ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ನೀರಾವರಿ ಸೌಲಭ್ಯ ಉಪಯೋಗಿಸಿಕೊಂಡು ರಾಜ್ಯದ ಪ್ರಗತಿಗೆ ತೊಡಗಿರುವವರ ರೈತರ ಮೇಲೆ ನಾಲೆಗಳ ಮೂಲಕ ಹರಿಯುವ ನೀರನ್ನು ಬಳಸಿಕೊಳ್ಳಲು ಹಲವಾರು ನೀತಿ, ನಿಯಮಗಳ ವಿಧೇಯಕವನ್ನು ರಾಜ್ಯದ ನೀರಾವರಿ ಮಂತ್ರಿ ಡಿ.ಕೆ.ಶಿವಕುಮಾರ್ ಮಂಡನೆ ಮಾಡಿ ರೈತರಿಗೆ ಮಹಾ ವಂಚನೆ ಮಾಡಿದ್ದಾರೆ ಎಂದು ದಾವಣಗೆರೆ ವಿ.ವಿ ಸಿಂಡಿಕೇಟ್ ಮಾಜಿ ಸದಸ್ಯ, ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಸರ್ಕಾರದ ವಿರುದ್ಧ ಗುಡುಗಿದರು.ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಉಪ ಮುಖ್ಯಮಂತ್ರಿ, ನೀರಾವರಿ ಇಲಾಖೆ ಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಇವರು ರೈತರ ಮರಣ ಶಾಸನವಾದ ಪಂಪ್‌ಸೆಟ್‌ಗಳ ತೆರವುಗೊಳಿಸುವ ಮಸೂದೆ ಅಂಗೀಕರಿಸಿದ್ದು ನೀರಿನ ಕಳ್ಳತನ ಎಂಬ ಪದ ಉಪಯೋಗಿಸಿರುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿರುವ ಬಹುತೇಕ ರೈತರು ಬೆಳೆ ಬೆಳೆಯಲು ನಾಲೆಗಳಲ್ಲಿ ಬರುವ ನೀರನ್ನೇ ಅವಲಂಭಿಸಿದ್ದಾರೆ. ರೈತರು ಈ ನೀರನ್ನು ಬಳಸಿ ಬೆಳೆಗಳನ್ನೇ ಬೆಳೆಯುತ್ತಾರೆಯೇ ವಿನಃ ಯಾವುದೇ ಅಕ್ರಮ ಚಟುವಟಿಕೆಗಳಿಗೆ ನೀರನ್ನು ಬಳಸುವುದಿಲ್ಲ ಎಂದು ತಿಳಿಸುತ್ತಾ, ಚನ್ನಗಿರಿ ತಾಲೂಕಿನಲ್ಲಿಯೂ ಸಹಾ ಭದ್ರಾನಾಲೆ ಹರಿದುಹೋಗಿದ್ದು ಈ ಭಾಗದ ರೈತರು ಸಹಾ ತಮ್ಮ ಬೆಳೆಗಳಿಗೆ ಭದ್ರನಾಲೆ ನೀರನ್ನೇ ಅವಲಂಭಿಸಿದ್ದಾರೆ.ರೈತರಿಗೆ ಮಾರಕವಾದ ಈ ವಿಧೇಯಕವನ್ನು ಕಲಾಪದಲ್ಲಿ ಮಂಡನೆ ಮಾಡುವಾಗ ಈ ಕ್ಷೇತ್ರದ ಶಾಸಕರು ಯಾವುದೇ ವಿರೋಧ ವ್ಯಕ್ತ ಪಡಿಸದೆ ಇದ್ದು ಇವರ ಆರಾಧ್ಯ ದೈವ ಎಂದು ಹೇಳಿಕೊಳ್ಳುವ ನೀರಾವರಿ ಮಂತ್ರಿಗಳಾಗಿರುವ ಡಿ.ಕೆ.ಶಿವಕುಮಾರ್‌ರಿಗೆ ರೈತರ ಸಮಸ್ಯೆಗಳಬಗ್ಗೆ ಮನವರಿಕೆ ಮಾಡಿಕೊಡದೆ ಇರುವುದು ಖಂಡನೀಯ ಎಂದರು.
