ತಾವು ಈಗಾಗಲೇ ಏಳು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ, ಮುಂದೆ ಎಲ್ಲ ಜಿಲ್ಲೆಗಳಿಗೂ ಭೇಟಿ ಇತ್ತು ಮಾಹಿತಿ ಸಂಗ್ರಹಿಸಿ, ಕಾರ್ಯಕ್ರಮ ರೂಪಿಸುವೆ.

ಕನ್ನಡಪ್ರಭ ವಾರ್ತೆ ಹುಣಸೂರು

ಪ್ರತಿ ಜಿಲ್ಲೆಗಳಲ್ಲೂ ಬೋವಿ ಅಭಿವೃದ್ದಿ ನಿಗಮದ ಶಾಶ್ವತ ಕಚೇರಿಗಳನ್ನು ಸ್ಥಾಪಿಸಿ, ಸಮುದಾಯದ ಯುವ ಜನರಿಗೆ ಅಗತ್ಯ ಕೌಶಲ್ಯ ತರಬೇತಿ ನೀಡಲಾಗುವುದೆಂದು ರಾಜ್ಯ ಬೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ತಿಳಿಸಿದರು.

ತಾಲೂಕಿನ ವಿನೋಬಾ ಕಾಲೋನಿಯಲ್ಲಿ ತಾಲೂಕು ಬೋವಿ ಸಮಾಜದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ತಾವು ಈಗಾಗಲೇ ಏಳು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ, ಮುಂದೆ ಎಲ್ಲ ಜಿಲ್ಲೆಗಳಿಗೂ ಭೇಟಿ ಇತ್ತು ಮಾಹಿತಿ ಸಂಗ್ರಹಿಸಿ, ಕಾರ್ಯಕ್ರಮ ರೂಪಿಸುವೆ. ಜ. 17-18 ರಂದು ಬೆಂಗಳೂರಿನ ಜ್ಞಾನ ಭಾರತಿಯಲ್ಲಿ 300ಕ್ಕೂ ಹೆಚ್ಚುಮಂದಿ ಯುವ ಪಡೆಗೆ ವಿವಿಧ ಕೌಶಲ್ಯ ಕುರಿತು ತರಬೇತಿ ನೀಡಲಾಗುತ್ತಿದ್ದು, ನೊಂದಾಯಿಸಿಕೊಳ್ಳಿ, ಇದೇ ಮಾದರಿ ರಾಜ್ಯಾದ್ಯಂತ ವಿಸ್ತರಿಸಲಾಗುವುದೆಂದು ತಿಳಿಸಿದರು.

ನಿಗಮದ ವತಿಯಿಂದ ಭೂರಹಿತ ಮಹಿಳೆಯರಿಗೆ ಭೂಒಡೆತನ ಕಲ್ಪಿಸುವುದು, ಗಂಗಾ ಕಲ್ಯಾಣ ಯೋಜನೆಗೆ ಆದ್ಯತೆ ನೀಡುವೆ, ಕಾರು ಸೌಲಭ್ಯಕ್ಕಿಂತ ಕುಲಕಸುಬಿಗೆ ಅನುಕೂಲವಾಗುವಂತೆ ಯಂತ್ರೋಪಕರಣಗಳು, ಟ್ರ್ಯಾಕ್ಟರ್, ಗೂಡ್ಸ್ ವ್ಯಾನ್‌ಖರೀದಿಗೆ, ಹೈನುಗಾರಿಕೆಗೆ ಪ್ರೋತ್ಸಾಹ, ಮಹಿಳಾ ಸ್ವಸಹಾಯಸಂಘಕ್ಕೆ ಐದು ಲಕ್ಷ ರು. ಸಾಲಸೌಲಭ್ಯ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಯೋಜನೆಯನ್ನು ಸದ್ವಿನಿಯೋಗ ಮಾಡಿಕೊಳ್ಳಿರೆಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೋವಿ ಅಭಿವೃಧ್ದಿ ನಿಗಮ ಸ್ಥಾಪಿಸುವ ಮೂಲಕ ಸಮುದಾಯಕ್ಕೆ ದೊಡ್ಡಕೊಡುಗೆ ನೀಡಿದ್ದಾರೆಂದು ಸ್ಮರಿಸಿ, ಸಮಾಜಕ್ಕೆ ನೆರವಾದವರ ಬೆಂಬಲಕ್ಕೆ ನಿಲ್ಲಬೇಕೆಂದು ಆಶಿಸಿ, ಅಂಬೇಡ್ಕರರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಸಮುದಾಯ ಜಾಗೃತರಾಗಬೇಕೆಂದು ಆಶಿಸಿ, ಸಮುದಾಯದ ಪರವಾಗಿರುವ ಮಾಜಿ ಶಾಸಕ ಎಚ್.ಪಿ. ಮಂಜುನಾಥ್‌ ಅವರನ್ನು ಸದಾ ಬೆಂಬಲಿಸಿ ಎಂದರು.

