ಸಿಎಂ ರಾಜೀನಾಮೆ ನೀಡದಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟ

| Published : Sep 25 2024, 12:51 AM IST

ಸಾರಾಂಶ

ಮುಡಾ ಹಗರಣದ ತನಿಖೆಗೆ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್‌ನ್ನು ಹೈಕೋರ್ಟ್ ಎತ್ತಿಹಿಡಿದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಿ, ರಾಜ್ಯ ಸರ್ಕಾರವನ್ನು ವಿಸರ್ಜಿಸಿ, ಹೊಸದಾಗಿ ಜನಾದೇಶಕ್ಕೆ ಹೋಗುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕ ನಗರದಲ್ಲಿ ಮಂಗಳವಾರ ಸಂಜೆ ಪ್ರತಿಭಟಿಸಿತು.

- ಬಿಜೆಪಿ ಕಚೇರಿಯಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆಯಲ್ಲಿ ರೇಣುಕಾಚಾರ್ಯ ಎಚ್ಚರಿಕೆ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಮುಡಾ ಹಗರಣದ ತನಿಖೆಗೆ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್‌ನ್ನು ಹೈಕೋರ್ಟ್ ಎತ್ತಿಹಿಡಿದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಿ, ರಾಜ್ಯ ಸರ್ಕಾರವನ್ನು ವಿಸರ್ಜಿಸಿ, ಹೊಸದಾಗಿ ಜನಾದೇಶಕ್ಕೆ ಹೋಗುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕ ನಗರದಲ್ಲಿ ಮಂಗಳವಾರ ಸಂಜೆ ಪ್ರತಿಭಟಿಸಿತು.

ನಗರದ ಕೆ.ಬಿ. ಬಡಾವಣೆಯ ಬಿಜೆಪಿ ಜಿಲ್ಲಾ ಕಚೇರಿಯಿಂದ ಮುಖಂಡರು, ಪದಾಧಿಕಾರಿಗಳ ನೇತೃತ್ವದಲ್ಲಿ ಅಶೋಕ ರಸ್ತೆ ಮಾರ್ಗವಾಗಿ ಜಯದೇವ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಘೋಷಣೆ ಕೂಗಲಾಯಿತು. ಪ್ರತಿಭಟನೆ ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ, ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಲಾಯಿತು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕಳೆದ ಒಂದೂವರೆ ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರ ಎಸಗುತ್ತಿದೆ. ಅಭಿವೃದ್ಧಿ, ದಲಿತ, ಹಿಂದುಳಿದ ವರ್ಗ, ಮಹಿಳಾ ಮತ್ತು ಹಿಂದು ವಿರೋಧಿ ಸರ್ಕಾರ ಇದಾಗಿದೆ. ತಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲವೆನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಂಗೋಲಿ ಕೆಳಗೆ ನುಸುಳುವಂತಹವರು. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಆರೋಪ ಕೇಳಿ ಬಂದಾಕ್ಷಣ ರಾಜೀನಾಮೆ ನೀಡಿದ್ದರು. ಆಗ ಹಾದಿ ಬೀದಿಯಲ್ಲಿ ರಾಜೀನಾಮೆಗೆ ಒತ್ತಾಯಿಸಿದ್ದ ಇದೇ ಸಿದ್ದರಾಮಯ್ಯ ಈಗ ತಮ್ಮ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಬಿಜೆಪಿ ಪಾದಯಾತ್ರೆ ಪ್ರತಿಫಲ:

ಯುವ ಮುಖಂಡ ಚನ್ನಗಿರಿಯ ಮಾಡಾಳ್ ಮಲ್ಲಿಕಾರ್ಜುನ ಮಾತನಾಡಿ, ಮುಡಾ ಹಗಣರದ ವಿರುದ್ಧ ಹೋರಾಟ, ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿ ನಡೆಸಿದ ಪಾದಯಾತ್ರೆಗೆ ಪ್ರತಿಫಲ ಎನ್ನುವಂತೆ ಇದೀಗ ಹೈಕೋರ್ಟ್ ಆದೇಶ ಬಂದಿದೆ. ಇದು ಬಿಜೆಪಿ ಹೋರಾಟಕ್ಕೆ ಸಂದ ಜಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಮಾತನಾಡಿ, 40 ವರ್ಷಗಳ ರಾಜಕೀಯ ಜೀವನದಲ್ಲೇ ಯಾವುದೇ ಭ್ರಷ್ಟಾಚಾರ ನಡೆಸಿಲ್ಲ, ಆಡಳಿತದಲ್ಲಿ ಒಂದು ಕಪ್ಪುಚುಕ್ಕೆಯೂ ಇಲ್ಲ ಎಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಪೂರ್ತಿ ವೈಟ್ನರ್ ಬಳಸಿದಾಗ ಕಪ್ಪುಚುಕ್ಕೆಯಾದರೂ ಎಲ್ಲಿ ಕಾಣುತ್ತದೆ ಎಂದು ಪ್ರಶ್ನಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ನಾಯ್ಕ, ಮಾಜಿ ಮೇಯರ್‌ಗಳಾದ ಎಸ್.ಟಿ.ವೀರೇಶ, ಬಿ.ಜಿ. ಅಜಯಕುಮಾರ, ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಕೆ.ಎಂ.ವೀರೇಶ ಪೈಲ್ವಾನ್, ಆರ್. ಶಿವಾನಂದ, ಲೋಕಿಕೆರೆ ನಾಗರಾಜ, ಬಿ.ಎಂ. ಸತೀಶ ಕೊಳೇನಹಳ್ಳಿ ಇತರರು ಇದ್ದರು.

- - - -24ಕೆಡಿವಿಜಿ7:

ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟಿಸಿ ಡಿಸಿ ಗಂಗಾಧರ ಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.