ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ಮಾನವ ತನ್ನ ಸ್ವಹಿತಾಸಕ್ತಿಗಾಗಿ ದಿನೇ ದಿನೇ ಅಭಿವೃದ್ಧಿ ಹೆಸರಿನಲ್ಲಿ ಕಾಡುಗಳನ್ನು ನಾಶಪಡಿಸಿ ಕಾಂಕ್ರೀಟ್ ಕಾಡನ್ನು ನಿರ್ಮಾಣ ಮಾಡಲು ಹೊರಟಿರುವುದರಿಂದ ಇನ್ನಿಲ್ಲದ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಪ್ರತಿಯೊಬ್ಬ ನಾಗರಿಕನೂ ತನ್ನ ಸುತ್ತಮುತ್ತಲಿನ ಪರಿಸರ ಕಾಪಾಡುತ್ತೇನೆ ಎನ್ನುವಂತಹ ಸಂಕಲ್ಪ ಮಾಡಿದಲ್ಲಿ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು.ನಗರದ ಹೊರವಲಯದ ತಾಪಂ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಕೋಲಾರ, ತಾಲೂಕು ಪಂಚಾಯಿತಿ ಕೆಜಿಎಫ್ ಇವರ ಸಹಯೋಗದಲ್ಲಿ ಆಸರ್ ಹಾಗೂ ಗ್ರಾಮ ವಿಕಾಸ ಯೋಜನೆಯಡಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹವಾಮಾನ ಬದಲಾವಣೆ ಹಾಗೂ ಹವಾಮಾನ ಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರದ ಕುರಿತು ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ಗ್ರಾಪಂಗಳ ಪ್ರಮುಖ ಪಾತ್ರ ಪರಿಸರ ಸಂರಕ್ಷಣೆಯಲ್ಲಿ ವಿಶೇಷವಾಗಿ ಗ್ರಾಮ ಪಂಚಾಯಿತಿಗಳಿಗೆ ಅತಿ ಹೆಚ್ಚಿನ ಪಾತ್ರವಿದ್ದು, ರಾಜ್ಯದ ಮುಖ್ಯಮಂತ್ರಿಗೂ ಚೆಕ್‌ಗೆ ಸಹಿ ಹಾಕುವ ಅಧಿಕಾರವಿಲ್ಲ. ಆದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರಿಗೆ ಗ್ರಾಮಗಳ ವಿಕಾಸಕ್ಕಾಗಿ ವಿವಿಧ ಯೋಜನೆಗಳಡಿಯಲ್ಲಿ ಕೋಟ್ಯಂತರ ರೂಗಳನ್ನು ಚೆಕ್ ಮೂಲಕ ಡ್ರಾ ಮಾಡುವ ಅಧಿಕಾರವನ್ನು ಪಡೆದುಕೊಂಡಿದ್ದು, ಇದೆಲ್ಲವೂ ಅಧಿಕಾರ ವಿಕೇಂದ್ರೀಕರಣದ ಫಲವಾಗಿದೆ ಎಂದರು. ನಿವೃತ್ತ ಓಂಬುಡ್ಸ್‌ಮನ್ ಶ್ರೀರಾಮಯ್ಯ ಮಾತನಾಡಿ, ಅಭಿವೃದ್ಧಿ ಹೆಸರಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುವ ಭರಾಟೆಯಲ್ಲಿ ಗ್ರಾಮಗಳ ಜೀವನಾಡಿಯಾಗಿರುವ ಕೆರೆಗಳ ಅಸ್ಥಿತ್ವವನ್ನು ಬರಿದು ಮಾಡುವ ಮೂಲಕ ಕೆರೆಗಳ ಚಿತ್ರಣವನ್ನೇ ಬದಲಾವಣೆ ಮಾಡುತ್ತಿರುವುದು ವಿಷಾದನೀಯ ಎಂದರು.
ಕೆರೆಗಳ ಪುನಶ್ಚೇತನಕ್ಕೆ ಆದ್ಯತೆಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ರೂಪಕಲಾ ಶಶಿಧರ್, ಕೆರೆಗಳ ಪುನಃಶ್ಚೇತನ ಕಾರ್ಯವನ್ನು ಆದ್ಯತೆಯ ಮೇರೆಗೆ ನಿರ್ವಹಿಸಲಾಗುವುದು. ಯಾವುದೇ ಕಾರಣಕ್ಕೂ ಜನವಸತಿಯಿರುವ ಗ್ರಾಮಗಳ ಸನಿಹ ಮತ್ತು ಶಾಲೆಗಳ ಸನಿಹದಲ್ಲಿ ಕೆರೆಗಳಿದ್ದಲ್ಲಿ ಅವುಗಳಲ್ಲಿ ರಸ್ತೆಗಳಿಗೆ ಕೆರೆಯ ಮಣ್ಣನ್ನು ತೆಗೆಯಲು ಸಂಬಂಧಪಟ್ಟ ಅಧಿಕಾರಿಗಳು ಅನುಮತಿ ನೀಡಬಾರದು ಎಂದು ತಾಕೀತು ಮಾಡಿದರು. ಗ್ರಾಮ ವಿಕಾಸ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಿ.ಎನ್.ರಾವ್ ಮಾತನಾಡಿ, ಸ್ಥಳೀಯ ಸರ್ಕಾರಗಳಾಗಿರುವ ಗ್ರಾಮ ಪಂಚಾಯಿತಿಗಳು ಇಂದಿನಿಂದಲೇ ಕಟ್ಟುನಿಟ್ಟಾಗಿ ಪರಿಸರವನ್ನು ಉಳಿಸುವ ಕಾರ್ಯವನ್ನು ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪಾರಂಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈ.ವಾಣಿ ಶ್ರೀನಿವಾಸ್, ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಹರ್ತಿ, ಆಸರ್ ಯೋಜನೆ ಮತ್ತು ಕಾರ್ಯಾಚರಣೆ ವ್ಯವಸ್ಥಾಪಕ ಕೆ.ಸುದೀಪ್, ನಿವೃತ್ತ ಓಂಬುಡ್ಸ್‌ಮನ್ ಶ್ರೀರಾಮಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಎಸ್.ಹೆಚ್.ಚೌಡಪ್ಪ, ರಾಜಾ ಹುಣಸೂರು ಇದ್ದರು.