ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣುವರ್ಧನ್‌ ದರ್ಶನ ಕೇಂದ್ರ

| Published : Aug 19 2025, 01:00 AM IST

ಸಾರಾಂಶ

ನಟ ದಿವಂಗತ ಡಾ। ವಿಷ್ಣುವರ್ಧನ್‌ ಅವರ ಪುಣ್ಯಭೂಮಿ ವಿವಾದ ಮತ್ತೊಂದು ಸ್ವರೂಪ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಟ ದಿವಂಗತ ಡಾ। ವಿಷ್ಣುವರ್ಧನ್‌ ಅವರ ಪುಣ್ಯಭೂಮಿ ವಿವಾದ ಮತ್ತೊಂದು ಸ್ವರೂಪ ಪಡೆದುಕೊಂಡಿದೆ.

ಅಭಿಮಾನ್‌ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್‌ ಸಮಾಧಿ ಸ್ಥಳವನ್ನು ರಾತ್ರೋರಾತ್ರಿ ನೆಲಸಮಗೊಳಿಸಿರುವುದರಿಂದ ನೊಂದಿರುವ ಅವರ ಅಭಿಮಾನಿಗಳು ಇದೀಗ ಡಾ। ವಿಷ್ಣುವರ್ಧನ್ ದರ್ಶನ ಕೇಂದ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಜಾಗವನ್ನು ಸ್ವತಃ ನಟ ಕಿಚ್ಚ ಸುದೀಪ್‌ ಅವರೇ ಖರೀದಿ ಮಾಡಿರುವುದು ವಿಶೇಷ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ। ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌, ‘ಕೆಂಗೇರಿಯ ಅಭಿಮಾನ್ ಸ್ಟುಡಿಯೋದಿಂದ ಮೂರು ಕಿಲೋ ಮೀಟರ್‌ ದೂರದಲ್ಲಿ ಸೆ.18ರಂದು ಡಾ। ವಿಷ್ಣುವರ್ಧನ್ ದರ್ಶನ ಕೇಂದ್ರಕ್ಕೆ ಅಡಿಗಲ್ಲು ಹಾಕಲಾಗುವುದು. ಈ ಜಾಗವನ್ನು ಕಿಚ್ಚ ಸುದೀಪ್‌ ಅವರೇ ಖರೀದಿ ಮಾಡಿದ್ದಾರೆ. ಸೆ.2ರ ಸುದೀಪ್‌ ಅವರ ಜನ್ಮದಿನದಂದು ಈ ಕೇಂದ್ರದ ಮಾಡೆಲ್‌ ಅನ್ನು ಬಿಡುಗಡೆ ಮಾಡಲಾಗುವುದು. ಈ ಜಾಗದಲ್ಲಿ ಸುಮಾರು 25 ಅಡಿ ಎತ್ತರದ ಡಾ। ವಿಷ್ಣುವರ್ಧನ್‌ ಪುತ್ಥಳಿ ಹಾಗೂ ಗ್ರಂಥಾಲಯ ನಿರ್ಮಿಸುವ ಯೋಜನೆ ಇದೆ. ಹಾಗೆಂದು ಇದು ವಿಷ್ಣುವರ್ಧನ್‌ ಪುಣ್ಯಭೂಮಿಗೆ ಸಮಾನವಾದುದಲ್ಲ, ಮೈಸೂರಿನ ವಿಷ್ಣುವರ್ಧನ್‌ ಸ್ಮಾರಕಕ್ಕೆ ಪರ್ಯಾಯವೂ ಅಲ್ಲ. ವಿಷ್ಣುವರ್ಧನ್‌ ಪುಣ್ಯಭೂಮಿಗಾಗಿನ ನಮ್ಮ ಹೋರಾಟ ಮುಂದುವರಿಯುತ್ತದೆ. ಇದಕ್ಕೆ ವಿಷ್ಣುವರ್ಧನ್‌ ಕುಟುಂಬದವರ ಬೆಂಬಲವೂ ಸಿಕ್ಕಿದೆ’ ಎಂದಿದ್ದಾರೆ.

