ಕನ್ನಡಪ್ರಭ ವಾರ್ತೆ ಬೆಂಗಳೂರು

ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ ಜೈಲಿನ ಅಧಿಕಾರಿಗಳು 16110 ಸಜಾ ಕೈದಿ ಸಂಖ್ಯೆ ನೀಡಿದ್ದಾರೆ.

ಯೋಗೇಶ್‌ಗೌಡ ಕೊಲೆ ಪ್ರಕರಣದ ಸಂಬಂಧ ಶುಕ್ರವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಲ್ಲದೆ ಒಬ್ಬ ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ಅಪರಾಧಿಗಳನ್ನು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಯಿತು.ಮಂಕಾಗಿದ್ದ ವಿನಯ್‌ ಕುಲಕರ್ಣಿ:

ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿಯೇ ವಿನಯ್‌ ಕುಲಕರ್ಣಿ ಕಣ್ಣೀರು ಹಾಕಿದ್ದರು. ಜೈಲಿಗೆ ಹೋದ ಬಳಿಕ ಮಂಕಾಗಿದ್ದರು. ಯಾರೊಂದಿಗೂ ಹೆಚ್ಚು ಮಾತನಾಡದೆ ಮೌನಕ್ಕೆ ಶರಣಾಗಿದ್ದರು. ಜೈಲಿನ ಮೆನುವಿನ ಪ್ರಕಾರ ಶುಕ್ರವಾರ ರಾತ್ರಿ ನೀಡಿದ ಊಟ ತಿಂದರು. ತಡರಾತ್ರಿವರೆಗೂ ನಿದ್ದೆ ಮಾಡದೆ ಜೀವನ ಹೀಗೆ ಆಗಿ ಹೊಯ್ತಲ್ಲಾ ಎಂದು ಚಿಂತಾಕ್ರಾಂತರಾಗಿದ್ದರು ಎಂದು ಮೂಲಗಳು ತಿಳಿಸಿವೆ.

19ನೇ ಅಪರಾಧಿಯಾಗಿರುವ ಪೊಲೀಸ್‌ ಅಧಿಕಾರಿ ಆಗಿದ್ದ ಚನ್ನಕೇಶವ ಬಿ.ಟಿಂಗರಿಕರ್ ಅವರನ್ನು ಪ್ರತ್ಯೇಕ ಬ್ಯಾರಕ್‌ನಲ್ಲಿ ಇರಿಸಲಾಗಿದೆ. ವಿನಯ್‌ ಕುಲಕರ್ಣಿ ಅವರನ್ನು ಕೂಡ ಪ್ರತ್ಯೇಕ ಬ್ಯಾರಕ್‌ನಲ್ಲಿರಿಸಲು ಜೈಲಿನ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇನ್ನು ಶನಿವಾರ ಎಲ್ಲ ಅಪರಾಧಿಗಳಿಗೆ ಸಜಾ ಕೈದಿ ಸಂಖ್ಯೆ ನೀಡಲಾಗಿದೆ. ಜತೆಗೆ ಜೈಲಿನ ಸಮವಸ್ತ್ರ ವಿತರಿಸಲಾಗಿದೆ. ಅದನ್ನು ಧರಿಸಿದ ಅಪರಾಧಿಗಳು ಜೈಲಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.ವಿನಯ್ ಕುಲಕರ್ಣಿ ಹಾಗೂ ಸಹ ಅಪರಾಧಿಗಳ ಸಜಾ ಬಂಧಿ ಸಂಖ್ಯೆ:1) ವಿಕ್ರಂ ಬಳ್ಳಾರಿ- CTP 160972) ಕೀರ್ತಿ ಕುಮಾರ್ ಬೆಳ್ಳಟ್ಟಿ- CTP 160983) ಸಂದೀಪ್ ಸವದತ್ತಿ- CTP 160994) ವಿನಾಯಕ ಕಟಗಿ- CTP 161005) ಮಹಾಬಲೇಶ್ವರ ಹೊಂಗಳೇ- CTP 161016) ಸಂತೋಷ ಸವದತ್ತಿ-CTP 161027) ದಿನೇಶ್-CTP 161038) ಅಶ್ವಥ್-CTP 161049) ಸುನಿಲ್-CTP 1610510) ನಜೀರ್ ಅಹ್ಮದ್- CTP 1610611) ಶನವಾಜ್- CTP 1610712) ನೂತನ್ -CTP 1610813) ಹರ್ಷೀತ್ -CTP 1610914) ವಿನಯ್ ಕುಲಕರ್ಣಿ- 16110


