ವಿರಾಜಪೇಟೆಯ ಐ.ಕ್ಯೂ.ಎ.ಸಿ, ರಾಜ್ಯಶಾಸ್ತ್ರ ವಿಭಾಗ ಮತ್ತು ಚುನಾವಣಾ ಸಾಕ್ಷರತಾ ಸಮಿತಿ ವತಿಯಿಂದ ಬುಧವಾರ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮತದಾನ ಜಾಗೃತಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿರಾಜಪೇಟೆಯ ಐ.ಕ್ಯೂ.ಎ.ಸಿ, ರಾಜ್ಯಶಾಸ್ತ್ರ ವಿಭಾಗ ಮತ್ತು ಚುನಾವಣಾ ಸಾಕ್ಷರತಾ ಸಮಿತಿ ವತಿಯಿಂದ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಮತದಾನ ಜಾಗೃತಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿ, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ನಿರ್ಮಲಾ ಎಚ್‌.ಪಿ. ಮಾತನಾಡಿ, ಇಂದಿನ ಯುವ ಸಮುದಾಯವು ಮತದಾನವನ್ನು ಕೇವಲ ಹಕ್ಕು ಎಂದು ಪರಿಗಣಿಸದೆ ದೇಶದ ಜವಾಬ್ದಾರಿಯುತ ನಾಗರಿಕನಾಗಿ ಮತದಾನ ನನ್ನ ಕರ್ತವ್ಯವೆಂದು ಭಾವಿಸಬೇಕು. ಸದೃಢ ಭಾರತವನ್ನು ನಿರ್ಮಿಸುವಲ್ಲಿ ವಿವೇಚನೆಯಿಂದ ನಮ್ಮ ರಾಜಕೀಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಭವಿಷ್ಯದ ಭಾರತ ನಿರ್ಮಿಸಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ ದಯಾನಂದ ಮಾತನಾಡಿ, ವಿದ್ಯಾವಂತ ಯುವಜನತೆ ಮತದಾನದಂತಹ ರಾಜಕೀಯ ಚಟುವಟಿಕೆಗಳನ್ನು ಅಸಡ್ಡೆಯಿಂದ ಕಾಣುತ್ತಿದ್ದು, ಇದು ನಮ್ಮ ದೇಶದ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಯುವಜನತೆಯು ಹೆಚ್ಚು ಪರಿಣಾಮಕಾರಿಯಾಗಿ ಈ ಕುರಿತು ಆಲೋಚಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತದಾನ ಮಾಡುವ ಮೂಲಕ ಭವ್ಯ ಭಾರತದ ನಿರ್ಮಾನಕ್ಕೆ ನಾಂದಿ ಹಾಡಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.

ಕಾಲೇಜಿನ ಚುನಾವಣಾ ಸಾಕ್ಷರತಾ ಸಮಿತಿ ಕ್ಯಾಂಪಸ್ ರಾಯಭಾರಿ ತೃತೀಯ ಬಿ.ಕಾಂ.ನ ಸಚಿನ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಪ್ರಥಮ ಬಿ.ಎ. ವಿದ್ಯಾರ್ಥಿ ಕೀರ್ತನಾ ಮತದಾನ ಜಾಗೃತಿ ಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ದಿವ್ಯಾ ಆರ್. ಮತ್ತು ಚುನಾವಣಾ ಸಾಕ್ಷರತಾ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ದಿವ್ಯ ಎಂ.ಬಿ. ಹಾಜರಿದ್ದರು.