ಸಾರಾಂಶ
ಪಿ.ರವಿಕುಮಾರ್ ಅವರು ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಕನಿಷ್ಠ ಗೌರವ ಇಟ್ಟುಕೊಂಡು ಮಾತನಾಡಬೇಕು. ಆರ್. ಅಶೋಕ್ ಅವರಿಗೆ ಮುಠ್ಠಾಳ, ಆಫ್ ಮೆಂಟಲ್ ಅಂತೆಲ್ಲಾ ಮಾತನಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಶಾಸಕ ಪಿ.ರವಿಕುಮಾರ್ ತಕ್ಷಣವೇ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಎನ್.ಎಸ್. ಇಂದ್ರೇಶ್ ಎಚ್ಚರಿಕೆ ನೀಡಿದರು. ವಿ.ಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಶಾಸಕ ಪಿ.ರವಿಕುಮಾರ್ ಅವರು ಮುಠ್ಠಾಳ ಎಂಬ ಅಸಂಬದ್ಧ ಪದಬಳಕೆ ಮಾಡಿದ್ದಾರೆ. ಇದು ಅವರ ಘನತೆಗೆ ತಕ್ಕದ್ದಲ್ಲ. ಶಾಸಕರು ತಮ್ಮ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಕಾವೇರಿ ಆರತಿಗೆ ಆರ್.ಅಶೋಕ್ ಸೇರಿದಂತೆ ನಾವ್ಯಾರೂ ವಿರೋಧ ಮಾಡಿಲ್ಲ. ಕಾವೇರಿ ಆರತಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಕಾಂಗ್ರೆಸ್ಸಿಗರು ಬಾಯಲ್ಲಿ ಹಿಂದುತ್ವದ ಬಗ್ಗೆ ಬರುತ್ತಿದೆ ಎಂದರೆ ಅದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದರು.ಪಿ.ರವಿಕುಮಾರ್ ಅವರು ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಕನಿಷ್ಠ ಗೌರವ ಇಟ್ಟುಕೊಂಡು ಮಾತನಾಡಬೇಕು. ಆರ್. ಅಶೋಕ್ ಅವರಿಗೆ ಮುಠ್ಠಾಳ, ಆಫ್ ಮೆಂಟಲ್ ಅಂತೆಲ್ಲಾ ಮಾತನಾಡಿದ್ದಾರೆ. ಅವರಿಗಿಂತ ನಮಗೂ ಚೆನ್ನಾಗಿ ಮಾತನಾಡಲು ಬರುತ್ತೆ. ಭಾರತೀಯ ಜನತಾ ಪಾರ್ಟಿಗೆ ಸಂಸ್ಕೃತಿ ಇದೆ. ಅವರಂತೆ ನಾವು ಕೀಳು ಮಟ್ಟಕ್ಕೆ ಇಳಿಯುವವರಲ್ಲ ಎಂದು ತಿರುಗೇಟು ನೀಡಿದರು.
ಆರ್. ಅಶೋಕ್ ಮತ್ತು ಬಿಜೆಪಿ ಬಗ್ಗೆ ಲಘುವಾಗಿ ಮಾತನಾಡಿರುವ ಶಾಸಕರು ತಕ್ಷಣ ಅಶೋಕ್ ಅವರ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.