ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆ ಬೇಸಿಗೆ ಶಿಬಿರ ಸಮಾರೋಪ

| Published : May 29 2024, 01:02 AM IST

ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆ ಬೇಸಿಗೆ ಶಿಬಿರ ಸಮಾರೋಪ
Share this Article
  • FB
  • TW
  • Linkdin
  • Email

ಸಾರಾಂಶ

ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ರೋಟರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಒಂದು ತಿಂಗಳ ಅವಧಿಯ ಕಲಾರ್ಣವಾ ಬೇಸಿಗೆ ಶಿಬಿರ ಮುಕ್ತಾಯಗೊಂಡಿದೆ. 70ಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ವಿವಿಧ ತರಬೇತಿ ಪಡೆದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಬೇಸಿಗೆ ಶಿಬಿರಗಳ ಆಯೋಜನೆಯಿಂದ ಮಕ್ಕಳ ಮನಸ್ಸನ್ನು ಬದಲಾಯಿಸಬಹುದು ಎಂದು ವಿರಾಜಪೇಟೆ ರೋಟರಿ ಶಾಲೆಯ ಮುಖ್ಯೋುಪಾಧ್ಯಾಯಿನಿ ವಿಶಾಲಾಕ್ಷಿ ಅಭಿಪ್ರಾಯಪಟ್ಟಿದ್ದಾರೆ.

ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ರೋಟರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಒಂದು ತಿಂಗಳ ಅವಧಿಯ ಕಲಾರ್ಣವಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ನಂತರ ಬೇಸಿಗೆ ಶಿಬಿರಗಳನ್ನು ಆಯೋಜಿಸುವ ಪರಿಪಾಠ ವಿವಿಧಡೆ ನಡೆಯುತ್ತಾ ಬಂದಿದೆ. ಹಾಕಿ, ಕ್ರಿಕೆಟ್ ಸೇರಿದಂತೆ ಕ್ರೀಡಾ ಹಾಗೂ ವೃತ್ತಿಪರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಮುಖ್ಯ ಅಲ್ಲ. ಅದಕ್ಕಿಂತಲೂ ಮಿಗಿಲಾಗಿ ಮಕ್ಕಳಿಂದ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಪುಟ್ಟ ಮಕ್ಕಳ ಭವಿಷ್ಯವನ್ನು ರೂಪಿಸಲು ಶಿಬಿರಗಳು ಅಗತ್ಯ. ಸ್ವತಂತ್ರವಾಗಿ ಬದುಕುವ ವ್ಯವಸ್ಥೆಯನ್ನು ಇಂತಹ ಶಿಬಿರದಲ್ಲಿ ಕಲಿಸಿಕೊಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೂ ಇದು ಅತ್ಯಂತ ಉಪಯುಕ್ತ ಎಂದರು.

ಸಾಹಿತಿ ರಜಿತ ಕಾರ್ಯಪ್ಪ ಮಾತನಾಡಿ, ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಕ್ಕಳು ಮೊಬೈಲ್ ಮೊರೆ ಹೋಗುತ್ತಿದ್ದಾರೆ. ಪರೀಕ್ಷೆಗಳು ಕಳೆದ ನಂತರ ಮಕ್ಕಳು ಸಮಯ ವ್ಯರ್ಥ ಮಾಡುವ ಬದಲು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಹವ್ಯಾಸಗಳನ್ನು ವೃದ್ಧಿಸಿಕೊಳ್ಳಬಹುದು.

ನಾಟ್ಯಾಂಜಲಿ ನೃತ್ಯ ಸಂಸ್ಥೆ ಈಗಾಗಲೇ ಹೆಸರು ಮಾಡಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಜನಮನ್ನಣೆ ಗಳಿಸುವಂತಾಗಲಿ ಎಂದು ಆಶಿಸಿದರು.

ಶಿಬಿರದ ಆಯೋಜಕರು, ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ಸಂಸ್ಥಾಪಕಿ ವಿದುಷಿ ಹೇಮಾವತಿ ಕಾಂತರಾಜ್ ಅಧ್ಯಕ್ಷತೆ ವಹಿಸಿದ್ದರು.

ಶಿಬಿರಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಎಲ್ಲ ಶಿಬಿರಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಅರ್ಹತಾ ಪತ್ರ ವಿತರಿಸಿ ಶುಭ ಹಾರೈಸಿದರು.

ನೃತ್ಯ ತರಬೇತುದಾರ ಕಾವ್ಯಶ್ರೀ ಕಾಂತರಾಜ್, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಕೌಶಿ ಕಾವೇರಮ್ಮ, ದೃಶ್ಯ, ಧನ್ಯಶ್ರೀ, ಬಿಯಾಂಕಾ, ತಷ್ಮ ತಂಗಮ್ಮ, ಗಹನ, ಶ್ರೇಯ,ರೋಹನ್ ಸೇರಿದಂತೆ ಶಿಬಿರಾರ್ಥಿಗಳು, ಪೋಷಕರು ಇದ್ದರು. 70ಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ವಿವಿಧ ತರಬೇತಿ ಪಡೆದರು.