ಅನಾಥ, ಅಂಗವೂನ ಬೀದಿನಾಯಿಗಳ ಆರೈಕೆ ಮಾಡುವ ವಿರಂಜಯ್ ಹೆಗ್ಡೆ

| Published : May 17 2024, 12:36 AM IST

ಸಾರಾಂಶ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜೆಗೋಳಿ ಮುಡಾರ್ ಗ್ರಾಮದ ಸುಮ್ಮಬಂಡಸಾಲೆಗೆ ಒಮ್ಮೆ ಭೇಟಿ ನೀಡಬೇಕು. ಅಲ್ಲಿ ೩೫೦ಕ್ಕೂ ಹೆಚ್ಚು ವಿವಿಧ ಸ್ಥಿತಿಯಲ್ಲಿರುವ ನಾಯಿಗಳು, ಅಂಗಊನಗೊಂಡ ದನಕರುಗಳನ್ನು ಆರೈಕೆ ಮಾಡುವ ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ಎಂಬ ಸಂಸ್ಥೆ ಕಾಣಿಸುತ್ತದೆ.

ಉಲುಕ್ ಉಪ್ಪಿನಂಗಡಿ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ನಮ್ಮಂತೆ ಪ್ರಾಣಿಗಳಿಗೂ ಹಸಿವು ಇದೆ.. ಬದುಕು ಇದೆ, ಭಾವನೆಗಳಿಗೆ ಎನ್ನುತ್ತಾರೆ ಅನಾಥ ಮೂಕಪ್ರಾಣಿಗಳ ಪಾಲಿಗೆ ಸಂರಕ್ಷಕನಾಗಿರುವ ಎಂ.ಕೆ. ವಿರಂಜಯ್‌ ಹೆಗ್ಡೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜೆಗೋಳಿ ಮುಡಾರ್ ಗ್ರಾಮದ ಸುಮ್ಮಬಂಡಸಾಲೆಗೆ ಒಮ್ಮೆ ಭೇಟಿ ನೀಡಬೇಕು. ಅಲ್ಲಿ ೩೫೦ಕ್ಕೂ ಹೆಚ್ಚು ವಿವಿಧ ಸ್ಥಿತಿಯಲ್ಲಿರುವ ನಾಯಿಗಳು, ಅಂಗಊನಗೊಂಡ ದನಕರುಗಳನ್ನು ಆರೈಕೆ ಮಾಡುವ ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ಎಂಬ ಸಂಸ್ಥೆ ಕಾಣಿಸುತ್ತದೆ. ಅಪಘಾತಕ್ಕೀಡಾಗಿ ಅಂಗವೈಕಲ್ಯತೆಗೆ ಒಳಗಾದ ನಾಯಿಗಳ್ನು ಚಿಕಿತ್ಸೆ ನೀಡಿ ಇಲ್ಲಿ ಆರೈಕೆ ಮಾಡಲಾಗುತ್ತಿದೆ. ಕಂಡ ಕಂಡವರ ಮೇಲೇರಿ ಹೋಗುವ ಆಕ್ರಮಣಕಾರಿ ಸ್ವಭಾವದ ನಾಯಿಗಳನ್ನು ಕೊಲ್ಲುವ ಅನಿವಾರ್ಯತೆ ಉಂಟಾದಾಗ ಕೊಲ್ಲಬೇಡಿ ಅವುಗಳನ್ನು ತಂದುಕೊಡಿ ಎನ್ನುತ್ತಾರೆ ಎಂ.ಕೆ. ವಿರಂಜಯ್ ಹೆಗ್ಡೆ ಆಲಿಯಾಸ್ ವೀರು ಜೈನ್. ಇವರು ಅನಾಥ, ಅನಾರೋಗ್ಯಪೀಡಿತ ಮೂಕಪ್ರಾಣಿಗಳ ಪಾಲಿಗೆ ನೈಜ ರಕ್ಷಕರಾಗಿದ್ದಾರೆ.

