಗೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡು ಜನರು ಅತಂತ್ರರಾದರು. ಇಂತವರ ಸಮಸ್ಯೆಗೆ ಅಧಿಕಾರಿಗಳು ಸಭೆ ನಡೆಸಿದರೂ ಅವೆಲ್ಲ ಕಡತಗಳಾದವು ವಿನಃ ಕೆಲಸ ಆಗಲೇ ಇಲ್ಲ. ಹೀಗಾಗಿ ಬಜರಾಕುಣಂಗ ಮತ್ತು ಕಾತೇಲಿ ಮತ್ತು ಅಣಶಿ ಗ್ರಾಪಂಗಳ ಹಲವಾರು ಹಳ್ಳಿಗಳಿಗೆ ಮಳೆಗಾಲ ಬಂತೆಂದರೆ ಶಾಪ ಕಾಡಿದಂತಹ ಅನುಭವ ಆಗುತ್ತದೆ. ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಸರಕಾರಿ ಕೆಲಸ, ರೇಷನ್ ಎಲ್ಲದಕ್ಕೂ ತಿಲಾಂಜಲಿ ಇಡಬೇಕಾದ ಸ್ಥಿತಿ ಇನ್ನೂ ಇದೆ.
ಕಳೆದ 40 ವರ್ಷಗಳ ಹಿಂದೆ ಸ್ಥಳೀಯ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣವಿಲ್ಲದೆ ಬೃಹತ್ ಯೋಜನೆಗಳ ನಿರ್ಮಾಣದ ಮಾಹಿತಿ ತಿಳಿದಿರಲಿಲ್ಲ. ಈಗ ವಿದ್ಯಾರ್ಥಿಗಳಿಗೆ ಯೋಜನೆಗಳ ಬಗ್ಗೆ ತಿಳಿಯುವ ತಿಳುವಳಿಕೆ ಬಂದಿದೆ. ಆದರೆ ಈಗಾಗಲೇ ಅರಣ್ಯ ಇಲಾಖೆಯ ಹಲವಾರು ಯೋಜನೆಗಳಿಂದ ನಾಗರಿಕರು ತಮಗೆ ಇರುವ ಸೌಲಭ್ಯಗಳನ್ನು ಬಳಸಿಕೊಳ್ಳಲು ಕೂಡ ಇಲಾಖೆ ಅಡ್ಡಗಾಲು ಹಾಕುತ್ತಿರುವುದು ಜನತೆಯ ಅಭಿವೃದ್ಧಿಗೆ ಹಿನ್ನಡೆ ಆಗುವಂತಾಗಿದೆ. ಕುಡಿಯುವ ನೀರು, ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ಕೆಲವು ಇಲಾಖೆಗಳು ತಡೆ ನೀಡುತ್ತಿರುವ ಕಾರಣ ಸ್ಥಳೀಯ ಆಡಳಿತ ಕೂಡ ನಿಸ್ತೇಜವಾಗಿದೆ.ಜನತೆ ಬದುಕಲು ಸರಕಾರ ಮೂಲಭೂತ ವ್ಯವಸ್ಥೆ ಮಾಡಿಕೊಡಬೇಕಾಗಿದೆ. ಇದಕ್ಕೆ ಎಲ್ಲ ಇಲಾಖೆಗಳೂ ಜವಾಬ್ದಾರರು ಎಂದು ಹಿಂದೆ ತಾಲೂಕಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಡಿಗ್ಗಿಯಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ ಗಂಗೂ ಬಾಯಿ ಮಾನಕರ ಹೇಳಿದ್ದರು. ಆದರೆ ಅವರು ಮಂಜೂರು ಮಾಡಿದ ಯಾವ ಕೆಲಸಗಳೂ ಆಗಿಲ್ಲ. ಪಡಿತರ ಅಂಗಡಿ ಕೂಡ ಆಗದೇ ಇರುವುದು ಅಧಿಕಾರಿಗಳ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಬಜಾರಕುಣಂಗದಿಂದ ಕರಂಜೆ ಗ್ರಾಮಕ್ಕೆ ಹೋಗಲು ಕಾಲುಸಂಕ ದಾಟಿ ಮಣ್ಣಿನ ರಾಡಿ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಜನತೆ ಹೋಗುವುದನ್ನು ಅಧಿಕಾರಿಗಳು ಜನಪ್ರತಿನಿಧಿಗಳು ನೋಡಬೇಕು, ಅಂದಾಗ ಮಾತ್ರ ಜೀವನದ ಅರ್ಥ ತಿಳಿಯಲು ಸಾಧ್ಯ. ನಮಗೆ ತಾಲೂಕಾ ಕೇಂದ್ರದಿಂದ ಡಿಗ್ಗಿ ವರೆಗೆ ಸರ್ವಋತು ರಸ್ತೆ, ಸೇತುವೆ, ವಿದ್ಯುತ್, ಸಾರಿಗೆ ವ್ಯವಸ್ಥೆ ಮಾಡಿ ಕೊಡಲಿ ಸಾಕು ಎಂದು ಡಿಗ್ಗಿಯ ಯುವಕ ರಾಹುಲ್.