ಸಾರಾಂಶ
ಕನ್ನಡಪ್ರಭ ವಾರ್ತೆ ದೇವದುರ್ಗ
ಪಟ್ಟಣದ ಜಾಲಹಳ್ಳಿ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ತಾಲೂಕು ನ್ಯಾಯಾಲಯ ಸಂಕೀರ್ಣ ಹಾಗೂ ಬಾರ್ ಅಸೋಸಿಯೇಷನ್ ಕಟ್ಟಡಗಳ ಉದ್ಘಾಟನಾ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಜೆಡಿಎಸ್ ಶಾಸಕಿ ಕರೆಮ್ಮ ಜಿ.ನಾಯಕ ಅವರ ಹೆಸರು ಕೈಬಿಟ್ಟು ಶಿಷ್ಠಾಚಾರ ಉಲ್ಲಂಘಿಸಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.ಇದೇ ನ.15 ಶನಿವಾರ ಮಧ್ಯಾಹ್ನ 3 ಕ್ಕೆ ನ್ಯಾಯಾಲಯ ಸಂಕೀರ್ಣದ ಹೊಸ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದ್ದು, ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ನ್ಯಾಯಾಧೀಶರು, ನಿವೃತ್ತ ನ್ಯಾಯಾಧೀಶರು, ಸಚಿವರು, ಅಧಿಕಾರಿ ಹಾಗೂ ದೇವದುರ್ಗ ವಕೀಲರ ಸಂಘದ ಅಧ್ಯಕ್ಷರ, ಸದಸ್ಯರ ಹೆಸರುಗಳನ್ನು ಸೇರಿಸಲಾಗಿದೆ ಆದರೇ ದೇವದುರ್ಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜೆಡಿಎಸ್ ಮಹಿಳಾ ಶಾಸಕಿ ಕರೆಮ್ಮ ಜಿ.ನಾಯಕ ಅವರ ಹೆಸರನ್ನು ಕೈಬಿಟ್ಟಿರುವುದು ಶಾಸಕರು, ಬೆಂಬಲಿಗರು ಹಾಗೂ ಅಭಿಮಾನಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ.
ಆಹ್ವಾನ ಪತ್ರಿಕೆಯಲ್ಲಿ ಸಚಿವರಾದ ಎಚ್.ಕೆ,ಪಾಟೀಲ್, ಸತೀಶ ಜಾರಕಿಹೊಳಿ, ಡಾ.ಶರಣಪ್ರಕಾಶ ಪಾಟೀಲ್, ಎನ್.ಎಸ್.ಬೋಸರಾಜು ಅವರ ಹೆಸರನ್ನು ಹಾಕಲಾಗಿದೆ ಇಷ್ಟೇ ಅಲ್ಲದೇ ಹೈಕೋರ್ಟ್ ನ್ಯಾಯಾಧೀಶರು, ರಾಜ್ಯ ಬಾರ್ ಕೌನ್ಸಿಲ್ ಮುಖ್ಯಸ್ಥರು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ಹೆಸರುಗಳ ಜೊತೆಗೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಆದ ವೆಂಕಟೇಶ ಗಲಗ, ದೇವದುರ್ಗ ವಕೀಲರ ಸಂಘದ ಅಧ್ಯಕ್ಷರು, ಉಳಿದ ಪದಾಧಿಕಾರಿಗಳ ಹೆಸರನ್ನು ಹಾಕಿದ್ದಾರೆ. ಆದರೆ ಸ್ಥಳೀಯ ಶಾಸಕಿಯ ಹೆಸರನ್ನು ಎಗರಿಸಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಮಾಡಿದಕ್ಕೆ ಶಾಸಕಿ ಕರೆಮ್ಮ ಜಿ.