ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಉಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಅವರವರ ಭಾಷೆಯಲ್ಲಿ ಉಪದೇಶ ಕೇಳುವ ಸದವಕಾಶವಿದೆ ಎಂದು ವೇಣೂರಿನಲ್ಲಿ ಗುರುವಾರ ನಡೆದ ಸಮವಸರಣದಲ್ಲಿ ಶ್ರಾವಕರು- ಶ್ರಾವಕಿಯರ ಪ್ರಶ್ನೆಗಳಿಗೆ ಪೂಜ್ಯ ಅಮೋಘಕೀರ್ತಿ ಮುನಿಮಹಾರಾಜರು ಶಾಸ್ತ್ರದ ನೆಲೆಯಲ್ಲಿ ಸಮರ್ಪಕ ವಿವರ ನೀಡಿ ಸಂದೇಹ ಪರಿಹರಿಸಿದರು.ರಾತ್ರಿ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕ ಮಾಡುವುದು ಶಾಸ್ತ್ರಸಮ್ಮತವಾಗಿದೆ. ಇದರಿಂದ ಯಾವುದೇ ದೋಷವಿಲ್ಲ. ಹಿಂಸೆ ಆಗುವುದಿಲ್ಲ ಎಂದು ಪೂಜ್ಯ ಮುನಿಗಳು ಸ್ಪಷ್ಟಪಡಿಸಿದರು. ನಿತ್ಯವೂ ಅಡುಗೆ ಮಾಡುವಾಗ, ಕೃಷಿ ಮಾಡುವಾಗ , ಬಸದಿ ಜೀರ್ಣೋದ್ಧಾರ ಮಾಡುವಾಗಲೂ ಪ್ರಾಣಿ ಹಿಂಸೆ ಆಗುತ್ತದೆ. ಆದರೆ ಅಭಿಪ್ರಾಯ, ಸಂಕಲ್ಪ ,ಉದ್ದೇಶ ಪರಿಶುದ್ಧವಾಗಿದೆ. ಆದುದರಿಂದ ಇದರಿಂದಾಗಿ ಹಿಂಸೆ ಆಗುವುದಿಲ್ಲ ಎಂದು ಜಿನಸೇನಾಚಾರ್ಯರ ಮಹಾಪುರಾಣದಲ್ಲಿ ಹೇಳಲಾಗಿದೆ. ಹಾಗಾಗಿ ಕಾರ್ಕಳ ಮತ್ತು ವೇಣೂರಿನಲ್ಲಿ ರಾತ್ರಿ ಮಸ್ತಕಾಭಿಷೇಕ ನಡೆಸುವುದು ಶಾಸ್ತ್ರ ಸಮ್ಮತವಾಗಿದೆ. ಇದರಿಂದ ಯಾವುದೇ ದೋಷವಿಲ್ಲ, ಹಿಂಸೆಯೂ ಆಗುವುದಿಲ್ಲ. ಅಭಿಷೇಕ, ಪೂಜೆ, ದಾನಕ್ಕೆ ದ್ರವ್ಯ ಸಂಗ್ರಹ ಮಾಡುವಾಗ ಸ್ವಲ್ಪ ಹಿಂಸೆ ಆದರೂ ಅದು ನಗಣ್ಯ ಎಂದರು. ಕರ್ನಾಟಕದಲ್ಲಿ ಮುನಿಧರ್ಮ ಮತ್ತು ಶ್ರಾವಕಧರ್ಮ ಚೆನ್ನಾಗಿದೆ ಎಂದು ಅವರು ಶ್ಲಾಘಿಸಿದರು. ಪುರುಷರಂತೆ ಮಹಿಳೆಯರೂ ದೇವರ ಪೂಜೆ, ಅಭಿಷೇಕ, ಅರ್ಚನೆ ಮಾಡಬಹುದು. ಇಲ್ಲಿ ಲಿಂಗ ಅಸಮಾನತೆಗೆ ಅವಕಾಶವಿಲ್ಲ. ತೀರ್ಥಂಕರರ ಜೊತೆ ಯಕ್ಷ- ಯಕ್ಷಿಯರ ಪೂಜೆ ಮಾಡಬಹುದು. ಮಹಿಳೆಯರು ಮುನಿಗಳ ಪಾದಸ್ಪರ್ಶ ಮಾಡಿ ನಮೋಸ್ತು ಮಾಡಬಹುದು. ಪುರುಷರು ಮಾತಾಜಿಯವರ ಪಾದಸ್ಪರ್ಶ ಮಾಡಿ ನಮೋಸ್ತು ಮಾಡಬಹುದು. ಆದರೆ ಒಬ್ಬರೇ ಮುನಿ ಮತ್ತು ಒಬ್ಬಳೇ ಮಹಿಳೆ ಇರುವಾಗ ಹಾಗೂ ಒಬ್ಬ ಪುರುಷ ಮತ್ತು ಒಬ್ಬರೇ ಮಾತಾಜಿ ಇರುವಾಗ ಪಾದಸ್ಪರ್ಶ ಸಲ್ಲದು ಎಂದರು. ನೃತ್ಯ, ಸುಶ್ರಾವ್ಯ ಸಂಗೀತ, ಪಂಚನಮಸ್ಕಾರ ಮಂತ್ರಪಠಣದೊಂದಿಗೆ ಅಷ್ಟವಿಧಾರ್ಚನೆ ಪೂಜೆ ನಡೆಯಿತು. ಅಷ್ಟಮಂಗಳ ದ್ರವ್ಯಗಳಿಂದ ಶಾಂತಿನಾಥ ಸ್ವಾಮಿಪೂಜೆ, ಇಪ್ಪತ್ನಾಲ್ಕು ತೀರ್ಥಂಕರರ ಪೂಜೆ, ಶ್ರುತದೇವಿ ಪೂಜೆ ಮತ್ತು ಗಣಧರ ಪರಮೇಷ್ಟಿಗಳ ಪೂಜೆ ನಡೆಯಿತು. 108 ಶ್ರೀ ಅಮರಕೀರ್ತಿ ಮಹಾರಾಜರು, ಕಾರ್ಕಳ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ವರೂರು ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಹೊಂಬುಜ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಕನಕಗಿರಿ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಅರಹಂತಗಿರಿ ಧವಲಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಕಂಬದಹಳ್ಳಿ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಸಿಂಹನಗದ್ದೆಯ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಆರತಿಪುರ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಮೂಡುಬಿದಿರೆ ಡಾ. ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಕುಮಾರ್, ಕುಟುಂಬಸ್ಥರು, ಡಾ.ಎಂ.ಎನ್. ರಾಜೇಂದ್ರಕುಮಾರ್ ಉಪಸ್ಥಿತರಿದ್ದರು. ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಪಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರ ಪುರಪ್ರವೇಶ ನಡೆಯಿತು.
