ಕನ್ನಡಪ್ರಭ ವಾರ್ತೆ ಮಂಡ್ಯ

ವಿಶ್ವಕರ್ಮರು ತಮ್ಮ ಕಸುಬುಗಳಲ್ಲಿ ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನ, ಕಂಪ್ಯೂಟರ್ ಡಿಸೈನ್‌ಗಳನ್ನು ಅಳವಡಿಸಿಕೊಳ್ಳುವ ಮೂಲಕ ಉದ್ಯಮಗಳನ್ನಾಗಿ ಪರಿವರ್ತಿಸಿ ಆರ್ಥಿಕ ಪ್ರಗತಿ ಸಾಧಿಸುವಂತೆ ಎಂದು ರಾಜ್ಯ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ ಅಧ್ಯಕ್ಷ ಸುಜ್ಞಾನಮೂರ್ತಿ ಹೇಳಿದರು.ನಗರದಲ್ಲಿರುವ ಗಾಂಧಿ ಭವನದಲ್ಲಿ ಜಿಲ್ಲಾ ಭುವನ ವಿಶ್ವಕರ್ಮ ಸಮಾಜದಿಂದ ಸಮಾಜದ ಕಚೇರಿ ಉದ್ಘಾಟನೆ, ತಾಲೂಕು ಪದಾಧಿಕಾರಿಗಳ ಪದಗ್ರಹಣ, ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿನ ವಿಶ್ವಕರ್ಮರು ತಮ್ಮ ಕಸುಬುಗಳಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವುದು ಅತ್ಯಗತ್ಯ ಎಂದರು.

ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರು. ನೀಡಿದೆ, ಉನ್ನತ ವ್ಯಾಸಂಗ ಮಾಡುವ ಎಂಜಿನಿಯರ್, ವೈದ್ಯರು ಮತ್ತು ವಿದೇಶಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು 2 ರಿಂದ 10 ಲಕ್ಷ ರು.ವರಗೆ ಶೈಕ್ಷಣಿಕ ಸಾಲ ಪಡೆದುಕೊಳ್ಳಬಹುದು. ಇದರ ಜೊತೆಗೆ ಹಲವು ಯೋಜನೆ ಸದುಪಯೋಗ ಪಡಯಲು ಅರ್ಜಿ ಸಲ್ಲಿಸಬಹುದು ಎಂದರು.

ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕೋಟ್ಯಂತರ ರು. ಮೀಸಲಿರಿಸಿದೆ, ಅದರಲ್ಲಿ ವಿಶ್ವಕರ್ಮ ಸಮುದಾಯ ಪಾಲು ಬಂದೇ ಬರುತ್ತದೆ. ಸಾಮಾಜಿಕ ಜೀವನಕ್ಕೆ ಅತ್ಯಂತ ಪೂರಕವಾಗಿ ವಿಶ್ವಕರ್ಮ ಸಮಾಜದ ಪಂಚ ಕಸುಬುಗಳು ಪಾರಂಪರಿಕತೆಯಿಂದ ಕೂಡಿದ್ದಾಗಿದೆ ಎಂದರು.

ವಿಶ್ವಕರ್ಮರು ತಮ್ಮ ಕಸುಬುಗಳನ್ನು ದೊಡ್ಡ ಉದ್ಯಮವಾಗಿ ಪರಿವರ್ತಿಸಿಕೊಳ್ಳಬೇಕು. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಬಳಸಿಕೊಳ್ಳಬೇಕು ಎಂದರು.


ಜಿಲ್ಲಾ ಭುವನ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎನ್.ಬಸವರಾಜು ಮಾತನಾಡಿ, ವಿಶ್ವಕರ್ಮ ಸಮುದಾಯ ಒಗ್ಗಟ್ಟಾಗಿದ್ದರೆ ಎಲ್ಲವನ್ನು ಸಾಧಿಸಬಹುದು. ರಾಜಕೀಯ ಶಕ್ತಿಯಾಗಿ ಬೆಳೆಯಲು ರಾಜಕೀಯ ಪ್ರಜ್ಞೆ ಅಗತ್ಯ. ಅದಕ್ಕಾಗಿ ಯಾವುದಾರೂ ಪಕ್ಷಗಳಲ್ಲಿ ಗುರುತಿಸಿ ಕೆಲಸ ಮಾಡಬೇಕು ಎಂದರು.

ಮುಂದಿನ ದಿನಗಳಲ್ಲಿ ಸಮುದಾಯವನ್ನು ಸಂಘಟಿಸಿ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ, ಆರ್ಥಿಕವಾಗಿ ಪ್ರಗತಿ ಸಾಧಿಸಲು ಯೋಜನೆಗಳನ್ನು ರೂಪಿಸೋಣ. ಒಗ್ಗಟ್ಟಿನ ರಾಜಕೀಯ ಶಕ್ತಿಯಿಂದ ಎಲ್ಲವನ್ನು ಪಡೆದುಕೊಳ್ಳಬಹುದು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಭುವನ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಬೇವಿನಹಳ್ಳಿ ಬಿ.ವಿ.ಸೋಮು, ನಿವೃತ್ತ ಮುಖ್ಯಶಿಕ್ಷಕ ಅರಕೇಶ್ವರ, ಉಪಾಧ್ಯಕ್ಷ ಅನಿಲ್‌ಕುಮಾರ್, ಕಾರ್ಯದರ್ಶಿ ಕಟ್ಟೆಕೃಷ್ಣಸ್ವಾಮಿ, ಖಜಾಂಚಿ ಕೆ.ಸಿ.ಶ್ರೀನಿವಾಸ, ಗೋವಿಂದರಾಜು, ಈರಣ್ಣ, ಸೇರಿದಂತೆ ಸಂಘದ ನಿರ್ದೇಶಕರು ಸದಸ್ಯರು ಹಾಜರಿದ್ದರು.