ಗುರುವಾರ ನಿಧನರಾದ ಎನ್.ವಿನಯ್ ಹೆಗ್ಡೆ ಅವರ ಆದರ್ಶ ಜೀವನ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿ ಉಳಿಯಲಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

ಕಾರ್ಕಳ: ವಿನಯ ಹೆಗ್ಡೆ ಅವರು ಶಿಕ್ಷಣವೆಂಬ ಯಜ್ಞದಲ್ಲಿ ಸಮಿದೆಯಂತೆ ಉರಿದು ಸಾವಿರಾರು ಮಂದಿಯ ಬಾಳಲ್ಲಿ ಬೆಳಕಾದವರು, ಕಾರ್ಕಳದ ನಿಟ್ಟೆ ಗ್ರಾಮದ ಹೆಸರನ್ನು ವಿಶ್ವದಾದ್ಯಂತ ಹರಡುವಂತೆ ಮಾಡಿದವರು. ಅವರ ಆದರ್ಶ ಜೀವನ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿ ಉಳಿಯಲಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.

ನಿಟ್ಟೆ ವಿದ್ಯಾಸಂಸ್ಥೆಗಳು, ನಿಟ್ಟೆ ವಿವಿ, ಲೆಮಿನಾ ಇಂಡಸ್ಟ್ರಿಯ ಮೂಲಕ ಸಾವಿರಾರು ಮಂದಿಗೆ ಅನ್ನ ನೀಡಿದ ಅನ್ನದಾತ, ಆರೋಗ್ಯ, ಧಾರ್ಮಿಕ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ ಕೊಡುಗೈ ದಾನಿ, ಅವರ ನಿಧನವು ಶಿಕ್ಷಣ, ಆರೋಗ್ಯ, ಸಮಾಜ ಸೇವೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ತುಂಬಲಾರದ ನಷ್ಟವಾಗಿದ್ದು, ಅವರ ಸೇವೆ ಮತ್ತು ಸಾಧನೆಗಳು ಸದಾ ಸ್ಮರಣೀಯವಾಗಿವೆ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.ಗುರ್ಮೆ ನುಡಿ ನಮನ:

ಸಮಾಜ ಸೇವಕರು, ಶಿಕ್ಷಣ ತಜ್ಞರು, ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ನಿಟ್ಟೆ ವಿನಯ ಹೆಗ್ಡೆ ಅವರಿಗೆ ಶಿರ್ವ ವಿಧ್ಯಾವರ್ಧಕ ಸಂಘದ ವತಿಯಿಂದ ನಡೆದ ಶೃದ್ಧಾಂಜಲಿ ಸಭೆಯಲ್ಲಿ ಕಾಪು ಶಾಸಕ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ನುಡಿ ನಮನ ಸಲ್ಲಿಸಿದರು.

ಈ ಸಂದರ್ಭ ಸಂಘ ಸಂಚಾಲಕ ಮಟ್ಟಾರು ರತ್ನಾಕರ್ ಹೆಗ್ಡೆ, ಸದಸ್ಯರಾದ ನಿತ್ಯಾನಂದ ಹೆಗ್ಡೆ, ಜಗದೀಶ್ ಅರಸ್, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಆಡಳಿತಾಧಿಕಾರಿ ವೈ, ಭಾಸ್ಕರ್ ಶೆಟ್ಟಿ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪಲಿಮಾರು ಶ್ರೀ ಸಂತಾಪ:

ನಿಟ್ಟೆ ವಿನಯ ಹೆಗ್ಜೆ ಸಮಾಜ ಸೇವೆ, ದೇಶ ಸೇವೆ, ದೇವರ ಸೇವೆ ಪ್ರಶ್ನಾತೀತವಾದುದು. ಅವರ ಆತ್ಮಕ್ಕೆ ಸದ್ಗತಿ ನೀಡುವಂತೆ ತಾವು ಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥನೆ ಮಾಡುವುದಾಗಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

2003ರ ತಮ್ಮ ಪರ್ಯಾಯದ ಸಂದರ್ಭದಲ್ಲಿ ಹಿಂದೂ ಸಮಾಜೋತ್ಸವಕ್ಕೆ ಸರ್ಕಾರದ ವಿರೋಧದಿಂದಾಗಿ ಯಾರೂ ಅಧ್ಯಕ್ಷತೆ ವಹಿಸಲು ಸಿದ್ದರಿಲ್ಲದಿದ್ದಾಗ, ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿ ಸಮಾಜೋತ್ಸವ ಯಶಸ್ವಿಯಾಗುವಂತೆ ಮಾಡಿದ್ದರು ಎಂದು ಶ್ರೀಗಳು ನೆನಪಿಸಿಕೊಂಡಿದ್ದಾರೆ.