ವೀರೇಂದ್ರ ಹೆಗ್ಗಡೆ ಸ್ಫೂರ್ತಿಯಿಂದ ಮಹಿಳಾ ಉದ್ಯೋಗ ಮೇಳ

| Published : Dec 17 2024, 01:02 AM IST

ಸಾರಾಂಶ

ಮನೆಯ ಕೆಲಸದ ಜತೆಜತೆಗೆ ಉದ್ಯೋಗ ಮಾಡುವ ಸವಾಲಿನ ಕೆಲಸ ಮಹಿಳೆಯರದ್ದಾಗಿದೆ. ಹಲವಾರು ಸಂಶೋಧನೆಗಳ ಪ್ರಕಾರ ಮಹಿಳೆಯರು ಪುರುಷರಿಗಿಂತ ಚೆನ್ನಾಗಿ ಕೆಲಸ ಮಾಡಬಲ್ಲರು ಎಂಬುದನ್ನು ಸಾಬೀತುಪಡಿಸಿವೆ.

ಧಾರವಾಡ:

ಡಾ. ವೀರೇಂದ್ರ ಹೆಗ್ಗಡೆ ಅವರು ಸ್ತ್ರೀ ಸಬಲೀಕರಣಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದು, ಅವರ ಕಾರ್ಯದ ಸ್ಫೂರ್ತಿಯಿಂದ ರ್‍ಯಾಪಿಡ್‌ ಸಂಸ್ಥೆಯೊಂದಿಗೆ ಆಯೋಜಿಸಿರುವ ಮಹಿಳಾ ಉದ್ಯೋಗ ಮೇಳ ಯಶಸ್ವಿಯಾಗಲಿ ಎಂದು ಜೆಎಸ್ಸೆಸ್‌ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ಜೆಎಸ್ಸೆಸ್‌ ಕಾಲೇಜು ಆವರಣದಲ್ಲಿ ರ್‍ಯಾಪಿಡ್‌ ಸಂಸ್ಥೆ ಆಯೋಜಿಸಿದ್ದ ಮಹಿಳಾ ಉದ್ಯೋಗ ಮೇಳ ಉದ್ಘಾಟಿಸಿದ ಅವರು, ಉದ್ಯೋಗ ಅವಶ್ಯವಿರುವ ಮಹಿಳೆ ಯಾವುದೇ ಸಂಕೋಚವಿಲ್ಲದೆ ಮನೆಯಿಂದ ಹೊರಬಂದು ತಮಗೆ ಸೂಕ್ತವಾದ ಉದ್ಯೋಗ ಆರಿಸಿಕೊಳ್ಳಬೇಕು. ಈ ಮೂಲಕ ನೆಮ್ಮದಿಯಿಂದ ಜೀವನ ನಡೆಸಬೇಕು ಎಂದರು.

