ಕೊಡಗು ಕಲಾವಿದರ ಸಂಘದ ವತಿಯಿಂದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಹಾಗೂ ಕೊಡವ ಧಾರಾವಾಹಿಗಳ ನಿರ್ದೇಶಕ ದಿ. ಎ.ಟಿ. ರಘು ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ವಿರಾಜಪೇಟೆಯಲ್ಲಿ ಭಾವಪೂರ್ಣವಾಗಿ ನೆರವೇರಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಕಲಾವಿದರ ಸಂಘದ ವತಿಯಿಂದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಹಾಗೂ ಕೊಡವ ಧಾರಾವಾಹಿಗಳ ನಿರ್ದೇಶಕ ದಿ. ಎ.ಟಿ. ರಘು ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ವಿರಾಜಪೇಟೆಯಲ್ಲಿ ಭಾವಪೂರ್ಣವಾಗಿ ನೆರವೇರಿತು. ನಗರದ ಕೆ.ಕೆ. ಗ್ರೂಪ್ಸ್ ಸಭಾಂಗಣದಲ್ಲಿ ಕೊಡಗು ಕಲಾವಿದರ ಸಂಘದ ಅಧ್ಯಕ್ಷ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾ ತಂತ್ರಜ್ಞ ಸುರೇಶ್ ಪಿ. ಹುಲಿಕೇರಿ ಅವರು ರಚಿಸಿರುವ ಎ.ಟಿ. ರಘು ಅವರ ಸಿನಿ ಪಯಣದ ‘ಹೆಬ್ಬುಲಿ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಲೇಖಕಿ ಉಳುವಂಗಡ ಕಾವೇರಿ ಉದಯ ಅವರು ರಚಿಸಿರುವ ಎ.ಟಿ. ರಘು ಸ್ಮರಣಾರ್ಥ ಸಾಹಿತ್ಯವನ್ನು ಟಿ.ಡಿ. ಮೋಹನ್ ಅವರು ಗಾಯನ ರೂಪದಲ್ಲಿ ಪ್ರಸ್ತುತಪಡಿಸಿದರು. ತಂದೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಎ.ಟಿ. ರಘು ಅವರ ಪುತ್ರಿ ಬಯವಂಡ ಬಿನು ಸಚಿನ್ ವ್ಯಕ್ತಿ ಜೀವಂತವಾಗಿರುವಾಗ ವ್ಯಕ್ತಿತ್ವದ ಮಹತ್ವ ತಿಳಿಯುವುದಿಲ್ಲ. ಆದರೆ ಅಗಲಿಕೆ ನಂತರ ಮಹತ್ವ ಭಾವಪೂರ್ಣವಾಗುತ್ತದೆ. ಕೊಡಗು ಕಲಾವಿದರ ಸಂಘದ ಕಲಾವಿದರಿಂದ ದೊರೆತ ಪ್ರೀತಿ, ಗೌರವಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.ಸಿನಿಮಾ ತಂತ್ರಜ್ಞ ಸುರೇಶ್ ಪಿ. ಹುಲಿಕೇರಿ ಅವರು ಮಾತನಾಡಿ, ಹಿರಿಯರಾದ ಎ.ಟಿ. ರಘು ಅವರೊಂದಿಗಿನ ಕಳೆದ 12 ವರ್ಷಗಳ ಒಡನಾಟ ಅವಿಸ್ಮರಣೀಯ ಎಂದರು. ಕಲಾವಿದರಾದ ನೆರವಂಡ ಉಮೇಶ್, ಪುಗ್ಗೇರ ಆಕಾಶ್, ಅಲ್ಲಾರಂಡ ವಿಠಲ್ ನಂಜಪ್ಪ, ಚೆರುವಾಳಂಡ ಸುಜಲ ನಾಣಯ್ಯ ಹಾಗೂ ತಾತಂಡ ಪ್ರಭಾ ನಾಣಯ್ಯ ಅವರು ಎ.ಟಿ. ರಘು ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನೆನಪಿಸಿಕೊಂಡರು. ಉಳುವಂಗಡ ಕಾವೇರಿ ಉದಯ್ ಕವನ ವಾಚನ ಮಾಡಿದರು. ತಾತಂಡ ಶ್ರೇಯ ಸೋಮಣ್ಣ ಅವರು ಭರತ ನಾಟ್ಯದ ಮೂಲಕ ಗಮನ ಸೆಳೆದರು.ಅಧ್ಯಕ್ಷರಾಗಿ ವಿಠಲ್ ನಾಣಯ್ಯ ಆಯ್ಕೆ:ಇದೇ ಸಂದರ್ಭ ಕೊಡಗು ಕಲಾವಿದರ ಸಂಘವನ್ನು ಪುನರ್ ರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ವಾಂಚಿರ ವಿಠಲ್ ನಾಣಯ್ಯ, ಕಾರ್ಯದರ್ಶಿಯಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಹಾಗೂ ಸಹ ಕಾರ್ಯದರ್ಶಿಯಾಗಿ ಮಲ್ಲಮಾಡ ಶ್ಯಾಮಲ ಸುನಿಲ್ ಅವಿರೋಧವಾಗಿ ಆಯ್ಕೆಯಾದರು. ಇತರ ಪದಾಧಿಕಾರಿಗಳನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ಪ್ರಮುಖರು ತಿಳಿಸಿದರು.ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್ ಅವರು ಕಳೆದ ಸಭೆಯ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್, ಪುಗ್ಗೇರ ಆಕಾಶ್, ಸೋಮಯಂಡ ಎಸ್. ಬೆಳ್ಯಪ್ಪ, ಅನಂತಶಯನ ಬಿ.ಜಿ., ಚೋಕಂಡ ನಾಜಿರ್, ಬಿದ್ದಂಡ ಉತಮ್ ಪೊನ್ನಪ್ಪ, ಆಚೆಯಡ ಗಗನ್ ಗಣಪತಿ, ಈರಮಂಡ ವಿಜಯ್, ನಾಪಂಡ ಆಶಾ ರವಿ, ಪೆಮ್ಮಚಂಡ ಉಷಾ ಗಣೇಶ್, ಸಂಕೇತ್ ಶಿವಪ್ಪ, ಜಾದೂಗಾರ್ ವಿಕ್ರಂ ಶೆಟ್ಟಿ, ಕಾಳಮಂಡ ಜಗತ್, ಕಾಳಮಂಡ ನಯನ, ಬಾಳೆಯಡ ಪ್ರತೀಶ್ ಪೂವಯ್ಯ, ತಾತಂಡ ನೈನಾ ಸೋಮಣ್ಣ ಸೇರಿದಂತೆ ಅನೇಕ ಕಲಾವಿದ ಸದಸ್ಯರು ಉಪಸ್ಥಿತರಿದ್ದರು.