ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಪಟ್ಟಣದ ಪುರಸಭೆ ವ್ಯಾಪ್ತಿಗೆ ಸೇರಿದ 72 ವಾಣಿಜ್ಯ ಮಳಿಗೆಗಳನ್ನು ಹರಾಜಾಗಿದ್ದರೂ ಅವುಗಳನ್ನು ನಿಯಮಾನುಸಾರ ಬಾಡಿಗೆದಾರರಿಗೆ ನೀಡದೆ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದು ಕೂಡಲೇ ಈ ಸಂಬಂಧ ಶಾಸಕ ಡಿ.ರವಿಶಂಕರ್ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.ಮಳಿಗೆಗಳು ಬಾಗಿಲು ಹಾಕಿರುವುದರಿಂದ ಅಲ್ಲಿ ವ್ಯಾಪಾರ ಮಾಡುತ್ತಿದವರ ಬದುಕು ಬೀದಿಗೆ ಬಿದ್ದಿದ್ದು, ಇದರ ಜತೆಗೆ ಪಟ್ಟಣದಲ್ಲಿ ವ್ಯವಹಾರ ಕುಂಠಿತವಾಗಿದೆ. ಈ ವಿಚಾರವನ್ನು ಶಾಸಕರು ಗಂಭೀರವಾಗಿ ಪರಿಗಣಿಸಿ ಪುರಸಭೆಯ ಚುನಾಯಿತ ಸದಸ್ಯರು, ಜಿಲ್ಲಾಧಿಕಾರಿ ಮತ್ತು ಆಡಳಿತಾಧಿಕಾರಿಗಳ ಜತೆ ಸಭೆ ನಡೆಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಅವರು ಸಲಹೆ ನೀಡಿದರು.
ನಾನು ರಾಜಕೀಯ ಕಾರಣಕ್ಕೆ ಈ ವಿಚಾರ ಮಾತನಾಡುತ್ತಿಲ್ಲ. ನಮ್ಮೂರಿನ ವ್ಯಾಪಾರಿಗಳಿಗೆ ಮತ್ತು ಜನರಿಗೆ ತೊಂದರೆಯಾದಾಗ ಜವಬ್ದಾರಿಯುತ ವ್ಯಕ್ತಿಯಾಗಿ ಈ ಕೆಲಸ ಮಾಡಬೇಕಾದದ್ದು ನನ್ನ ಕರ್ತವ್ಯ. ಒಂದು ವೇಳೆ ನೀವು ಈ ಕೆಲಸವನ್ನು ಕೂಡಲೇ ಮಾಡದಿದ್ದರೆ ವ್ಯಾಪಾರಿಗಳೊಂದಿಗೆ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಮಳಿಗೆ ವಿಚಾರವನ್ನು ಪರಿಹರಿಸಲು ಮುಂದಾಗುತ್ತೇನೆ ಎಂದರು.ಮುಚ್ಚಿರುವ ಮಳಿಗೆಗಳನ್ನು ಬಾಗಿಲು ತೆರೆಯಿಸಿ ಹರಾಜಿನಲ್ಲಿ ಪಾಲ್ಗೊಂಡು ಬಾಡಿಗೆ ಪಡೆದಿರುವವರಿಗೆ ನಿಯಮಾನುಸಾರ ಕೊಡಿಸಲು ಸರ್ವ ಪಕ್ಷದ ಮುಖಂಡರು ಮತ್ತು ಚುನಾಯಿತ ಸಭೆ ನಡೆಸಿದರೆ ನಾನೂ ಕೂಡ ಭಾಗವಹಿಸಿ ಸಲಹೆ ಸೂಚನೆ ನೀಡಲಿದ್ದು, ಪಟ್ಟಣದ ಜನರ ಹಿತದೃಷ್ಟಿಯಿಂದ ಈ ಕೆಲಸವನ್ನು ಶಾಸಕರು ಮಾಡಬೇಕು ಎಂದು ಅವರು ತಿಳಿಸಿದರು.
ಮಳಿಗೆಗಳು ಬಾಗಿಲು ಮುಚ್ಚಿರುವುದರಿಂದ ವ್ಯಾಪಾರಿಗಳಿಗೆ ತೊಂದರೆ ಆಗುವ ಜತೆಗೆ ಪುರಸಭೆಗೂ ಕೋಟ್ಯಂತರ ಆದಾಯ ಕಡಿಮೆಯಾಗಿದ್ದು, ಇವೆಲ್ಲವನ್ನೂ ಜವಬ್ದಾರಿಯುತ ಸ್ಥಾನದಲ್ಲಿರುವ ನಾವು ಅರಿತುಕೊಂಡು ಸಕಾಲದಲ್ಲಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.ಶಾಸಕರು, ಪುರಸಭೆ ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳು ವಾಣಿಜ್ಯ ಮಳಿಗೆ ಹರಾಜು ವಿಚಾರಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತಿದ್ದು ಇದು ಇವರಿಗೆ ಶೋಭೆ ತರುವುದಿಲ್ಲ. ಜನರು ನಮಗೆ ನೀಡಿರುವ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸದಿದ್ದರೆ ಅವರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
ಕಳೆದ ಒಂದು ತಿಂಗಳ ಹಿಂದೆ ಇಲ್ಲಿನ ಗರುಡಗಂಭ ವೃತ್ತದ ಬಳಿ ನಾಲ್ಕು ಮಳಿಗೆಗಳು ಶಿಥಿಲಗೊಂಡು ಮುಂಭಾಗ ಪೂರ್ಣ ಕುಸಿದು ಹೋಗಿವೆ. ಆದರೆ ಅವಶೇಷ ತೆಗೆಯುವ ಕೆಲಸವನ್ನು ಪುರಸಭೆಯವರು ಮಾಡುತ್ತಿಲ್ಲ. ಇಷ್ಟು ಬೇಜವಬ್ದಾರಿ ವಹಿಸಿದರೆ ಹೇಗೆ, ಕೂಡಲೇ ಅದನ್ನು ತೆರವುಗೊಳಿಸಿ ಎಂದು ಸೂಚಿಸಿದರು.ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಕೆ.ಪಿ. ಪ್ರಭುಶಂಕರ್, ಮಳಿಗೆ ಬಾಡಿಗೆದಾರರಾದ ಮಹದೇವ್, ಗಂಗರಾಜು, ಉಮೇಶ್, ಶಿವಾಜಿ ಗಣೇಶನ್ ಇದ್ದರು.