ಮಹಾಮಸ್ತಕಾಭಿಷೇಕದ ಅಂಗವಾಗಿ ಗುರುವಾರ ವೇಣೂರಿನಲ್ಲಿ ನಿತ್ಯವಿಧಿಸಹಿತ ಆಹಾರದಾನ, ಗಂಧ ಯಂತ್ರರಾಧನಾ ವಿಧಾನ, ಕೇವಲಜ್ಜಾನ ಕಲ್ಯಾಣ ಮೊದಲಾದ ಧಾರ್ಮಿಕ ವಿಧಿ- ವಿಧಾನಗಳು ನಡೆದವು. ಭಗವಾನ್ ಬಾಹುಬಲಿ ಸ್ವಾಮಿಗೆ 504 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ ಮತ್ತು ಕುಟುಂಬಸ್ಥರು ಸೇವಾಕರ್ತರಾಗಿ ಸಹಕರಿಸಿದರು.ವೇಣೂರು ಮಹಾಮಸ್ತಕಾಭಿಷೇಕ ಇಂದು ಸಂಪನ್ನ, ಗವರ್ನರ್ ಗೆಹ್ಲೋಟ್ ಭಾಗಿ
ಬೆಳ್ತಂಗಡಿ: ವೇಣೂರು ಬಾಹುಬಲಿ ಬೆಟ್ಟದಲ್ಲಿ ನಡೆಯುತ್ತಿರುವ 21 ನೇ ಶತಮಾನದ ಮೂರನೇ ಮಹಾಮಸ್ತಕಾಭಿಷೇಕ ಮಾ. ೧ರಂದು ಶುಕ್ರವಾರ ಮುಕ್ತಾಯಗೊಳ್ಳಲಿದೆ.ಶುಕ್ರವಾರ ಬೆಳಿಗ್ಗೆ 9ಗಂಟೆಗೆ ಸಿದ್ಧಚಕ್ರ ಯಂತ್ರರಾಧನಾ ವಿಧಾನ, ಬೆಳಗ್ಗೆ 10.15ರಿಂದ ಅಗ್ನಿತ್ರಯಾರ್ಚನಾ ಪೂರ್ವಕ ನಿರ್ವಾಣ ಕಲ್ಯಾಣ, ಅಗ್ರೋದಕ ಮೆರವಣಿಗೆ ನಡೆದು, ಸಂಜೆ 4 ಗಂಟೆಯಿಂದ ಮಹಾ ಮಸ್ತಕಾಭಿಷೇಕ ಮಹೋತ್ಸವ, ಮಹಾಪೂಜೆ, ಸಂಘಪೂಜೆ, ಮಹಾಮಂಗಳಾರತಿ, ಕುಂಕುಮೋತ್ಸವ, ಅವಭೃತ ಸ್ನಾನ, ಧ್ವಜಾವರೋಹಣ, ತೋರಣ ವಿಸರ್ಜನೆ, ಮತ್ತು ಕಂಕಣ ವಿಸರ್ಜನೆ ಜರುಗಲಿದೆ.
ಮಧ್ಯಾಹ್ನ 3 ಗಂಟೆಗೆ ಯುಗಳಮುನಿಗಳು, ಮೂಡುಬಿದಿರೆ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಶ್ರೀ ಕ್ಷೇತ್ರ ಜಿನಕಂಚಿಯ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಭಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಇವರ ಪಾವನ ಸಾನಿಧ್ಯದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ.ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ, ಚಿತ್ರದುರ್ಗದ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಮಾಜಿ ಸಚಿವ ಅಭಯಚಂದ್ರ ಜೈನ್, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿ ಮನೋಜ್ ಎಂ.ಎಲ್., ಎಂಎಲ್ ಸಿ ಕೆ.ಪ್ರತಾಪ ಸಿಂಹ ನಾಯಕ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ನಾಗಪುರದ ಡಿ.ಪಿ.ಜೈನ್ ನಾಸಿಕ್ ನ ರವೀಂದ್ರ ಪಾಟೀಲ್ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ, ಸಂಗೀತ ಕಾರ್ಯಕ್ರಮ, ನೃತ್ಯ ಕಾರ್ಯಕ್ರಮ, ನೃತ್ಯ ರೂಪಕ ನಡೆಯಲಿದೆ.