ಸಾರಾಂಶ
ಶಿರಸಿ: ಯುವಕರು ಕೃಷಿಯಿಂದ ವಿಮುಖರಾದರೆ, ಸಮಾಜದಲ್ಲಿ ಅನೇಕ ಸಮಸ್ಯೆ ಬೆಳೆಯಲು ಕಾರಣವಾಗುತ್ತದೆ. ಹೊಸ ತಲೆಮಾರಿನ ಕೃಷಿಕರಿಲ್ಲದಿದ್ದರೆ ಸಹಕಾರಿ ಸಂಸ್ಥೆಗಳು ನೆಲೆ ಕಳೆದುಕೊಳ್ಳುತ್ತವೆ. ಯುವ ಜನಾಂಗ ನಗರದತ್ತ ವಲಸೆ ಹೋಗುತ್ತಿರುವುದನ್ನು ತಡೆಗಟ್ಟುವುದು ಎಲ್ಲ ದೃಷ್ಟಿಯಿಂದ ಒಳ್ಳೆಯದು ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.ಬುಧವಾರ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ೨ ದಿನ ಹಮ್ಮಿಕೊಂಡ ಕೃಷಿ ಜಯಂತಿ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಕೃಷಿಕರಿಗೆ ಸರ್ಕಾರದ ಎಲ್ಲ ಘೋಷಣೆಗಳು ಅನುಕೂಲವಾದರೂ ಯುವಕರು ಕೃಷಿಯತ್ತ ಆಸಕ್ತಿ ವಹಿಸದಿದ್ದರೆ ಸಹಕಾರಿ ಕ್ಷೇತ್ರ ದುರ್ಬಲವಾಗುತ್ತದೆ. ಕೃಷಿಯಿಂದ ದೂರವಾಗುತ್ತಿರುವುದರಿಂದ ಸಂಸ್ಕಾರ, ಸಂಸ್ಕೃತಿ ಅವನತಿಯತ್ತ ಸಾಗುತ್ತದೆ. ವಿದೇಶಕ್ಕೆ ತೆರಳಿದ ಕೆಲವರು ಆಚರಣೆಗಳನ್ನು ಬಿಟ್ಟಿದ್ದಾರೆ. ಕೆಲವಷ್ಟರಲ್ಲಿ ಇದ್ದರೂ ಮುಂದಿನ ತಲೆಮಾರಿಗೆ ಖಂಡಿತ ಇರುವುದಿಲ್ಲ. ಸಾಮೂಹಿಕ ಆಚರಣೆಗಳಿಂದ ಸಂಸ್ಕಾರ, ಸಂಸ್ಕೃತಿ ಗಟ್ಟಿಯಾಗಿತ್ತದೆ. ಕೃಷಿಯಿಂದ ದೂರವಾದರೆ ಹಳ್ಳಿಗಳು ಬರಿದಾಗಲಿದೆ ಎಂದ ಕಳವಳ ವ್ಯಕ್ತಪಡಿಸಿದ ಶ್ರೀಗಳು, ಭಕ್ತಿ ಚೆನ್ನಾಗಿ ಬೆಳೆದರೆ ಎಲ್ಲವನ್ನು ಮಾಡಬಲ್ಲದು. ಭಗವಂತನೂ ಅನುಗ್ರಹ ಮಾಡುತ್ತಾನೆ ಎಂದು ಶಂಕರ ಭಗವತ್ಪಾದರು ಹೇಳಿದ್ದರು. ಭಕ್ತರ ಭಕ್ತಿಯೇ ಪ್ರೇರಕವಾಗಿರುತ್ತದೆ ಎಂದರು.ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮ ಸಾಧನೆಗೆ ಕೃಷಿಯು ಮೂಲ ಕಾರಣ. ಭಾರತ ಸಂಸ್ಕೃತಿ ಕೃಷಿಯ ಹತ್ತಿರದ ಸಂಬಂಧ ಹೊಂದಿದೆ. ಕೃಷಿ ಸಂಸ್ಕೃತಿ ನಡೆದರೆ ಧಾರ್ಮಿಕ ಸಂಸ್ಕೃತಿ ಉಳಿಯುತ್ತದೆ. ಅಜ್ಞಾನವನ್ನು ನಾಶ ಮಾಡಿಕೊಳ್ಳಲು ಇಚ್ಛಿಸಬೇಕು. ಮನುಷ್ಯನ ಧರ್ಮ ಸಾಧನೆಗೆ ಈ ಶರೀರ ಅತ್ಯಂತ ಅವಶ್ಯ ಎಂದರು.ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಕೃಷಿ ಗ್ರಾಮ ಯೋಜನೆಯ ಮೂಲಕ ವಯಸ್ಸಾದ ರೈತ ಕುಟುಂಬದ ಭೂಮಿ ಉಳುಮೆಗೆ ಟಿಎಸ್‌ಎಸ್ ನೆರವಾಗಲಿದೆ. ಸಹಕಾರಿಯಲ್ಲಿ ಕಳಂಕಿತರನ್ನು ಸರಿದಾರಿಗೆ ತರಬೇಕಾಗಿದೆ ಎಂದರು.ಶ್ರೀಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ಕಾರ್ಯದರ್ಶಿ ಜಿ.ವಿ. ಹೆಗಡೆ, ಆರ್.ಎನ್. ಹೆಗಡೆ ಉಳ್ಳಿಕೊಪ್ಪ ಮತ್ತಿತರರು ಇದ್ದರು. ಸುರೇಶ ಹೆಗಡೆ ಹಕ್ಕಿಮನೆ ನಿರೂಪಿಸಿದರು.