ವಿರಾಜಪೇಟೆ: ಲಿಟಲ್ ಸ್ಕಾಲರ್ಸ್ ಅಕಾಡೆಮಿಯಿಂದ ಮಹಿಳಾ ಜಾಗೃತಿ

| Published : Dec 21 2023, 01:15 AM IST

ವಿರಾಜಪೇಟೆ: ಲಿಟಲ್ ಸ್ಕಾಲರ್ಸ್ ಅಕಾಡೆಮಿಯಿಂದ ಮಹಿಳಾ ಜಾಗೃತಿ
Share this Article
  • FB
  • TW
  • Linkdin
  • Email

ಸಾರಾಂಶ

ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ವಿರಾಜಪೇಟೆ ನಗರದಲ್ಲಿ ಮಹಿಳಾ ಜಾಗೃತಿ ಅಭಿಯಾನ ಕಾರ್ಯಕ್ರಮ ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಬೆಳೆಸಿ ಎಂಬ ಧ್ಯೇಯ ವಾಕ್ಯದಡಿ ನಡೆಯಿತು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ವಿರಾಜಪೇಟೆ ನಗರದಲ್ಲಿ ಮಹಿಳಾ ಜಾಗೃತಿ ಅಭಿಯಾನ ಕಾರ್ಯಕ್ರಮ ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಬೆಳೆಸಿ ಎಂಬ ಧ್ಯೇಯ ವಾಕ್ಯದಡಿ ನಡೆಯಿತು.

ವಿರಾಜಪೇಟೆ ಚೌಕಿಯಿಂದ ಆರಂಭಗೊಂಡ ಈ ಜಾಗೃತಿ ಕಾರ್ಯಕ್ರಮದಲ್ಲಿ ಮೊದಲಿಗೆ ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.

ಈ ಸಂದರ್ಭ ಮಾತನಾಡಿದ ಪಶು ವೈದ್ಯಾಧಿಕಾರಿ ಡಾ. ರಾಕೇಶ್, ಹೆಣ್ಣು ಮಕ್ಕಳು ಮನೆಯಲ್ಲಿ ಕೆಲಸ ಮಾಡಲು ಮಾತ್ರ ಅಲ್ಲ, ಅವಳು ಎಲ್ಲ ರೀತಿಯಲ್ಲಿಯೂ ಮುಂದಿದ್ದಾಳೆ ಎಂದು ತಿಳಿಸಿದರು.

ನಂತರ ವಿರಾಜಪೇಟೆಯ ಗಡಿಯಾರ ಕಂಬದ ಬಳಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಈ ವೇಳೆ ವಿರಾಜಪೇಟೆ ಪುರಸಭೆ ಸದಸ್ಯ ಮೊಹಮದ್ ರಾಫಿ ಮಾತನಾಡಿ, ಹೆಣ್ಣು ಮಕ್ಕಳ ಮೇಲಿನ ಶೋಷಣೆಯನ್ನು ನಿಲ್ಲಿಸಿ, ಅವರಿಗೆ ಶಿಕ್ಷಣವನ್ನು ನೀಡಿ. ಶಿಕ್ಷಣವನ್ನು ನೀಡಿದಾಗ ಅವರು ಎಲ್ಲ ರೀತಿಯಲ್ಲಿಯೂ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.

ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಸ್ವ ರಕ್ಷಣೆಯ ಬಗ್ಗೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಗೀತಾ ಪಾಲ್ಗೊಂಡು, ಹೆಣ್ಣು ಮಕ್ಕಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಪೊಲೀಸ್ ಠಾಣೆಯ ಸಹಾಯಕ ದೂರವಾಣಿ ಸಂಖ್ಯೆಯಾದ 112 ಗೆ ಕರೆ ಮಾಡಿ ಎಂದು ಮಾಹಿತಿ ನೀಡಿದರು.

ಲಿಟಲ್ ಸ್ಕಾಲರ್ಸ್ ಸಂಸ್ಥೆಯ ಮುಖ್ಯಸ್ಥೆ ಹಾಗೂ ಉದ್ಯಮಿ ಪೂಜಾ ರವೀಂದ್ರ ಮಾತನಾಡಿ, ನಮ್ಮ ವಿದ್ಯಾಸಂಸ್ಥೆಯಿಂದ ಹತ್ತು ಹಲವು ಕಾರ್ಯಕ್ರಮ ನಡೆಸುತ್ತಿದ್ದು, ಈ ಕಾರ್ಯಕ್ರಮವು ವಿನೂತನ ಕಾರ್ಯಕ್ರಮವಾಗಿದೆ. ಮಹಿಳಾ ಸಬಲೀಕರಣದ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆನ್ನುವುದೇ ಇದರ ಉದ್ದೇಶ ಎಂದರು.

ಈ ಸಂದರ್ಭ ಶಾಲೆಯ ವತಿಯಿಂದ ಸಾರ್ವಜನಿಕರಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಮಾಹಿತಿಯನ್ನು ನೀಡಲಾಯಿತು ಮತ್ತು ಅರ್ಜಿಗಳನ್ನು ವಿತರಿಸಲಾಯಿತು. ಲಿಟಲ್ ಸ್ಕಾಲರ್ಸ್ ಶಾಲಾ ಶಿಕ್ಷಕರು, ಶಾಲಾ ಮಕ್ಕಳು, ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.