ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ೨೦೨೬-೨೭ನೇ ಸಾಲಿನಲ್ಲಿ ಕೇವಲ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ೬೦ ದಿನಗಳ ಸೇನಾ ತರಬೇತಿ ನೀಡಲು ಅಲ್ಪಾವಧಿ ಟೆಂಡರ್ ಕರೆದಿರುವುದು ಅತ್ಯಂತ ಆಘಾತಕಾರಿ ಮತ್ತು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ರಾಜ್ಯ ಸರ್ಕಾರವು ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಸೇನಾ ತರಬೇತಿ ನೀಡುವ ಯೋಜನೆ ಟೆಂಡರ್ ಕರೆದಿದ್ದು ಕೂಡಲೇ ಅದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಜಿಲ್ಲಾ ಶಾಖೆ ಕಾರ್ಯಕರ್ತರು ನಗರದಲ್ಲಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಗರದ ಜಿಲ್ಲಾಡಳಿತ ಭವನಕ್ಕೆ ತೆರಳಿದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಯೋಜನೆ ಜಾರಿಗೆ ತರಬಾರದು. ಟೆಂಡರ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಿಯದರ್ಶಿನಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅಲ್ಲದೆ ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆಯನ್ನು ಯಥಾಸ್ಥಿತಿ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ೨೦೨೬-೨೭ನೇ ಸಾಲಿನಲ್ಲಿ ಕೇವಲ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ೬೦ ದಿನಗಳ ಸೇನಾ ತರಬೇತಿ ನೀಡಲು ಅಲ್ಪಾವಧಿ ಟೆಂಡರ್ ಕರೆದಿರುವುದು ಅತ್ಯಂತ ಆಘಾತಕಾರಿ ಮತ್ತು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇವಲ ಒಂದು ನಿರ್ದಿಷ್ಟ ಧಾರ್ಮಿಕ ಗುಂಪಿಗೆ ಮಾತ್ರ ರಕ್ಷಣಾ ಸಂಬಂಧಿತ ತರಬೇತಿ ನೀಡುವುದು ಮತ್ತು ಹಿಂದೂ ಸೇರಿದಂತೆ ಇತರೆ ಸಮುದಾಯಗಳ ಅರ್ಹ ಬಡ ವಿದ್ಯಾರ್ಥಿಗಳನ್ನು ಇದರಿಂದ ಹೊರಗಿಡುವುದು ಭಾರತೀಯ ಸಂವಿಧಾನದ ವಿಧಿ ೧೪ (ಸಮಾನತೆಯ ಹಕ್ಕು) ಹಾಗೂ ವಿಧಿ ೧೫(೧) ಸ್ಪಷ್ಟ ಉಲ್ಲಂಘನೆಯಾಗಿದೆ ಎಂದಿದ್ದಾರೆ.

ಧಾರ್ಮಿಕ ತಾರತಮ್ಯದಿಂದ ಕೂಡಿರುವ ಅಲ್ಪಸಂಖ್ಯಾತರ ನಿರ್ದೇಶನಾಲಯದ ಟೆಂಡರ್ ಅಧಿಸೂಚನೆಯನ್ನು ತಕ್ಷಣವೇ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಸತೀಶ್, ಜಿಲ್ಲಾ ಕಾರ್ಯದರ್ಶಿ ಮಧು, ಜಿಲ್ಲಾ ಸಹ ಕಾರ್ಯದರ್ಶಿಗಳಾದ ಶ್ರೀನಿವಾಸ್, ಬಜರಂಗದಳ ಜಿಲ್ಲಾ ಸಂಯೋಜಕ ರಮೇಶ್, ಜಿಲ್ಲಾ ಸಾಮರಸ್ಯ ಪ್ರಮುಖ್ ಮಂಜುನಾಥ್. ಜಿಲ್ಲಾ ಗೋರಕ್ಷಾ ಪ್ರಮುಖ ಶಂಕರ್, ನಗರ ಸಹ ಸಂಯೋಜಕ ಶಿವು ಅಭಿ, ರವಿ ಉಪಸ್ಥಿತರಿದ್ದರು.