15) ಚಂದ್ರಶೇಖರ್ ಇಂಡಿ- CTP 1611116) ವಿಕಾಸ್ ಕಲಬುರ್ಗಿ- CTP 1611217) ಚನ್ನಕೇಶವ ಟಿಂಗರಿಕರ್- CTP 16113.

ಕೋರ್ಟ್‌ ಆದೇಶ ಪ್ರತಿ ತಲುಪಿದ ಬಳಿಕ ವಿನಯ್‌ ಶಾಸಕತ್ವ ರದ್ದು?:ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಾಸಕ ವಿನಯ್‌ ಕುಲಕರ್ಣಿಗೆ ಶಿಕ್ಷೆ ಪ್ರಕಟ ಆದೇಶ ವಿಧಾನಸಭೆ ಸಚಿವಾಲಯಕ್ಕೆ ಅಧಿಕೃತವಾಗಿ ಲಭಿಸಿಲ್ಲ. ಹೀಗಾಗಿ ಅವರ ಶಾಸಕತ್ವದ ಕುರಿತು ವಿಧಾನಸಭೆ ಸಚಿವಾಲಯದಿಂದ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.ಅಧಿಕೃತವಾಗಿ ಆದೇಶದ ಪ್ರತಿ ಲಭ್ಯವಾದ ನಂತರ ಕಾನೂನಿನಂತೆ ಅವರ ಶಾಸಕತ್ವ ರದ್ದಾಗಲಿದೆ ಎಂದು ಸಚಿವಾಲಯದ ಮೂಲಗಳು ಹೇಳುತ್ತವೆ.ಜಿಪಂ ಮಾಜಿ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ ವಿನಯ್‌ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಆ ಹಿನ್ನೆಲೆಯಲ್ಲಿ ಅವರ ಶಾಸಕತ್ವ ರದ್ದಾಗಬೇಕಿದೆ. ಆದರೆ, ನ್ಯಾಯಾಲಯದ ಅಧಿಕೃತ ಆದೇಶ ವಿಧಾನಸಭೆ ಸಚಿವಾಲಯಕ್ಕೆ ತಲುಪಿಲ್ಲ. ಹೀಗಾಗಿ ಅವರ ಶಾಸಕ ಸ್ಥಾನದ ಕುರಿತು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು, ವಿಧಾನಸಭೆ ಸಚಿವಾಲಯವು ನ್ಯಾಯಾಲಯದ ಆದೇಶ ಕೈ ಸೇರಿದ ನಂತರ ಶಾಸಕ ಸ್ಥಾನ ಅನರ್ಹ ಎಂದು ಆದೇಶ ಹೊರಡಿಸದೆ 224 ಶಾಸಕ ಸ್ಥಾನದಲ್ಲಿ ಒಂದು ಸ್ಥಾನ ಖಾಲಿಯಿದೆ ಎಂದು ಸುತ್ತೋಲೆ ಹೊರಡಿಸಲಿದೆ. ಒಂದು ವೇಳೆ ವಿನಯ್ ಕುಲಕರ್ಣಿ ಕುರಿತು ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿ ತಡೆಯಾಜ್ಞೆ ಬಂದರೆ ವಿಧಾನಸಭೆ ಸಚಿವಾಲಯದಿಂದ ಹೊರಡಿಸಲಾದ ಆದೇಶ ಹಿಂಪಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ.