ಬೈಲಹೊಂಗಲನಗರದ ಕಿತ್ತೂರು ಚನ್ನಮ್ಮ ಐಕ್ಯ ಸ್ಥಳದ ಅಭಿವೃದ್ಧಿ, ರಾಕ್ ಗಾರ್ಡನ್‌ ನಿರ್ಮಾಣದ ₹5 ಕೋಟಿ ಕಾಮಗಾರಿಯನ್ನು ಶಿಷ್ಟಾಚಾರದ ಮೂಲಕ ಕಾರ್ಯಕ್ರಮ ಆಯೋಜಿಸದೆ, ಯಾರಿಗೂ ಆಮಂತ್ರಣ ನೀಡದೆ ಶಾಸಕ ಮಹಾಂತೇಶ ಕೌಜಲಗಿ ಏಕಮಯವಾಗಿ ನಿರ್ಣಯ ಕೈಕೊಂಡು ಉದ್ಘಾಟಿಸಿದ್ದಾರೆ. ಈ ಮೂಲಕ ವೀರ ಮಾತೆಗೆ ಅವಮಾನ ಮಾಡಿದ್ದಾರೆ. ಶಾಸಕರ ನಿರ್ಧಾರ ಖಂಡಿಸಿ, ಬೈಲಹೊಂಗಲ ಬಂದ್‌ ಕರೆ ನೀಡಿ ಪ್ರತಿಭಟಿಸುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹಾಗೂ ಕಿತ್ತೂರ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಜಂಟಿಯಾಗಿ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ನಗರದ ಕಿತ್ತೂರು ಚನ್ನಮ್ಮ ಐಕ್ಯ ಸ್ಥಳದ ಅಭಿವೃದ್ಧಿ, ರಾಕ್ ಗಾರ್ಡನ್‌ ನಿರ್ಮಾಣದ ₹5 ಕೋಟಿ ಕಾಮಗಾರಿಯನ್ನು ಶಿಷ್ಟಾಚಾರದ ಮೂಲಕ ಕಾರ್ಯಕ್ರಮ ಆಯೋಜಿಸದೆ, ಯಾರಿಗೂ ಆಮಂತ್ರಣ ನೀಡದೆ ಶಾಸಕ ಮಹಾಂತೇಶ ಕೌಜಲಗಿ ಏಕಮಯವಾಗಿ ನಿರ್ಣಯ ಕೈಕೊಂಡು ಉದ್ಘಾಟಿಸಿದ್ದಾರೆ. ಈ ಮೂಲಕ ವೀರ ಮಾತೆಗೆ ಅವಮಾನ ಮಾಡಿದ್ದಾರೆ. ಶಾಸಕರ ನಿರ್ಧಾರ ಖಂಡಿಸಿ, ಬೈಲಹೊಂಗಲ ಬಂದ್‌ ಕರೆ ನೀಡಿ ಪ್ರತಿಭಟಿಸುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹಾಗೂ ಕಿತ್ತೂರ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಜಂಟಿಯಾಗಿ ಕಿಡಿಕಾರಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವು ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಸಿದ ಕಾಮಗಾರಿಯನ್ನು ಯಾರಿಗೂ ತಿಳಿಸದೆ ಉದ್ಘಾಟಿಸಲಾಗಿದೆ. ನಂದಗಡ, ಸಂಗೊಳ್ಳಿ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದಂತೆ ಶಾಸಕರು ಕೂಡಲೇ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜಿಸಿ ಉದ್ಘಾಟನೆಗೆ ಮುಂದಾಗಬೇಕು. ಇಲ್ಲದಿದ್ದರೆ ಜನತೆಯೊಂದಿಗೆ ಚರ್ಚಿಸಿ, ಬೈಲಹೊಂಗಲ ಬಂದ್‌ಗೆ ಕರೆ ನೀಡಿ, ಕರೆದು, ಶಾಸಕರ ಮನೆ ಮುಂದೆ, ಕನ್ನಡಪರ ಸಂಘಟನೆಗಳು, ಸಾರ್ವಜನಿಕರು ಸೇರಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ‌ ಮಾತನಾಡಿ, ಶಾಸಕರು ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿಗಾಗಿ ಆರೋಗ್ಯ ಸಚಿವರನ್ನು ಆಹ್ವಾನಿಸಿದಾಗ ನಾಲ್ಕಾರು ತಮ್ಮ ಕಾರ್ಯಕರ್ತರೊಂದಿಗೆ ಸೇರಿ ಚನ್ಮಮ್ಮಳ ಐಕ್ಯಸ್ಥಳದ, ರಾಕ್ ಗಾರ್ಡನ್ ಉದ್ಘಾಟಿಸಿದ್ದಾರೆ. ಬೈಲಹೊಂಗಲ ತಾಲೂಕಿನಲ್ಲಿಯೇ ಕಾರ್ಯಕ್ರಮದಲ್ಲಿದ್ದ ಈ ಭಾಗದ ಸಂಸದರ ಗಮನಕ್ಕೂ ಈ ವಿಷಯ ತಂದಿಲ್ಲ. ತರಾತುರಿಯಲ್ಲಿ ಕೇವಲ ರಿಬ್ಬನ್‌ ಕಟ್ ಮಾಡಲಾಗಿದೆ. ಇದನ್ನು ತಮ್ಮ ಸ್ವಂತ ಒಡೆತನದ ಸ್ಥಳ ಎಂದು ಶಾಸಕರು ಭಾವಿಸಿದಂತಾಗಿದೆ. ಝಾನ್ಸಿರಾಣಿ ಲಕ್ಷ್ಮೀಬಾಯಿಗಿಂತ ಮೊದಲೆ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಪ್ರಥಮ ಮಹಿಳೆಗೆ ದೇಶಾದ್ಯಂತ ಚನ್ನಮ್ಮಾಜೀ ಪುತ್ಥಳಿ ನಿರ್ಮಿಸಿ ಸಂಭ್ರಮಿಸುವಾಗ ಮಾತೆಯ ಸ್ವಂತ ನೆಲದಲ್ಲೆ ಅವಳಿಗೆ ಗೌರವ ಇಲ್ಲದಾಗಿದೆ. ಇದನ್ನು ಕನ್ನಡಪರ ಸಂಘಟನೆಗಳು, ರೈತ ಪರ ಸಂಘಟನೆಗಳು, ವಿದ್ಯಾರ್ಥಿ ಪರಿಷತಗಳು, ಮಹಿಳಾ ಸಂಘಟನೆಗಳು, ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಿ ಪ್ರತಿಭಟನೆಗೆ ಮುಂದಾಗಿವೆ ಎಂದರು.

ಕಿತ್ತೂರ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಮಾತನಾಡಿ, ನಾಲ್ಕೈದು ದಿನಗಳಲ್ಲಿ ಶಾಸಕರು ಸಾರ್ವಜನಿಕರ ಸಭೆ ಕರೆದು ಚರ್ಚಿಸಿ, ನಾಡಿನ ಪೂಜ್ಯರನ್ನು, ಮುಖ್ಯಮಂತ್ರಿಗಳನ್ನು, ಸಚಿವರು, ಸಂಸದರನ್ನು, ಗಣ್ಯರನ್ನು ಆಹ್ವಾನಿಸಿ ಉದ್ಘಾಟಿಸಬೇಕು. ಇಲ್ಲದಿದ್ದರೆ ನಗರ ಬಂದ್‌ ಮಾಡಿ ಶಾಸಕರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ರಫೀಕ ಬಡೆಘರ ಮಾತನಾಡಿ, ಶಾಸಕರ ನಡೆ ಖಂಡನೀಯ. ವೀರ ಮಾತೆಯ ಐಕ್ಯ ಸ್ಥಳದ ಅಭಿವೃದ್ಧಿಯನ್ನು ಭವ್ಯವಾಗಿ ಉದ್ಘಾಟಿಸಬೇಕಾಗಿತ್ತು. ನಿರ್ಲಕ್ಷಿಸಿದ್ದು, ದೇಶದ ಚನ್ನಮ್ಮಾಜಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ ಎಂದರು.

ಈ ವೇಳೆ ಮುಖಂಡ ರಾಜು ಭರಗೌಡರ, ಸುವರ್ಣ ಕರ್ನಾಟಕ ರೈತಪರ ರಾಜ್ಯಾಧ್ಯಕ್ಷ ರಾಜಪ್ಪ ಪಾಟೀಲ, ಕಿತ್ತೂರ ಕರ್ನಾಟಕ ಸೇನೆಯ ತಾಲೂಕಾಧ್ಯಕ್ಷ ರಾಜು ಬೋಳನ್ನವರ, ಈರಣ್ಣ ಮುನವಳ್ಳಿ, ಚಂದ್ರಯ್ಯ ಪೂಜೇರ ಇತರರು ಇದ್ದರು.