ಸಾರಾಂಶ
ಕನ್ನಡಪ್ರಭವಾರ್ತೆ ವಿರಾಜಪೇಟೆ
ಕೊಡಗಿನ ಮೊದಲ ಕ್ರೈಸ್ತ ದೇವಾಲಯವಾದ ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕೋತ್ಸವ ಹಾಗೂ ಸಂತ ಲೂರ್ದು ಮಾತೆಯ ವಾರ್ಷಿಕ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಹಬ್ಬದ ಹಿಂದಿನ ಮೂರು ದಿವಸಗಳಿಂದಲೇ ಧ್ವಜಾರೋಹಣ, ಬಲಿಪೂಜೆ, ಪ್ರಭೋದನೆ ಹಾಗೂ ನವೇನಾ ಪ್ರಾರ್ಥನೆಯು ಜರುಗಿತು. ತದನಂತರ ವಾರ್ಷಿಕೋತ್ಸವದ ದಿವಸ ಸಂಜೆ ಆಡಂಬರ ಗಾಯನ ಬಲಿಪೂಜೆ ನಡೆಯಿತು. ಈ ಬಲಿಪೂಜೆಯನ್ನು ಕೆ. ಆರ್. ಪೇಟೆ ಯ ಬಾಲ ಯೇಸು ದೇವಾಲಯದ ಧರ್ಮಗುರುಗಳಾದ ವಂದನೀಯ ಫಾದರ್ ಪೌಲೋಸ್ ತೋಮಸ್ ರವರು ನೆರವೇರಿಸಿದರು.
ಈ ಸಂದರ್ಭ ಗಾಯನ ವೃಂದದವರಿಂದ ದೇವರ ಗಾಯನ ಹಾಗೂ ಪ್ರಾರ್ಥನೆ ಜರುಗಿತು. ದೀಪಾರಾಧನೆ, ಬೈಬಲ್ ವಾಚನ ನಡೆಸಲಾಯಿತು. ತದನಂತರ ಸಂತ ಅನ್ನಮ್ಮ ರವರ ಹಾಗೂ ಸಂತ ಲೂರ್ದು ಮಾತೆಯ ಪ್ರತಿಮೆಗಳನ್ನು ವಿದ್ಯುತ್ ಹಾಗೂ ಹೂವು ಅಲಂಕೃತ ತೇರಿನಲ್ಲಿ ಪ್ರತಿಷ್ಠಾಪಿಸಿ ವಿರಾಜಪೇಟೆ ನಗರದಾದ್ಯಂತ ಮೆರವಣಿಗೆ ನಡೆಸಲಾಯಿತು.ಚರ್ಚ್ ಅವರಣದಿಂದ ಹೊರಟು ತೆಲುಗರ ಬೀದಿ, ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬ, ಖಾಸಗಿ ಬಸ್ ನಿಲ್ದಾಣ ಹಾಗೂ ಕೆ. ಎಸ್. ಆರ್. ಟಿ. ಸಿ. ಬಸ್ ನಿಲ್ದಾಣದ ಮೂಲಕವಾಗಿ ಮೆರವಣಿಗೆ ಸಾಗಿ ಪುನಃ ಚರ್ಚ್ ನಲ್ಲಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದು ಮೇಣದ ಬತ್ತಿಗಳನ್ನು ಹಚ್ಚಿ ಹಿಡಿದು ಮೆರವಣಿಗೆಯ ಉದ್ದಕ್ಕೂ ಜಪಸಾರ ಹಾಗೂ ದೇವರ ನಾಮಾವಳಿಯನ್ನು ಸ್ತುತಿಸಿದರು. ತದನಂತರ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ, ಪರಮ ಪ್ರಸಾದ ದ ಆಶೀರ್ವಾದದ ಬಳಿಕ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣಾ ಸೇವೆಯನ್ನು ಮಾಡಲಾಯಿತು. ಭಕ್ತರು ಸಿಡಿಮದ್ದನ್ನು ಸಿಡಿಸುವುದರ ಮೂಲಕ ಸಂಭ್ರಮಿಸಿದರು.
ಧಾರ್ಮಿಕ ಕಾರ್ಯಕ್ರಮಗಳು ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ರೆ. ಫಾ. ಜೇಮ್ಸ್ ಡೊಮಿನಿಕ್ ಹಾಗೂ ಧರ್ಮಗುರುಗಳು, ಸಂತ ಅನ್ನಮ್ಮ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು ರವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಕೊಡಗು ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ವಿವಿಧ ಚರ್ಚ್ ಗಳ ಧರ್ಮಗುರುಗಳು ಉಪಸ್ಥಿತರಿದ್ದರು. ವಾರ್ಷಿಕೋತ್ಸವ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಉಪಸ್ಥಿತರಿದ್ದರು.ಶಾಸಕ ಎ. ಎಸ್. ಪೊನ್ನಣ್ಣ ಭೇಟಿ ಹಾಗೂ ಶುಭ ಹಾರೈಕೆ: ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕೋತ್ಸವ ಆಚರಣೆಯ ಸಂದರ್ಭ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ಅವರು ಭೇಟಿಯನ್ನು ನೀಡಿ ಜನರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಮತ್ತು ನಾಡಿನ ಒಳಿತಿಗಾಗಿ ಪ್ರಾರ್ಥನೆಯನ್ನು ಮಾಡಿದರು.