ನಾಯಕ ಅವರ ಮೇಲೆ ಪ್ರಕರಣಗಳು ದಾಖಲಾಗಿದ್ದರಿಂದ, ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಆ ಲೆಕ್ಕದ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಹೆಸರಿರುವ ಸಚಿವರ ಮೇಲೂ ಕೇಸ್ಗಳಿವೆ ಆದರೆ ಅವರುಗಳ ಹೆಸರನ್ಯಾಕೆ ಹಾಕಲಾಗಿದೆ ಎನ್ನುವುದು ಶಾಸಕಿ ಹಾಗೂ ಅವರ ಬೆಂಬಲಿಗರು ಪ್ರಶ್ನಿಸುತ್ತಿದ್ದಾರೆ ? ಆಹ್ವಾನ ಪತ್ರಿಕೆಯಲ್ಲಿ ಕಟ್ಟಡ ನಿರ್ಮಿಸಿಕೊಟ್ಟ ಪಿಡಬ್ಲ್ಯೂಡಿ ಅಧಿಕಾರಿಯ ಹೆಸರನ್ನು ಸೇರಿಸಿದ್ದಾರೆ ಆದರೆ ಆಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಿಧಾನಸಭೆ ಸದಸ್ಯರನ್ನು ಪರಿಗಣಿಸದೇ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದೇವದುರ್ಗ ಕ್ಷೇತ್ರದಲ್ಲಿ ಮುಂಚೆಯಿಂದಲೂ ಶಾಸಕಿ ಕರೆಮ್ಮ ಜಿ.ನಾಯಕ ಅವರ ಕೆಲಸ-ಕಾರ್ಯಗಳನ್ನು ಹತ್ತಿಕ್ಕುವ ಹುನ್ನಾರ ಬಲವಾಗಿ ನಡೆಯುತ್ತಿದೆ ಆಡಳಿತರೂಢ ಕಾಂಗ್ರೆಸ್ಸಿಗರು, ಬಿಜೆಪಿನವರು ಸೇರಿಕೊಂಡು ಜೆಡಿಎಸ್ ಅದರಲ್ಲಿಯೂ ಮಹಿಳಾ ಶಾಕಿ ಮೇಲೆ ಈ ರೀತಿಯ ರಾಜಕೀಯ ಮಾಡುತ್ತಿರುವುದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಶಾಸಕಿಯ ಬೆಂಬಲಿಗರು,ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.---
ಪ್ರಭಾವಿಗಳ ಷಡ್ಯಂತ್ರದಿಂದ ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನು ಕೈ ಬಿಡಲಾಗಿದೆ. ಮುಂಚೆಯಿಂದಲೂ ನನ್ನನ್ನು ತೆಜೋವಧೆ ಮಾಡುವ ಕಾರ್ಯಗಳನ್ನು ನಡೆಸುತ್ತಲೇ ಬಂದಿದ್ದಾರೆ. ನ್ಯಾಯಾಲಯದ ಕಟ್ಟಡಗಳ ಉದ್ಘಾಟನೆಗೆ ಜನಪ್ರತಿನಿಧಿಗಳ ಅವಶ್ಯಕ. ಆದರೆ, ತಾಲೂಕಿಗೇನೂ ಹೊಸ ನ್ಯಾಯಾಲಯದ ಮಂಜೂರಾಗಿಲ್ಲ, ಹೊಸ ಕಟ್ಟಡ ನಿರ್ಮಿಸಲಾಗಿದೆ.ಇದಕ್ಕೆ ರಾಜ್ಯ ಸರ್ಕಾರದ ಅನುದಾನ ಬಳಸಲಾಗಿದೆ. ಶಿಷ್ಠಾಚಾರ ಉಲ್ಲಂಘನೆ ಬಗ್ಗೆ ಬೆಂಬಲಿಗರು, ಅಭಿಮಾನಿಗಳು ತೀವ್ರ ಅಸಮಧಾನಗೊಂಡಿದ್ದು, ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ, ನಾನು ಸಹ ಸೂಕ್ತ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು.- ಕರೆಮ್ಮ ಜಿ.ನಾಯಕ, ಜೆಡಿಎಸ್ ಮಹಿಳಾ ಶಾಸಕಿ, ದೇವದುರ್ಗ
;Resize=(128,128))
;Resize=(128,128))
;Resize=(128,128))
;Resize=(128,128))