ಸಾರಾಂಶ
ಜಿಲ್ಲೆಯ ಎಲ್ಲಾ ಜಮಾಅತ್ತುಗಳಿಗೆ ಮಾಹಿತಿ ರವಾನಿಸಲಾಗಿದೆ. ನಿಗದಿತ ನಮೂನೆಯ ಅರ್ಜಿಯನ್ನು ಭರ್ತಿ ಮಾಡಿ ರು. 3000 ಪ್ರವೇಶ ಶುಲ್ಕದೊಂದಿಗೆ ತಂಡಗಳ ಹೆಸರು ನೋಂದಾಯಿಸಲು ಜ.12ರವರೆಗೆ ಅವಕಾಶ ಇದೆ.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಈ ಬಾರಿ ಆಯೋಜಿಸಲು ಉದ್ದೇಶಿಸಲಾಗಿರುವ 15ನೇ ವರ್ಷದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ‘ಮುಸ್ಲಿಂ ಕಪ್-2024’ ಜ.19 ರಿಂದ 21 ರವರೆಗೆ ವಿರಾಜಪೇಟೆಯ ತಾಲೂಕು ಮೈದಾನದಲ್ಲಿ ಜರುಗಲಿದೆ. ಜಿಲ್ಲೆಯ ಮುಸ್ಲಿಂ ಜಮಾಅತ್ ವಾರು ತಂಡಗಳ ನಡುವೆ ಮೂರು ದಿನಗಳ ಕಾಲ ನಡೆಯಲಿರುವ ಈ ಪಂದಾವಳಿಗೆ ಅಗತ್ಯವಿರುವ ಸಿದ್ಧತೆ ಆರಂಭಿಸಲಾಗಿದೆ ಎಂದು ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಪಿ. ಎ. ಹನೀಫ್ ತಿಳಿಸಿದ್ದಾರೆ.ಪಂದ್ಯಾವಳಿಯ ಆಯೋಜನೆಗೆ ಸಂಬಂಧಿಸಿದಂತೆ ವಿರಾಜಪೇಟೆಯಲ್ಲಿ ಸಂಸ್ಥೆಯ ವತಿಯಿಂದ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 25 ಲಕ್ಷ ರು. ವೆಚ್ಚದಲ್ಲಿ ಈ ಪಂದ್ಯಾವಳಿಯನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಲು ರೂಪುರೇಷೆ ತಯಾರಾಗಿದ್ದು, ಜಿಲೆಯ ವಿವಿಧಡೆಯ ದಾನಿಗಳ ಮತ್ತು ಕ್ರೀಡಾ ಪ್ರೇಮಿಗಳ ಆರ್ಥಿಕ ನೆರವಿನಿಂದ ಈ ಕ್ರೀಡಾಕೂಟ ಯಶಸ್ವಿಗೊಳಿಸುವ ಆಶಾಭಾವನೆ ಹೊಂದಲಾಗಿದೆ. ಪಂದ್ಯಾವಳಿಗೆ ಸಂಬಂಧಿಸಿದಂತೆ ಕ್ರೀಡಾಪಟುಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಈ ಬಾರಿ 60ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.ಪಂದ್ಯಾವಳಿಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆಯ ಎಲ್ಲಾ ಜಮಾಅತ್ತುಗಳಿಗೆ ಮಾಹಿತಿ ರವಾನಿಸಲಾಗಿದೆ. ನಿಗದಿತ ನಮೂನೆಯ ಅರ್ಜಿಯನ್ನು ಭರ್ತಿ ಮಾಡಿ ರು. 3000 ಪ್ರವೇಶ ಶುಲ್ಕದೊಂದಿಗೆ ತಂಡಗಳ ಹೆಸರು ನೋಂದಾಯಿಸಲು ಜ.12ರವರೆಗೆ ಅವಕಾಶ ಇದೆ. ವಿರಾಜಪೇಟೆ ತಾಲೂಕು ಮೈದಾನದ ಸುತ್ತಲೂ ಗ್ಯಾಲರಿ ನಿರ್ಮಿಸುವ ಕಾರ್ಯ ಜನವರಿ ಮೊದಲ ವಾರದಿಂದ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ಮಾತನಾಡಿ, ಆಯಾ ಜಮಾಅತ್ ತಂಡಗಳನ್ನು ಹೊರತುಪಡಿಸಿ ಬರುವ ಬೇರೆ ಯಾವುದೇ ತಂಡಗಳಿಗೆ ಪಂದ್ಯಾವಳಿಯಲ್ಲಿ ಆಡಲು ಅವಕಾಶವಿರುವುದಿಲ್ಲ. ಸಂಬಂಧಿಸಿದ ಜಮಾಅತ್ ವ್ಯಾಪ್ತಿಯ ಸದಸ್ಯರು ಆಯಾ ಜಮಾಅತ್ತು ತಂಡದಲ್ಲಲ್ಲದೆ ಬೇರೆ ಜಮಾಅತ್ ತಂಡಗಳನ್ನು ಪ್ರತಿನಿಧಿಸುವಂತಿಲ್ಲ ಎಂದರು.ಹೆಚ್ಚಿನ ಮಾಹಿತಿಗೆ: 9686395731/19945635158/ 94499 89018 ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಿದರು.ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಪದಾಧಿಕಾರಿಗಳಾದ ಎಚ್. ಎ. ಹಂಸ. ಕರೀಂ ಕಡಂಗ, ಮೊಹಮ್ಮದ್ ರಾಫಿ ಕೋಳುಮಂಡ ರಫೀಕ್, ಕೆ.ಎಸ್. ಸೂಫಿ, ಏಜಾಜ್ ಅಹಮದ್, ಜಲೀಲ್ ಮಂದಮಾಡ ಮುನೀರ್ ಮತ್ತಿತರರಿದ್ದರು.