ಸಾರಾಂಶ
ದೊಡ್ಡಬಳ್ಳಾಪುರ: ವೈದ್ಯರ ಮೇಲೆ ದೌರ್ಜನ್ಯ, ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ. ಈ ದಿಸೆಯಲ್ಲಿ ವೈದ್ಯರು ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ವಿ.ವಿ.ಚಿನಿವಾಲಾರ್ ಹೇಳಿದ್ದಾರೆ.
ನಗರದ ವೈದ್ಯಕೀಯ ಭವನದಲ್ಲಿ ಸಂಘದಿಂದ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ರಾಜ್ಯಾಧ್ಯಕ್ಷರ ಭೇಟಿ ಸಮಾರಂಭದಲ್ಲಿ ಮಾತನಾಡಿದ ಅವರು, ವೈದ್ಯ ವೃತ್ತಿ ಜೀವ ಉಳಿಸುವ ಅತ್ಯಂತ ಪವಿತ್ರವಾದ ಕೆಲಸ. ಆದರೆ, ಇಂತಹ ವೈದ್ಯರ ಮೇಲೆ ದೌರ್ಜನ್ಯ ನಡೆಸುವುದು ಅಕ್ಷಮ್ಯ. ವೈದ್ಯ ಸಮುದಾಯದ ಸಂಘಟನಾ ಶಕ್ತಿಗೆ ಇತ್ತೀಚೆಗಷ್ಟೇ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ನಡೆದ ಘಟನೆ ಉದಾಹರಣೆಯಾಗಿದೆ ಎಂದು ನೆನಪು ಮಾಡಿದರು.ಆರೋಪ ಸಾಬೀತಾಗದೆ ಆಸ್ಪತ್ರೆಯನ್ನು ಬಂದ್ ಮಾಡಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿಗಳ ವಿರುದ್ಧ ನಮ್ಮ ಸಂಘಟನೆ ದನಿ ಎತ್ತಿತ್ತು. ಯಾವುದೇ ಆಸ್ಪತ್ರೆಯನ್ನಾಗಲಿ ಮುಚ್ಚುವ ಅಧಿಕಾರ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಇರುವುದಿಲ್ಲ. ನಂತರ ಗಂಗಾವತಿಯಲ್ಲಿ ನಡೆದ ವೈದ್ಯರ ಮೇಲಿನ ದೌರ್ಜನ್ಯ ಖಂಡಿಸಿ, 3 ದಿನ ಧರಣಿ ನಡೆಸಿ, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಲಾಗಿತ್ತು. ವೈದ್ಯರು ಯಾವಾಗ ದಾಖಲೆಗಳನ್ನು ನೀಡಬೇಕೆಂಬ ವಿಚಾರ ಹಾಗೂ ಕಾನೂನಿನ ವಿಚಾರ ತಿಳಿದಿರಬೇಕಿದೆ. ನೀವು ಯಾವುದೇ ರೀತಿಯ ತಜ್ಞ ವೈದ್ಯರಾಗಿರಲೀ, ವೈದ್ಯರೆಂದರೆ ಎಲ್ಲಾ ಒಂದೇ ಎನ್ನುವ ಭಾವನೆ ಇರಬೇಕು ಎಂದು ಸಲಹೆ ನೀಡಿದರು.
ನಕಲಿ ವೈದ್ಯರ ಹಾವಳಿ ತಡೆಗಟ್ಟಲು ಒತ್ತಾಯ:ಕೆಪಿಎಂಎ ಕಾಯ್ದೆ ನಮ್ಮಂತಹ ಕಾನೂನಾತ್ಮಕ ವೈದ್ಯರಿಗೆ ಕೆಲವು ಬಾರಿ ಮುಳುವಾಗುತ್ತಿದೆ. ನಕಲಿ ವೈದ್ಯರು ಆರಾಮಾಗಿ ಕಾಯ ನಿರ್ವಹಿಸುತ್ತಿದ್ದಾರೆ. ಈ ದಿಸೆಯಲ್ಲಿ ಕಾನೂನುಗಳನ್ನು ಸರಳೀಕರಿಸಬೇಕು. ನಕಲಿ ವೈದ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಲಾಗಿದೆ ಎಂದರು.
ಭಾರತೀಯ ವೈದ್ಯಕೀಯ ಸಂಘದ ಉಪಾಧ್ಯಕ್ಷ ಡಾ.ಮರಳೇಗೌಡ, ಡಾ.ಟಿ.ಕೆ. ಗೋಪಾಲರಾವ್, ಡಾ.ರಾಧಾಮಣಿ ಅವರನ್ನು ಸನ್ಮಾನಿಸಲಾಯಿತು.ಸಂಘದ ತಾಲೂಕು ಕಾವ್ಯದರ್ಶಿ ಡಾ.ಕೆ.ವಿ. ರಾಘವೇಂದ್ರ ವಾರ್ಷಿಕ ವರದಿ ಮಂಡಿಸಿ, ಸಂಘದ ಕಾರ್ಯಕಲಾಪಗಳ ಮಾಹಿತಿ ನೀಡಿದರು. ಸಂಘದ ತಾಲೂಕು ಅಧ್ಯಕ್ಷ ಡಾ.ವಿನಯ್‌ಬಾಬು ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಡಾ.ವಿ.ಸಿ.ಸುರೇಶ್, ಮಾಜಿ ಅಧ್ಯಕ್ಷರಾದ ಡಾ.ಸಿ.ಆರ್.ಕೃಷ್ಣಪ್ಪ, ಡಾ.ಎಚ್.ಜಿ.ವಿಜಯಕುಮಾರ್, ಡಾ.ಎಂ.ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಡಾ.ಆರ್.ಇಂದಿರಾ, ಕಾರ್ಯದರ್ಶಿ ಡಾ.ಶಾಲಿನಿ, ಖಜಾಂಚಿ ಡಾ.ರೇಖಾ ಜಗನ್ನಾಥ್ ಇತರರು ಉಪಸ್ಥಿತರಿದ್ದರು.
8ಕೆಡಿಬಿಪಿ5-ದೊಡ್ಡಬಳ್ಳಾಪುರದಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಡಾ.ವಿ.ವಿ.ಚಿನಿವಾಲಾರ್ ಇತರರು ಪಾಲ್ಗೊಂಡಿದ್ದರು.