ಬಾಲ್ಯದಿಂದಲೇ ಪ್ರಾಣಿಗಳ ಬಗ್ಗೆ ಕಾಳಜಿ: ಪ್ರಾಣಿ ಮೇಲಿನ ಪ್ರೀತಿ, ಬೀದಿಗಳಲ್ಲಿ ಅಪಘಾತಕ್ಕೀಡಾಗಿ ಕೈಕಾಲು ಮುರಿದುಕೊಂಡು ವೇದನೆ ಪಡುವ ಮೂಕಪ್ರಾಣಿಗಳ ಬಗ್ಗೆ ಇವರಿಗೆ ಬಾಲ್ಯದಿಂದಲೇ ಆಸಕ್ತಿ. ಕೊರೋನಾ ಲಾಕ್‌ ಡೌನ್ ಕಾರಣದಿಂದ ಎಲ್ಲೆಡೆ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಾಗ ಬೀದಿ ನಾಯಿಗಳಿಗೆ ತಿನ್ನಲು ಏನೂ ಸಿಗುತ್ತಿಲ್ಲವೆಂಬುದನ್ನು ಅರಿತ ಇವರು ಬೇಕರಿಗಳಿಂದ ತಿಂಡಿ ಖರೀದಿಸಿ ಪರಿಸರದ ಮೂರು ಗ್ರಾಮಗಳ ಬೀದಿ ನಾಯಿಗಳಿಗೆ ನೀಡುತ್ತಿದ್ದರು. ಈ ವೇಳೆ ಅನಾಥ ನಾಯಿ, ದನಕರುಗಳು ಪಡುವ ಸಂಕಷ್ಟವನ್ನು ಕಣ್ಣಾರೆ ಕಂಡ ಅವರು ಇಂತಹ ಪ್ರಾಣಿಗಳಿಗೆ ಚಿಕಿತ್ಸೆ ಸಹಿತ ಪುನರ್ವಸತಿ ಕಲ್ಪಿಸಬೇಕೆಂದು ಸಂಕಲ್ಪಿಸಿ ತಮ್ಮ ಭೂಮಿಯಲ್ಲಿಯೇ ಅಹಿಂಸಾ ಎನಿಮಲ್ ಕೇರ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು.

ದಿನ ನಿತ್ಯ ಹತ್ತು ಸಾವಿರ ರುಪಾಯಿಗೂ ಹೆಚ್ಚಿನ ಖರ್ಚು ತಗಲುತ್ತಿರುವುದರಿಂದ ದಾನಿಗಳ ಸಹಕಾರವನ್ನು ಬಯಸುವ ಸಲುವಾಗಿ ೨೦೨೧ ರಲ್ಲಿ ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ದಾನಿಗಳ , ಪ್ರಾಣಿಪ್ರಿಯರ ಸಹಕಾರವನ್ನು ಸರ್ಕಾರದ ನಿಯಮಾವಳಿಯನುಸಾರ ಪಡೆದುಕೊಳ್ಳಲು ಮುಂದಾಗಿದ್ದಾರೆ. ಸುವ್ಯವಸ್ಥಿತ ಕಟ್ಟಡಗಳು, ಶೆಡ್‌ಗಳನ್ನು ನಿರ್ಮಿಸಿದ್ದಾರೆ. ನಾಯಿಗಳ ಗುಣ, ವರ್ತನೆ ಆಧರಿಸಿ ಅವುಗಳನ್ನು ತೆರೆದ ಶೆಡ್, ಬೋನಿಂತಹ ಶೆಡ್, ಸಿಂಗಲ್ ಬೋನ್ ಮತ್ತು ಮುಕ್ತ ಪರಿಸರ ಎಂಬ ವಿಭಾಗಗಳಲ್ಲಿ ಸಾಕುತ್ತಿದ್ದಾರೆ. ಯಾವೆಲ್ಲಾ ನಾಯಿಗಳಿಗೆ ಚಿಕಿತ್ಸೆಯ ಅವಶ್ಯಕತೆ ಇದೆಯೋ ಅದೆಲ್ಲದಕ್ಕೂ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ.

ಜನತೆಯ ತಿರಸ್ಕಾರಕ್ಕೆ ತುತ್ತಾದ ಕಜ್ಜಿ ನಾಯಿ, ಸೊಂಟ ಮುರಿದುಕೊಂಡ , ಕಾಲು ಸೊಟ್ಟಾಗಿರುವ ನಾಯಿಗಳೂ ಕೂಡಾ ಅವರ ಆರೈಕೆಯಲ್ಲಿದ್ದು, ಅವೆಲ್ಲದಕ್ಕೂ ದಿನದ ಮೂರು ಹೊತ್ತು ಪೌಷ್ಟಿಕ ಆಹಾರವನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ೩೫೦ ನಾಯಿಗಳ ಪೈಕಿ ಒಂದು ನಾಯಿ ಮಾತ್ರ ಎಲ್ಲರನ್ನೂ ಕಂಡಾಗಲೂ ಬೊಗಳುತ್ತಿದ್ದರೆ, ಉಳಿದೆಲ್ಲಾ ನಾಯಿಗಳು ಇವರನ್ನು ಕಂಡಾಗ ಬಾಲ ಅಲ್ಲಾಡಿಸುತ್ತಾ ಆತ್ಮೀಯತೆಯನ್ನು ತೋರುತ್ತಿವೆ.

