ಕೆಪಿಎಂಇ ಕಾಯ್ದೆ ಉಲ್ಲಂಘನೆ: 55 ಜನರಿಗೆ ರು.22.27 ಲಕ್ಷ ದಂಡ

| Published : Jul 04 2024, 01:03 AM IST

ಕೆಪಿಎಂಇ ಕಾಯ್ದೆ ಉಲ್ಲಂಘನೆ: 55 ಜನರಿಗೆ ರು.22.27 ಲಕ್ಷ ದಂಡ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ-2007 ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಜಿಲ್ಲೆಯ 55 ಕ್ಲಿನಿಕ್ ಮತ್ತು ವೈದ್ಯರಿಗೆ ಒಟ್ಟು 22.27 ಲಕ್ಷ ರು. ದಂಡ ವಿಧಿಸಲಾಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ-2007 ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಜಿಲ್ಲೆಯ 55 ಕ್ಲಿನಿಕ್ ಮತ್ತು ವೈದ್ಯರಿಗೆ ಒಟ್ಟು 22.27 ಲಕ್ಷ ರು. ದಂಡ ವಿಧಿಸಲು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ನಡೆದ ಕೆ.ಪಿ.ಎಂ.ಇ ಜಿಲ್ಲಾ ಮಟ್ಟದ ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕೆ.ಪಿ.ಎಂ.ಇ. ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ 42 ಜನರಿಗೆ ತಲಾ ₹50 ಸಾವಿರ, 5 ಜನರಿಗೆ ತಲಾ ₹20 ಸಾವಿರ, 5 ಜನರಿಗೆ ತಲಾ ₹5 ಸಾವಿರ, ಇಬ್ಬರಿಗೆ ತಲಾ ₹1 ಸಾವಿರ ದಂಡ ವಿಧಿಸಿ ಕೂಡಲೆ ದಂಡ ಕಟ್ಟಲು ಆದೇಶಿಸಿಲಾಗಿದೆ. ಉಳಿದಂತೆ 6 ಜನ ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಸಿ. ಅವರು ಎಚ್ಚರಿಕೆ ನೀಡಿದ್ದಾರೆ.

ಕಳೆದ ಡಿಸೆಂಬರ್‌ನಿಂದ ಜೂನ್ ಮಾಹೆ ವರೆಗೆ ಸಹಾಯಕ ಆಯುಕ್ತರ ನೇತೃತ್ವದ ತಪಾಸಣಾ ತಂಡ ನಿಯಮಿತ ದಾಳಿ ನಡೆಸಿ ಒಟ್ಟು 61 ಕ್ಲಿನಿಕ್ ಮತ್ತು ವೈದ್ಯರ ಮೇಲೆ ಕೆ.ಪಿ.ಎಂ.ಇ. ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಇಲಾಖಾ ಎಫ್.ಐ.ಆರ್. ದಾಖಲಿಸಿ ಡಿ.ಸಿ. ಅಧ್ಯಕ್ಷತೆಯ ಕುಂದುಕೊರತೆ ಪ್ರಾಧಿಕಾರದ‌ ಮುಂದೆ ಹಾಜರಾಗುವಂತೆ‌ ನೋಟಿಸ್ ನೀಡಲಾಗಿತ್ತು. ಅದರಂತೆ ಮಂಗಳವಾರ ಸಭೆಗೆ ಅಗಮಿಸಿದ ವೈದ್ಯರ ಅಹವಾಲು ಆಲಿಸಿ ಡಿ.ಸಿ. ದಂಡ‌ ವಿಧಿಸಿದ್ದಾರೆ.

ಸಭೆಯಲ್ಲಿ ಡಿ.ಎಚ್.ಓ. ಡಾ.ರತಿಕಾಂತ ಸ್ವಾಮಿ, ಆಳಂದ ತಹಸೀಲ್ದಾರ್‌ ಯಲ್ಲಪ್ಪ ಸುಬೇದಾರ, ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಗಿರಿಜಾ ನಿಗ್ಗುಡಗಿ ಸೇರಿದಂತೆ ಇನ್ನಿತರ ಇದ್ದರು.