ಕಿಮ್ಸ್‌ನಲ್ಲಿ ವೈರಾಣು ಸಂಶೋಧನಾ, ರೋಗ ನಿರ್ಣಯ ಪ್ರಯೋಗಾಲಯ

| Published : Jun 22 2024, 12:52 AM IST

ಕಿಮ್ಸ್‌ನಲ್ಲಿ ವೈರಾಣು ಸಂಶೋಧನಾ, ರೋಗ ನಿರ್ಣಯ ಪ್ರಯೋಗಾಲಯ
Share this Article
  • FB
  • TW
  • Linkdin
  • Email

ಸಾರಾಂಶ

ಕಿಮ್ಸ್ ಆಸ್ಪತ್ರೆ ಉತ್ತರ ಕರ್ನಾಟಕದ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆ. ಹತ್ತಕ್ಕೂ ಹೆಚ್ಚು ಜಿಲ್ಲೆಗಳ ಸಾವಿರಾರು ರೋಗಿಗಳು ಇಲ್ಲಿಗೆ ಬರುತ್ತಾರೆ.

ಹುಬ್ಬಳ್ಳಿ:

ನವದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಪ್ರಾದೇಶಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ಎನ್‌ಸಿಡಿಸಿ) ಹುಬ್ಬಳ್ಳಿಯಲ್ಲಿ ಸ್ಥಾಪನೆಯಾಗಲಿದೆ. ಇಲ್ಲಿನ ಕಿಮ್ಸ್‌ನಲ್ಲಿ ಸ್ಥಾಪನೆಯಾಗಲಿದ್ದು, ಶುಕ್ರವಾರ ಈ ಸಂಬಂಧ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಪ್ರಯೋಗಾಲಯ ಸ್ಥಾಪನೆಗೆ ಎನ್‌ಸಿಡಿಸಿ ಪರವಾಗಿ ಬೆಂಗಳೂರು ಶಾಖೆಯ ಡಾ. ರಾಜೇಶ ಕಡೆಮನಿ ಮತ್ತು ಕಿಮ್ಸ್‌ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ಒಡಂಬಡಿಕೆಗೆ ಸಹಿ ಹಾಕಿದರು. ದೇಶದ 8 ಕಡೆಗಳಲ್ಲಿ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯವಿದೆ. ಇದೀಗ ಹುಬ್ಬಳ್ಳಿಯಲ್ಲಿ ಸ್ಥಾಪನೆಯಾಗುತ್ತಿರುವುದು 9ನೆಯದ್ದಾಗಿದೆ.

ಎಚ್-1ಎನ್-1, ಕೊರೋನಾ, ಚಿಕೂನ್ ಗುನ್ಯಾ, ನಿಫಾದಂತಹ ಸಾಂಕ್ರಾಮಿಕ ರೋಗಗಳು ತಮ್ಮ ರಚನೆಯಲ್ಲಿ ಬದಲಾವಣೆಗೊಂಡು ಮತ್ತೆ ಮತ್ತೆ ಹರಡುತ್ತಿರುವ ಕಾರಣ ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯಕ್ಕಾಗಿ ದೂರದ ಪ್ರದೇಶಗಳಿಗೆ ಅಲೆಯುವುದು ಈ ಕೇಂದ್ರದಿಂದ ತಪ್ಪಿಸಬಹುದಾಗಿದೆ. ಪ್ರಾಣ ಹಾನಿಯಂತಹ ಸಂಭವನೀಯತೆ ಕಡಿಮೆ ಮಾಡಬಹುದಾಗಿದೆ.

ದೇಶದಲ್ಲಿ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್ ಅಡಿ ಬಿಎಸ್‌ಎಲ್‌ 2 ಫೇಸಿಲಿಟಿಸ್ ಮಾದರಿಯ ಒಟ್ಟು 13 ಹೊಸ ಅಂದರೆ 4 ಮೊಬೈಲ್ ಪ್ರಯೋಗಾಲಯ ಮತ್ತು 9 ಸಾಂಸ್ಥಿಕ ಪ್ರಯೋಗಾಲಯ ಸ್ಥಾಪಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ಕಿಮ್ಸ್‌ ಕೂಡ ಒಂದಾಗಿದೆ.

ಕಿಮ್ಸ್ ಆಸ್ಪತ್ರೆ ಉತ್ತರ ಕರ್ನಾಟಕದ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆ. ಹತ್ತಕ್ಕೂ ಹೆಚ್ಚು ಜಿಲ್ಲೆಗಳ ಸಾವಿರಾರು ರೋಗಿಗಳು ಇಲ್ಲಿಗೆ ಬರುತ್ತಾರೆ. ಸರ್ಕಾರಿ ಆಸ್ಪತ್ರೆ ಎಂದು ಮೂಗು ಮುರಿಯುವರ ಮಧ್ಯೆ ಕಿಮ್ಸ್ ಆಸ್ಪತ್ರೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ವೇಗವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆಯು ಈ ಭಾಗದ ಜನರಿಗೆ ಸಂಜೀವಿನಿಯಾಗಿದೆ.

ಈಗ ಹೊಸದಾಗಿ ಇದಕ್ಕಾಗಿ ಕಿಮ್ಸ್ ಅವರಣದಲ್ಲಿ 27 ಗುಂಟೆ ಜಾಗ ಮೀಸಲಿರಿಸಲಾಗಿದೆ. ಸಂಪೂರ್ಣ ಕೇಂದ್ರ ಸರ್ಕಾರದ ಪ್ರಾಯೋಜಿತ ಪ್ರಾದೇಶಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯದ ಶಾಖೆಗೆ ಅಂದಾಜು ₹ 16 ಕೋಟಿ ವೆಚ್ಚವಾಗಲಿದೆ. ಈ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸತತ ಪ್ರಯತ್ನದ ಫಲವಾಗಿ ಈ ಪ್ರಯೋಗಾಲಯ ದೊರೆತಿದೆ. ಈ ಪ್ರಯೋಗಾಲಯ ಮಂಜೂರು ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಸೇರಿದಂತೆ ಕೇಂದ್ರ ಸರ್ಕಾರಕ್ಕೆ ಸಚಿವ ಜೋಶಿ ಧನ್ಯವಾದ ತಿಳಿಸಿದ್ದಾರೆ.