ಸಾರಾಂಶ
ವೃದ್ಧೆ ಆಸ್ಪತ್ರೆಗೆ ದಾಖಲಿಸುವಾಗ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ಆಕೆಯ ಸಂಬಂಧಿಕರ ಪತ್ತೆಗೆ ಪತ್ರಿಕಾ ಪ್ರಕಟಣೆ ನೀಡಿದ್ದರೂ, ಸಂಬಂಧಿಕರು ಯಾರೂ ಮುಂದೆ ಬಂದಿರಲಿಲ್ಲ. ಶವವನ್ನು ಕೆಲವು ದಿನ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಉಡುಪಿ
ನಗರದ ರಸ್ತೆಯ ಪಕ್ಕ ಅನಾರೋಗ್ಯದಿಂದ ನರಳುತ್ತಿದ್ದ ಅಪರಿಚಿತ ವೃದ್ಧೆಯನ್ನು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಆಕೆಯ ಸಂಬಂಧಿಕರು ಪತ್ತೆಯಾಗದ ಕಾರಣ ತಾವೇ ಮುಂದೆ ನಿಂತು ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.ವೃದ್ಧೆ ಆಸ್ಪತ್ರೆಗೆ ದಾಖಲಿಸುವಾಗ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ಆಕೆಯ ಸಂಬಂಧಿಕರ ಪತ್ತೆಗೆ ಪತ್ರಿಕಾ ಪ್ರಕಟಣೆ ನೀಡಿದ್ದರೂ, ಸಂಬಂಧಿಕರು ಯಾರೂ ಮುಂದೆ ಬಂದಿರಲಿಲ್ಲ. ಶವವನ್ನು ಕೆಲವು ದಿನ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು.
ನಂತರ ನಗರ ಠಾಣೆಯ ಠಾಣಾ ಹೆಡ್ ಕಾನ್‌ಸ್ಟಿಬಲ್ ನೇತ್ರ ಅವರು ಕಾನೂನು ಪ್ರಕ್ರಿಯೆ ನಡೆಸಿ, ಉದ್ಯಾವರದ ರಾಮದಾಸ್ ಪಾಲನ್ ಹಾಗೂ ಅಲೆವೂರಿನ ಸಂತೋಷ್ ಪೂಜಾರಿ ಅವರ ಸಹಕಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.* ಮಾನವೀಯತೆ ಮರೆತ ಸಂಬಂಧಿಕರು
ಇನ್ನೊಂದು ಪ್ರಕರಣದಲ್ಲಿ ಮೃತರ ಸಂಬಂಧಿಕರು ಪತ್ತೆಯಾಗಿದ್ದರೂ, ಮೃತರನ್ನು ನೋಡಲು ಬಾರದೇ ಅಮಾನವೀಯತೆಯಿಂದ ನಡೆದುಕೊಂಡಿದ್ದಾರೆ.ಪಡುಬಿದ್ರೆಯ ನಿವಾಸಿ ಹರೀಶ್ ಭಂಡಾರಿ (೪೨) ಕ್ಯಾನ್ಸರ್‌ನಿಂದ ನರಳುತ್ತಿದ್ದು, ಅವರನ್ನು ಸಂಬಂಧಿಕರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ 2 ತಿಂಗಳ ಚಿಕಿತ್ಸೆಯ ನಂತರ ಬಿಡುಗಡೆಗೊಂಡಿದ್ದರು. ಆದರೆ ಅವರನ್ನು ಕರೆದೊಯ್ಯಲು ಸಂಬಂಧಿಕರು ಬರಲಿಲ್ಲ.
ಇದರಿಂದ ನೊಂದ ಹರೀಶ್ ಅವರನ್ನು ವಿಶು ಶೆಟ್ಟಿ ಅವರು ನಗರ ಠಾಣೆಗೆ ಮಾಹಿತಿ ನೀಡಿ, ರೋಗಿಗೆ ಕಲ್ಯಾಣಪುರದ ಗೊರಟ್ಟಿ ಆಸ್ಪತ್ರೆಯ ಮುಖ್ಯಸ್ಥರಲ್ಲಿ ಮನವಿ ಮಾಡಿ, ಅಲ್ಲಿ ಆಶ್ರಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು. ಆಸ್ಪತ್ರೆಯ ಆಡಳಿತ ಮಂಡಳಿ ಮಾನವೀಯತೆಯಿಂದ 5 ತಿಂಗಳು ಉಚಿತವಾಗಿ ಚಿಕಿತ್ಸೆ ನೀಡಿದ್ದರು.ಆದರೇ ತಾನಿನ್ನು ಬದುಕುವುದಿಲ್ಲ ಎಂದು ತಿಳಿದ ಹರೀಶ್ ಅವರ ಕುತ್ತಿಗೆಗೆ ಶಸ್ತ್ರಚಿಕಿತ್ಸೆಯಾದ್ದರಿಂದ ಮಾತನಾಡಲಾಗದೇ, ಕಾಗದದ ಮೇಲೆ ಬರೆದು ತನ್ನ ಮನೆಯವರನ್ನು ಭೇಟಿಯಾಗುವ ಕೊನೆಯ ಆಸೆಯನ್ನು ಪದೇಪದೆ ತೋಡಿಕೊಂಡಿದ್ದರು. ಅವರು ನೀಡಿದ ಮಾಹಿತಿಯಂತೆ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಮನೆಯವರು ರಾಂಗ್ ನಂಬರ್ ಎಂದು ಹೇಳಿದ್ದರು.
ಕೊನೆಯ ಗಳಿಗೆಯಲ್ಲಿ ತನ್ನವರನ್ನು ನೆನೆನೆನೆದು ಪ್ರಾಣಬಿಟ್ಟ ಹರೀಶ್ ಅವರ ಶವನ್ನು ಶವಾಗಾರದಲ್ಲಿರಿಸಲಾಗಿದ್ದು, ಜೀವಂತವಾಗಿದ್ದಾಗ ನೋಡಲು ಬಾರದಿದ್ದರೂ, ಈಗ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನಾದರೂ ಗೌರವಯುತವಾಗಿ ನಡೆಸಲು ಕುಟುಂಬಿಕರು ಮುಂದೆ ಬರುವರೇ ಎಂದು ವಿಶು ಶೆಟ್ಟಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.