ದೌರ್ಜನ್ಯ ನಿಯಂತ್ರಣ ಜಾಗೃತಿ ಅಗತ್ಯ

| Published : Feb 03 2024, 01:50 AM IST

ಸಾರಾಂಶ

ಹೊಸಕೋಟೆ: ಪರಿಶಿಷ್ಟ ಜಾತಿ ಮತ್ತು ಪಂಗಡದವರು ದೌರ್ಜನ್ಯಕ್ಕೊಳಗಾದರೆ ಸರ್ಕಾರ ರೂಪಿಸಿರುವ ಕಾನೂನನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ದಸಂಸ ಕರ್ನಾಟಕ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ ಅಣ್ಣಯ್ಯ ತಿಳಿಸಿದರು.

ಹೊಸಕೋಟೆ: ಪರಿಶಿಷ್ಟ ಜಾತಿ ಮತ್ತು ಪಂಗಡದವರು ದೌರ್ಜನ್ಯಕ್ಕೊಳಗಾದರೆ ಸರ್ಕಾರ ರೂಪಿಸಿರುವ ಕಾನೂನನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ದಸಂಸ ಕರ್ನಾಟಕ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ ಅಣ್ಣಯ್ಯ ತಿಳಿಸಿದರು.

ನಗರದಲ್ಲಿ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾನೂನುಗಳು ಎಷ್ಟೇ ಬಲಿಷ್ಠಗೊಳ್ಳುತ್ತಿದ್ದರೂ ರಾಜ್ಯಾದ್ಯಂತ ದಲಿತರ ಮೇಲೆ ನಡೆಯುವ ದೌರ್ಜನ್ಯ ಹೆಚ್ಚಾಗುತ್ತಿದೆ. ಈ ದಬ್ಬಾಳಿಕೆಯನ್ನು ನಿಯಂತ್ರಣಗೊಳಿಸಲು ಸರ್ಕಾರ ಕಠಿಣ ಕಾನೂನುಗಳನ್ನು ರೂಪಿಸಿದ್ದರೂ ದೌರ್ಜನ್ಯ ನಡೆಯುತ್ತಲೇ ಇದೆ. ಆದ್ದರಿಂದಲೇ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ರಾಜ್ಯಾದ್ಯಂತ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಬೀದಿ ನಾಟಕಗಳ ಮೂಲಕ ಕಾನೂನಿನ ಅರಿವು ಹಾಗೂ ದಬ್ಬಾಳಿಕೆಯ ವಿರುದ್ಧ ಹೋರಾಡುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಹೊಸಕೋಟೆ ನಗರ ಸೇರಿ ಸೂಲಿಬೆಲೆ, ನಂದಗುಡಿ, ಅನುಗೊಂಡನಹಳ್ಳಿ ಹೋಬಳಿಯ ಎಲ್ಲಾ ಗ್ರಾಮಗಳಿಗೆ ತೆರಳಿ ಬೀದಿ ನಾಟಕ ಹಾಗೂ ಕ್ರಾಂತಿ ಗೀತೆಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.

ಬೆಂಗ್ರಾ ಜಿಲ್ಲಾ ಸಂಚಾಲಕ ಲೋಕೇಶ್, ಸಂಘಟನಾ ಸಂಚಾಲಕ ನಾರಾಯಣಸ್ವಾಮಿ, ವಸಂತ ಸೇರಿ ಕಲಾತಂಡಗಳ ಕಲಾವಿದರು ಹಾಜರಿದ್ದರು.