ಕೈಗಾರಿಕಾ ಪ್ರದೇಶದ ಭೂ ಅಭಿವೃದ್ಧಿಯಲ್ಲಿ ನಿಯಮ ಉಲ್ಲಂಘನೆ

| Published : Sep 14 2024, 01:51 AM IST

ಸಾರಾಂಶ

ತಾಲೂಕಿನ ಮೇಟಿಕುರ್ಕೆ ಗ್ರಾಮದ ಬಳಿ ಕೈಗಾರಿಕಾ ಪ್ರದೇಶಕ್ಕೆ ಸುಮಾರು 3500 ಎಕರೆ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಅಲ್ಲಿನ ಕಪ್ಪು ಮಣ್ಣನ್ನು ಬೇರೆಡೆಗೆ ಸ್ಥಳಾಂತರಿಸಿ ಬೇರೆ ಗ್ರಾವೆಲ್ ಮಣ್ಣಿನಿಂದ ರಸ್ತೆ ನಿರ್ಮಾಣ ಮಾಡಬೇಕಾಗಿತ್ತು. ಅದರೆ ಇಲ್ಲಿ ಯಾವುದೇ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ರೈತ ಸಂಘದ ವತಿಯಿಂದ ಮೇಟಿಕುರ್ಕೆ ಕೈಗಾರಿಕಾ ಪ್ರದೇಶದ ಬಳಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಕೆಐಆರ್ ಡಿಬಿಯು ಕಪ್ಪು ಮಣ್ಣು ತೆಗೆದು ಸಾಗಿಸಿದ ಅಂದಾಜು ಪಟ್ಟಿಯಲ್ಲಿ ಅನುದಾನ ಇಟ್ಟಿದ್ದು ಗುತ್ತಿಗೆದಾರರು ಇದನ್ನು ಯಾರಿಗೂ ತಿಳಿಸದೆ ಒಂದು ಲೋಡಿಗೆ ₹2 ರಿಂದ 3 ಸಾವಿರದವರೆಗೆ ರೈತರಿಂದ ಹಣ ಪಡೆದು ಸಾಗಾಣಿಕೆ ಮಾಡುತ್ತಾರೆ. ಮಣ್ಣು ತುಂಬಲು ಮತ್ತು ಸಾಗಾಣಿಕೆ ಮಾಡಲು ಸರ್ಕಾರವೇ ಹಣ ಭರಿಸುವುದರಿಂದ ರೈತರಿಂದ ಹಣ ಪಡೆಯುತ್ತಿರುವುದು ಅಕ್ಷಮ್ಯ ಎಂದು ದೂರಿದರು.

ರೈತರಿಗೆ ಉಚಿತವಾಗಿ ಮಣ್ಣು ಸಾಗಾಣಿಕೆ ಮಾಡಬೇಕಿದ್ದ ಕಂಪನಿಗಳು ಮತ್ತು ಅಧಿಕಾರಿಗಳು ಮಣ್ಣಿನ ವ್ಯಾಪಾರಿಕರಣ ಮಾಡುತ್ತಾ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ರೈತರಿಗೆ ಸಾಗಾಣಿಕೆ ಮಾಡಲಾವುದು ಎಂದು ಹೇಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರಾಯಲ್ಟಿ ಕಟ್ಟದೇ ವಂಚಿಸುತ್ತಾ ಬಂದಿದ್ದಾರೆಂದು ಆರೋಪಿಸಿದರು.

ನಿಯಮ ಮೀರಿ ಓವರ್ ಲೋಡ್ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ನಮಗೆ ಸಂಬಂಧವಿಲ್ಲವೆಂಬoತೆ ವರ್ತಿಸುತ್ತಿದ್ದಾರೆ. ಓವರ್ ಲೋಡ್ ನಿಂದಾಗಿ ರಸ್ತೆಗಳು ಗುಂಡಿ ಬಿದ್ದು ಹಾಳಾಗುತ್ತವೆ. ಕಂದಾಯ ಇಲಾಖೆ, ಪೋಲಿಸ್ ಇಲಾಖೆ ಮತ್ತು ಸಾರಿಗೆ ಇಲಾಖೆಯವರು ಈ ಬಗ್ಗೆ ಗಮನಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾಡಳಿತ ಈ ಎಲ್ಲಾ ಇಲಾಖೆಗಳ ಮೇಲೆ ಗಮನ ಹರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿಯಮಾನುಸರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಕೆಟಿ. ತಿಪ್ಪೇಸ್ವಾಮಿ, ಸಿದ್ದರಾಮಣ್ಣ, ರಂಗಸ್ವಾಮಿ, ತಿಮ್ಮಾರೆಡ್ಡಿ, ಅರಳಿಕೆರೆ ತಿಪ್ಪೇಸ್ವಾಮಿ, ಹೊಸಕೆರೆ ಜಯಣ್ಣ, ಜಗನ್ನಾಥ್, ಶಿವಣ್ಣ, ನಾರಾಯಣಪ್ಪ, ರಾಮಕೃಷ್ಣ, ಬಾಲಕೃಷ್ಣ, ತಿಪ್ಪೇಸ್ವಾಮಿ, ಮಂಜುನಾಥ್, ಕೆಂಚಪ್ಪ, ರಾಜಣ್ಣ ಮುಂತಾದವರು ಹಾಜರಿದ್ದರು.