‘ವಿಷ್ಣುವರ್ಧನ್‌ ಅವರಿಗೆ 75 ವರ್ಷವಾಗುತ್ತಿರುವ ಸಂದರ್ಭದಲ್ಲಿ ಮಿನಿ ದಸರಾದಂತೆ ಅಮೃತ ಮಹೋತ್ಸವ ಆಯೋಜಿಸುವ ಇರಾದೆ ಇತ್ತು. ಇದನ್ನು ವಿಷ್ಣುವರ್ಧನ್‌ ಕುಟುಂಬದರು, ಚಿತ್ರರಂಗ ಹಾಗೂ ಅಭಿಮಾನಿಗಳೆಲ್ಲ ಸೇರಿಕೊಂಡು ಮಾಡುವ ಮಹದಾಸೆ ಇತ್ತು. ವಿಷ್ಣುವರ್ಧನ್‌ ಅವರ ಕುಟುಂಬದವರು ಇದರಲ್ಲಿ ಪಾಲ್ಗೊಳ್ಳಲಿ ಎಂಬ ಕಾರಣಕ್ಕೆ ಮುಂದೂಡುತ್ತಲೇ ಬಂದೆವು. ಆದರೆ ಕುಟುಂಬಸ್ಥರು ನಮಗೇ ಮುಂದುವರಿಸುವಂತೆ ಹೇಳಿದ್ದಾರೆ. ಹೀಗಾಗಿ ನಾವು ಅಂದುಕೊಂಡ ಮಟ್ಟದಲ್ಲಿ ಅಲ್ಲವಾದರೂ ಡಾ। ವಿಷ್ಣುವರ್ಧನ್‌ ಅಮೃತ ಮಹೋತ್ಸವವನ್ನು ಸಂಭ್ರಮದಿಂದಲಂತು ನಡೆಸುತ್ತೇವೆ’ ಎಂದರು.

‘ಸಾಧಕನಿಗೆ ಸಾವಿಲ್ಲ, ಅಭಿಮಾನಿಗಳ ಹೃದಯವೇ ನಿಮಗೆ ಗುಡಿ’ ವಿಷ್ಣುವರ್ಧನ್‌ ಬಗೆಗೆ ಹೀಗೆಂದು ಬರೆದುಕೊಂಡಿರುವ ರಮ್ಯಾ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಡಾ। ವಿಷ್ಣುವರ್ಧನ್‌ ವಿಚಾರದಲ್ಲಿ ಚಿತ್ರರಂಗ ಈ ರೀತಿ ನೈತಿಕ ಪ್ರಜ್ಞೆ ಕಳೆದುಕೊಳ್ಳಬಾರದಿತ್ತು. ವಿಷ್ಣುವರ್ಧನ್‌ ವಿಚಾರಕ್ಕೆ ಬಂದರೆ ಚಿತ್ರರಂಗದ ಬಹುತೇಕರು ಒಂದು ಸ್ಲೋಗನ್ ಹಾಕಿ ಸುಮ್ಮನಾಗಿ ಬಿಡುತ್ತಾರೆ. ಸ್ಮಾರಕ ಬೇಡ ಅನ್ನೋದಾದರೆ, ಬನ್ನಿ ಈ ಜಗತ್ತಿನಲ್ಲಿರುವ ಎಲ್ಲ ಸಾಧಕರ ಸ್ಮಾರಕವನ್ನೂ ಒಡೆದುಹಾಕಿ ಬಿಡೋಣ’ ಎಂದರು.

‘ಕೆ.ಮಂಜು ನೇತೃತ್ವದಲ್ಲಿ ಡಾ। ವಿಷ್ಣುವರ್ಧನ್‌ ಸ್ಮಾರಕಕ್ಕೆ ಸಂಬಂಧಿಸಿ ನಡೆಯುತ್ತಿರುವ ಸುದ್ದಿಗೋಷ್ಠಿಗೆ ಆಹ್ವಾನ ಬರದ ಕಾರಣ ಅದರಲ್ಲಿ ಭಾಗವಹಿಸುತ್ತಿಲ್ಲ. ಆದರೆ ವಿಷ್ಣುವರ್ಧನ್‌ ವಿಚಾರ ಬಂದಾಗ ಸಣ್ಣಪುಟ್ಟ ಮನಸ್ತಾಪ ಮರೆತು ಎಲ್ಲರೂ ಒಗ್ಗೂಡುತ್ತೇವೆ’ ಎಂದೂ ವೀರಕಪುತ್ರ ಹೇಳಿದರು.