ಇಂತಹ ವಿಧೇಯಕ ರೈತರಿಗೆ ಮಾರಕವಾಗಿದ್ದು ಇದರ ವಿರುದ್ಧ ಕ್ಷೇತ್ರದ ಶಾಸಕ ಧ್ವನಿ ಎತ್ತಬೇಕು. ಇಲ್ಲವೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.ಭದ್ರನಾಲೆಯಲ್ಲಿ 2600 ಕ್ಯುಸೆಕ್ಸ್ ನೀರಿನ ಸಂಗ್ರಹಣೆ ಇದ್ದು, ಡ್ಯಾಂ ನಿರ್ಮಾಣವಾಗುವ ಸಂದರ್ಭದಲ್ಲಿ ಒಂದು ಲಕ್ಷ ಹೇಕ್ಟೆರ್ ಪ್ರದೇಶಕ್ಕೆ ನೀರುಣಿಸುವ ಯೋಜನೆ ರೂಪಿಸಲಾಗಿತ್ತು, ಪ್ರಸ್ತುತವಾಗಿ ಒಂದುವರೆ ಲಕ್ಷಕ್ಕೂ ಹೆಚ್ಚಿನ ಹೇಕ್ಟೆರ್ ಪ್ರದೇಶಕ್ಕೆ ನೀರುಣಿಸುತ್ತಿದ್ದು, ಕೃಷಿ ಚಟುವಟಿಕೆಗೆ 150 ಕ್ಯುಸೆಕ್ಸ್ ನೀರು ಮಾತ್ರ ರೈತರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಕ್ಷೇತ್ರದ ಶಾಸಕರು ರೈತರ ಹಿತಾಸಕ್ತಿ ಕಾಪಾಡಬೇಕಾಗಿದ್ದು ರೈತರ ಹೆಸರಿನಲ್ಲಿಯೇ ರಾಜಕಾರಣಕ್ಕೆ ಬಂದ ಇವರು ರೈತರ ಮರಣ ಶಾಸನದಂತಹ ವಿಧೇಯಕ ಮಂಡನೆ ಮಾಡುವ ಸಂದರ್ಭದಲ್ಲಿ ಯಾವುದೇ ವಿರೋಧವನ್ನು ಮಾಡದೆ ಇರುವುದು ನಿಮ್ಮ ಬೇಜವಾಬ್ದಾರಿತನ ತೋರಿಸುತ್ತಿದೆ ಎಂದರು.ರೈತರಿಗೆ ಮಾರಕವಾಗಿರುವಂತಹ ಈ ವಿಧೇಯಕ ಸರ್ಕಾರ ಹಿಂಪಡೆಯದೆ ಇದ್ದರೆ, ರಾಜ್ಯದ ಎಲ್ಲಾ ಭಾಗದ ರೈತರೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ತುಮ್ ಕೋಸ್ ಅಧ್ಯಕ್ಷ ಆರ್.ಎಂ.ರವಿ, ತಾಲೂಕು ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್, ದಿಗ್ಗೇನಹಳ್ಳಿ ನಾಗರಾಜ್, ರಾಜ್ಯ ಅಪೆಕ್ಸ್ ಬ್ಯಾಂಕ್ ನ ನಿರ್ದೇಶಕ ಲಿಂಗದಹಳ್ಳಿ ಸ್ವಾಮಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಗಂಗಗೊಂಡನಹಳ್ಳಿ ಜಗದೀಶ್, ಮಲಹಾಳ್ ಡಿ.ಸಿ.ಕುಮಾರಸ್ವಾಮಿ, ಮಂಗೇನಹಳ್ಳಿ ಪಿ.ಲೋಹಿತ್, ಸಂಗಮೇಶ್, ಪುರಸಭಾ ಸದಸ್ಯೆ ಕಮಲಾಹರೀಶ್, ನಂಜುಂಡಪ್ಪ, ಪಾರಿ ಪರಮೇಶ್ ಸೇರಿ ಇತರರು ಇದ್ದರು.