ಸಾರಾಂಶ
ನಿವೇಶನ ರಹಿತರ ಪಟ್ಟಿ ತಯಾರಿಸಿ ನಿವೇಶನ ನೀಡಬೇಕೆಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಸಿಪಿಎಂ ವತಿಯಿಂದ ನಗರದಲ್ಲಿ ಶಾಸಕ ಎಚ್.ಆರ್. ಗವಿಯಪ್ಪಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಹೊಸಪೇಟೆ
ನಿವೇಶನ ರಹಿತರ ಪಟ್ಟಿ ತಯಾರಿಸಿ ನಿವೇಶನ ನೀಡಬೇಕೆಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಸಿಪಿಎಂ ವತಿಯಿಂದ ನಗರದಲ್ಲಿ ಶಾಸಕ ಎಚ್.ಆರ್. ಗವಿಯಪ್ಪಗೆ ಬುಧವಾರ ಮನವಿ ಸಲ್ಲಿಸಲಾಯಿತು.ನಗರದ 33, 34, 35ನೇ ವಾರ್ಡ್‌ಗಳಲ್ಲಿ ಅತಿ ಕಡುಬಡವರಿದ್ದು, ಕುಟುಂಬಗಳಿಗೆ ವಾಸ ಮಾಡಲು ನಿವೇಶನದ ಸಮಸ್ಯೆ ಇದೆ. ಈ ಕೂಡಲೇ ವಾರ್ಡ್ ಮಟ್ಟದ ನಿವೇಶನ ರಹಿತರ ಪಟ್ಟಿ ತಯಾರಿಸಿ ತಕ್ಷಣವೇ ನಿವೇಶನ ನೀಡಬೇಕು. ಅತಿ ಸಣ್ಣ ಬಡ ರೈತರು ಸರ್ಕಾರಿ ಜಮೀನಿನಲ್ಲಿ ಹಲವಾರು ವರ್ಷಗಳಿಂದ ಉಳುಮೆ ಮಾಡುತ್ತಾ ಬರುತ್ತಿದ್ದಾರೆ. ಕೈಬರಹದ ಪಹಣಿ ಪತ್ರ ಮತ್ತು ಈ ಹಿಂದೆ ಭೂ ನ್ಯಾಯ ಮಂಡಳಿ ನೀಡಿದ ಪ್ರತಿ ಇರುವುದರಿಂದ ಇವರುಗಳಿಗೆ ತಹಸೀಲ್ದಾರ್ ಮುಖಾಂತರ ಪಟ್ಟಾ ನೀಡಬೇಕು. ಈ ರೈತರ ಹಿನ್ನೆಲೆ ಕುರಿತು ಸ್ಥಾನಿಕ ವರದಿಯನ್ನಾದರೂ ನೀಡುವಂತೆ ಸೂಚನೆ ಕೊಡಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ವಿದ್ಯುತ್ ಅಡಚಣೆ ಮುಂಜಾಗ್ರತಾ ಮಾಹಿತಿ ನೀಡದೇ ಮನಸೊಇಚ್ಛೇ ತೆಗೆಯುವುದನ್ನು ನಿಯಂತ್ರಿಸಬೇಕು. ಮಳೆಗಾಲ ಆರಂಭವಾಗಿರುವುದರಿಂದ ಸಾಂಕ್ರಾಮಿಕ ರೋಗ ಹರಡದಂತೆ ವಾರ್ಡ್‌ಗಳಲ್ಲಿ ಕ್ರಿಮಿನಾಶಕ ಮತ್ತು ಫಾಗಿಂಗ್ ಸಿಂಪಡಿಸಬೇಕು ಮತ್ತು ಚರಂಡಿಗಳ ಸ್ವಚ್ಛತೆ ಕಾಪಾಡುವಂತೆ ಕ್ರಮವಹಿಸಲು ಸೂಚಿಸಬೇಕು. ದೇವದಾಸಿಯರಿಗೆ ಜೀವನ ನಡೆಸಲು ಐದು ಎಕರೆ ಜಮೀನು ಮತ್ತು ಪ್ರತಿ ತಿಂಗಳು ಪಿಂಚಣಿ ಕೊಡಬೇಕು. ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರಲ್ಲದವರನ್ನು ನೋಂದಾಯಿಸಿ, ಸರ್ಕಾರಿ ಸೌಲಭ್ಯವನ್ನು ದುರುಪಯೋಗ ಆಗುವುದನ್ನು ತಡೆಯಲು ಅಧಿಕಾರಿಗಳಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.ಸಿಪಿಎಂ ಮುಖಂಡರಾದ ಎನ್. ಯಲ್ಲಾಲಿಂಗ, ಆರ್.ಭಾಸ್ಕರ್ ರೆಡ್ಡಿ, ವಿ.ಸ್ವಾಮಿ, ಈ.ಮಂಜುನಾಥ, ಜಿ.ಕರೆಹನುಮಂತ, ಯರ‍್ರಿಸ್ವಾಮಿ, ಜಿ.ಆನಂದ, ಶಿವಮೂರ್ತಿ, ಎನ್.ಎಸ್. ಯಲ್ಲಮ್ಮ, ಗಾಳೆಪ್ಪ, ದುರುಗೇಶ್ ಮತ್ತಿತರರಿದ್ದರು.