ದನಕರುಗಳಿಗೂ ಗೋ ಶಾಲೆ: ವಾಹನ ಅಪಘಾತವಾಗಿ ಕೈಕಾಲು ಮುರಿದುಕೊಂಡು, ಚಿಕಿತ್ಸೆ ಇಲ್ಲದೆ ಬೀದಿಯಲ್ಲಿ ನರಳುತ್ತಿದ್ದ ದನಕರುಗಳನ್ನೂ ಕೂಡಾ ಅವರು ತಮ್ಮ ಕೇಂದ್ರಕ್ಕೆ ತಂದಿರಿಸಿ ಅಗತ್ಯ ಚಿಕಿತ್ಸೆ ನೀಡಿ ಸಾಕಿ ಸಲಹುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ವಾಹನ ಡಿಕ್ಕಿಯಾಗಿ ಹೊಟ್ಟೆ ಭಾಗ ಹರಿದು ಹೋಗಿದ್ದ ದನವೊಂದನ್ನು ತಂದು ಚಿಕಿತ್ಸೆ ನೀಡಿದ್ದು. ಗುಣಮುಖವಾಗುತ್ತಿರುವ ವೇಳೆಯಲ್ಲೇ ಅದು ಮುದ್ದಾದ ಕರುವಿಗೆ ಜನ್ಮ ನೀಡಿದೆ. ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಕಾಲು ಗ್ಯಾಂಗ್ರೀನ್ ಆಗಿ ಸಂಕಷ್ಟ ಪಡುತ್ತಿದ್ದ ಹೋರಿಗಳಿಗೆ ಕಾಲು ಕತ್ತರಿಸಿ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಿ ಸಲಹುತ್ತಿದ್ದಾರೆ.

ಉತ್ತಮ ಕ್ರೀಡಾಪಟು

ಬ್ಯಾಡ್ಮಿಂಟನ್ ಕ್ರೀಡಾಪಟುವಾಗಿರುವ ಇವರು ತಮ್ಮ ಮನೆ ಸಮೀಪದಲ್ಲೇ ಇಂಡೋರ್ ಕ್ರೀಡಾಂಗಣವನ್ನು ನಿರ್ಮಿಸಿ ಅಲ್ಲಿ ದಿನ ನಿತ್ಯ ಬ್ಯಾಡ್ಮಿಂಟನ್ ಪಂದ್ಯವಾಡಲು ಅವಕಾಶ ಕಲ್ಪಿಸಿದ್ದಾರೆ. ಮಾತ್ರವಲ್ಲದೆ ರಜಾ ಕಾಲದಲ್ಲಿ ಆಸಕ್ತ ಮಕ್ಕಳಿಗೆ ಬ್ಯಾಡ್ಮಿಂಟನ್ ತರಬೇತಿಯನ್ನು ನೀಡುತ್ತಿದ್ದಾರೆ. ತರಬೇತಿ ಪಡೆದ ಮಕ್ಕಳು ನೀಡುವ ಶುಲ್ಕವನ್ನೂ ಈ ಶ್ವಾನ ಕೇಂದ್ರದ ನಿರ್ವಹಣೆಗೆ ಬಳಸುತ್ತಿರುವ ಇವರು, ತನ್ನ ಅಂಗಡಿಯ ಆದಾಯ, ಕೃಷಿ ಆದಾಯ ಎಲ್ಲವನ್ನೂ ಮೂಕ ಪ್ರಾಣಿಗಳಿಗಾಗಿ ವಿನಿಯೋಗಿಸುತ್ತಿರುವುದು ಶ್ಲಾಘನಾರ್ಹ ಕಾರ್ಯ.

ಮೂಕಪ್ರಾಣಿಗಳ ಆರೈಕೆ ಮಾಡುತ್ತಿರುವ ಎಂ.ಕೆ. ವಿರಂಜಯ್ ಹೆಗ್ಡೆ ಆಲಿಯಾಸ್ ವೀರು ಜೈನ್ ಅವರಿಗೆ ಸಹಾಯ ಮಾಡ ಬಯಸುವವರು ಅವರ ಮೊಬೈಲ್‌ ನಂಬರ್‌ ೯೬೧೧೯೪೪೭೬೩ ನ್ನು ಸಂಪರ್ಕಿಸಬಹುದು.