28ಕ್ಕೆ ಸಿದ್ದರಾಮೋತ್ಸವ ಸಮಾವೇಶ

ಮೈಸೂರಿನ ಕಲಾಮಂದಿರದಲ್ಲಿ ಜ. 28ಕ್ಕೆ ಸಿದ್ದರಾಮೋತ್ಸವ ಸಮಾವೇಶ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂತ್ರಿ ಶಿವರಾಜ ತಂಗಡಗಿ, ಸಮಾಜದ ಸ್ವಾಮೀಜಿ ಭಾಗವಹಿಸಲಿದ್ದು, ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.

ಸಮುದಾಯ ಭವನಗಳಿಗೆ 35 ಲಕ್ಷ

ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ದೇವರಾಜ ಅರಸರ ಕನಸಿನ ವಿನೋಬಾ ಕಾಲೋನಿಯು ನನ್ನೂರು ಎಂದು ಭಾವಿಸಿ ಗ್ರಾಮಸ್ಥರ ಬೇಡಿಕೆಯಂತೆ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಇದೀಗ ವಿನೋಬಾ ಕಾಲೋನಿಯ ಭೋವಿ ಸಮುದಾಯ ಭವನಕ್ಕೆ ಸರ್ಕಾರದಿಂದ 15 ಲಕ್ಷ, ಹೊನ್ನಿಕುಪ್ಪೆ, ಮೂಕನಹಳ್ಳಿ ಸಮುದಾಯಭವನಕ್ಕೆ ತಲಾ 10 ಲಕ್ಷ ರು. ಸೇರಿದಂತೆ 35 ಲಕ್ಷ ರು. ಅನುದಾನವನ್ನು ಮುಖ್ಯಮಂತ್ರಿ, ಜಿಲ್ಲಾಮಂತ್ರಿಯವರು ಬಿಡುಗಡೆ ಮಾಡಿದ್ದಾರೆಂದು ಘೋಷಿಸಿ, ಮುಂದೆಯೂ ಸಮುದಾಯದ ಪರವಾಗಿನಿಲ್ಲುವೆ. ಕಳೆದ ಅವಧಿಯಲ್ಲಿ ಸಣ್ಣ ನೀರಾವರಿ ಮಂತ್ರಿಯಾಗಿದ್ದ ಶಿವರಾಜ್‌ ತಂಗಡಗಿ ಅವರ ಸಹಕಾರದಿಂದ ತಾಲೂಕಿಗೆ ಏಳು ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು, ಸದಾ ಕೃತಜ್ಞನಾಗಿರುವೆನೆಂದರು.

ಬೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮು, ಗ್ರಾಪಂ ಮಾಜಿ ಅಧ್ಯಕ್ಷ ರಾಮಯ್ಯ, ತಾಪಂ ಮಾಜಿಸದಸ್ಯ ಚಿನ್ನವೀರಯ್ಯ, ಮುಖಂಡರಾದ ಕುನ್ನೇಗೌಡ, ಕುಪ್ಪುಸ್ವಾಮಿ, ಗಣೇಶ್, ಸುಧಾಕರ್ ಮಾತನಾಡಿದರು.

ಕಾಂಗ್ರೆಸ್ ಅಧ್ಯಕ್ಷ ರವಿಪ್ರಸನ್ನ, ಪ್ರೇಮಕುಮಾರ್, ಬಾಲ ಸುಂದರ್, ಬೋವಿ ಸಮಾಜದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಪಿ.ಈರಯ್ಯ, ಉಮಾಶಂಕರ್, ಅಜ್ಗರ್ ಪಾಷಾ, ಟಿ ಕೃಷ್ಣ, ಶಿವಲಿಂಗಪ್ಪ, ನಾಗರಾಜ್, ಮಹದೇವ, ತಿಮ್ಮರಸ, ದೇವರಾಜ್, ತಿಮ್ಮರಾಜು, ರಾಮಣ್ಣ, ವೆಂಕಟೇಶ್, ಶೇಖರ್ ಇದ್ದರು.