ಸಾರಾಂಶ
ಸರ್ವೇಯಲ್ಲಿ ನಡೆದಿರುವ ಲೋಪದೋಷವನ್ನು ಸರಿಪಡಿಸುವಂತೆ ಹಲವು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಂಡವಪುರ: ಭೂಮಾಪನ ಇಲಾಖೆ ಸರ್ವೇಯರ್ ಟಿ.ಆರ್.ಭಾಸ್ಕರ್ ಜಮೀನು ಸರ್ವೇ ನಡೆಸಿ ಹದ್ದುಬಸ್ತು ಮಾಡದೆ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಹಿರೇಮರಳಿ ಗ್ರಾಮದ ರೈತ ವೇಣುಗೋಪಾಲ್ ಪಟ್ಟಣದ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಪಟ್ಟಣದ ತಾಲೂಕು ಆಡಳಿತ ಕಚೇರಿ ಎದುರು ಸೋಮವಾರ ಸತ್ಯಾಗ್ರಹ ಆರಂಭಿಸಿದ ವೇಣುಗೋಪಾಲ್, ತಾಲೂಕು ಕಚೇರಿಯ ಯಾವುದೇ ಅಧಿಕಾರಿಗಳು ಸಮಸ್ಯೆ ಆಲಿಸದ ಹಿನ್ನೆಲೆಯಲ್ಲಿ ತಡರಾತ್ರಿವರೆಗೂ ಪ್ರತಿಭಟನಾ ಧರಣಿ ಮುಂದುವರಿಸಿದರು.
ಹಿರೇಮರಳಿ ಗ್ರಾಮದ ಸರ್ವೇ 33/4 ಇವರು 26.12 ಗುಂಟೆ ಸರ್ವೇ ನಡೆಸಿ ಹದ್ದುಬಸ್ತು ಮಾಡುವ ವಿಚಾರದಲ್ಲಿ ಬಾಜುದಾರಿಗೆ ಮೊದಲೇ ನೋಟಿಸ್ ನೀಡದೆ ಒಂದೇ ದಿನ ನೋಟಿಸ್ ಕೊಟ್ಟು ಅದೇ ದಿನ ಸರ್ವೇ ನಡೆಸಿ ಹದುಬಸ್ತು ಮಾಡಿದ್ದಾರೆ. ಜತೆಗೆ ಸರ್ವೇ ನಡೆಸುವಲ್ಲಿಯೋ ಲೋಪದೋಷ ವೆಸಗಿದ್ದಾರೆ ಎಂದು ಆರೋಪಿಸಿದರು.ಸರ್ವೇಯಲ್ಲಿ ನಡೆದಿರುವ ಲೋಪದೋಷವನ್ನು ಸರಿಪಡಿಸುವಂತೆ ಹಲವು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ನನ್ನ ಮನವಿಯನ್ನು ಪುರಸ್ಕರಿಸಿ ಸರಿಪಡಿಸುವ ಗೋಜಿಗೆ ಮುಂದಾಗುತ್ತಿಲ್ಲ. ಹಾಗಾಗಿ ನನಗೆ ನ್ಯಾಯ ದೊರಕಿಸಿಕೊಡುವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಧರಣಿ ಮುಂದುವರಿಸಿದರು.