ಈ ಮೇಳದಲ್ಲಿ 46 ಕಂಪನಿಗಳಲ್ಲಿ 5000ಕ್ಕಿಂತಲೂ ಹೆಚ್ಚಿನ ಉದ್ಯೋಗಗಳಿಗಾಗಿ ಸಂದರ್ಶನ ನಡೆಸಲಿದ್ದು, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಪದೇ ಪದೇ ಉದ್ಯೋಗ ಬದಲಿಸಬೇಡಿ, ಉದ್ಯೋಗದಾತರ ವಿಶ್ವಾಸ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಕರ್ನಾಟಕ ಕಾನೂನು ವಿವಿ ಕುಲಸಚಿವೆ ಅನುರಾಧ ವಸ್ತ್ರದ, ಇಂದು ಮಹಿಳೆ ಪ್ರತಿ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದ್ದಾಳೆ. ಉದ್ಯೋಗದಲ್ಲಿ ಮಹಿಳೆ ಹಾಗೂ ಪುರುಷರಿಗೆ ಸಮಾನ ಅವಕಾಶಗಳಿವೆ. ಮನೆಯ ಕೆಲಸದ ಜತೆಜತೆಗೆ ಉದ್ಯೋಗ ಮಾಡುವ ಸವಾಲಿನ ಕೆಲಸ ಮಹಿಳೆಯರದ್ದಾಗಿದೆ. ಹಲವಾರು ಸಂಶೋಧನೆಗಳ ಪ್ರಕಾರ ಮಹಿಳೆಯರು ಪುರುಷರಿಗಿಂತ ಚೆನ್ನಾಗಿ ಕೆಲಸ ಮಾಡಬಲ್ಲರು ಎಂಬುದನ್ನು ಸಾಬೀತುಪಡಿಸಿವೆ. ಮಹಿಳೆ ಆರ್ಥಿಕವಾಗಿ ಸಬಲವಾದರೆ ಕುಟುಂಬದ ಆರ್ಥಿಕತೆಯು ಉತ್ತಮವಾಗುತ್ತದೆ. ಇಂತಹ ಉದ್ಯೋಗಮೇಳಗಳು ಜಾಣ್ಮೆ, ಕೌಶಲ್ಯ ಪ್ರತಿಭೆಯ ಅನಾವರಣಕ್ಕೆ ಒಂದು ಸದಾವಕಾಶ ಎಂದರು.

ನಬಾರ್ಡ್‌ ಸಹಾಯಕ ನಿರ್ದೇಶಕ ಮಯೂರ್ ಕಾಂಬಳೆ ಮಾತನಾಡಿ, ಧಾರವಾಡದಲ್ಲಿ ಕೈಗಾರಿಕೆಗಳ ಬೆಳವಣಿಗೆ ಕ್ಷೀಪ್ರ ಪ್ರಗತಿಯಲ್ಲಿ ಆಗುತ್ತಿರುವುದರಿಂದ ಉದ್ಯೋಗಾವಕಾಶ ಹೆಚ್ಚಾಗುತ್ತಿವೆ. ನಬಾರ್ಡ್‌ನಲ್ಲಿ ಮಹಿಳೆಯರಿಗಾಗಿ ಹಲವಾರು ಯೋಜನೆಗಳಿವೆ. ಇಂತಹ ಯೋಜನೆಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ರ್‍ಯಾಪಿಡ್‌ ಸಂಸ್ಥೆಯ ಕಾರ್ಯದರ್ಶಿ ವಾಣಿಶ್ರೀ ಪುರೋಹಿತ ಮಾತನಾಡಿ ಜನತಾ ಶಿಕ್ಷಣ ಸಮಿತಿ ಶಿಕ್ಷಣದೊಂದಿಗೆ ಸಮಾಜಮುಖಿ ಕಾರ್ಯಕ್ರಮ ಆಯೋಜಿಸುತ್ತಾ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಶ್ಲಾಘನೀಯ ಎಂದರು.

ಉದ್ಯೋಗ ಮೇಳದಲ್ಲಿ 1430 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದು, 170 ಅಭ್ಯರ್ಥಿಗಳು ಸ್ಥಳದಲ್ಲಿಯೇ ಆಯ್ಕೆಯಾದರು. 357 ಜನ ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದಾರೆ. ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾದ್ಯೆ ಪ್ರಾಸ್ತಾವಿಕ ಮಾತನಾಡಿದರು. ಮಾಲವಿಕಾ ಕಡಕೋಳ ಸ್ವಾಗತಿಸಿದರು. ಲಕ್ಷ್ಮಿ ಆಲೂರ ಪ್ರಾರ್ಥಿಸಿದರು. ಸ್ನೇಹಾದ ದೇಶಪಾಂಡೆ ನಿರೂಪಿಸಿದರು. ಮಂಜುನಾಥ ಚಟ್ಟೇರ, ಬಿ.ಎ. ತಡಕೋಡ, ವಿಜಯ ಉಪಾದ್ಯೆ ಇದ್ದರು.