ಹನುಮಧ್ವಜ ತೆರವು ವಿರೋಧಿಸಿ ಮಂಗಳೂರು, ಉಡುಪಿಯಲ್ಲಿ ಹನುಮಾನ್‌ ಚಾಲೀಸಾ ಪಠಿಸಿ ಪ್ರತಿಭಟನೆ

| Published : Feb 10 2024, 01:46 AM IST

ಹನುಮಧ್ವಜ ತೆರವು ವಿರೋಧಿಸಿ ಮಂಗಳೂರು, ಉಡುಪಿಯಲ್ಲಿ ಹನುಮಾನ್‌ ಚಾಲೀಸಾ ಪಠಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಬಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ, ರಾಜ್ಯ ಸರ್ಕಾರಕ್ಕೆ ಬಜರಂಗದಳ ನಿಷೇಧ ಮಾಡಲು ಸಾಧ್ಯವಾಗಿಲ್ಲ, ಆಗುವುದೂ ಇಲ್ಲ. ಮುಂದಿನ ಚುನಾವಣೆಯಲ್ಲಿ ಮುಸಲ್ಮಾನರ ಮತ ಪಡೆಯಲು ಈಗ ಹನುಮಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಶರಣ್ ಪಂಪ್‌ವೆಲ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವುಗೊಳಿಸಿದ ಕೃತ್ಯವನ್ನು ಖಂಡಿಸಿ, ಮತ್ತೆ ಅದೇ ಜಾಗದಲ್ಲಿ ಹನುಮಧ್ವಜ ಮರುಸ್ಥಾಪಿಸಲು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ವತಿಯಿಂದ ನಗರದ ಮಿನಿವಿಧಾನಸೌಧ ಮುಂಭಾಗ ಗುರುವಾರ ಹನುಮಾನ್ ಚಾಲೀಸಾ ಪಠಣ ಮೂಲಕ ಧರಣಿ ನಡೆಸಲಾಯಿತು.

ವಿಹಿಂಪ, ಬಜರಂಗದಳ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೆರಗೋಡು ಚಲೋ: ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಹನುಮಧ್ವಜ ಮರುಸ್ಥಾಪಿಸದೆ ಇದ್ದರೆ ವಿಶ್ವಹಿಂದು ಪರಿಷತ್, ಬಜರಂಗದಳ ವತಿಯಿಂದ ಕೆರಗೋಡು ಚಲೋ ಕಾರ್ಯಕ್ರಮ ನಡೆಸಲಾಗುವುದು. ಅಲ್ಲದೆ, ರಾಜ್ಯ ಬಜರಂಗದಳದ ಎಲ್ಲ ಕಾರ್ಯಕರ್ತರು ಕೆರಗೋಡು ಗ್ರಾಮದಲ್ಲಿ ವಾಸ್ತವ್ಯ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

40 ವರ್ಷಗಳ ಹಿಂದೆ ಕೆರಗೋಡು ಗ್ರಾಮಸ್ಥರು ಹನುಮಧ್ವಜ ಸ್ಥಾಪಿಸಿದ್ದರು. ಇಷ್ಟೂ ವರ್ಷ ಗ್ರಾಮದಲ್ಲಿ ಯಾವುದೇ ಗಲಾಟೆ ಇರಲಿಲ್ಲ. ನಮಗೆ ರಾಷ್ಟ್ರಧ್ವಜ, ಕನ್ನಡ ಧ್ವಜದ ಮೇಲೆ ನಮಗೆ ಗೌರವವಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ, ಓಟ್ ಬ್ಯಾಂಕ್‌ಗಾಗಿ ಹನುಮಧ್ವಜ ತೆರವುಗೊಳಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಹಿಂದು ವಿರೋಧಿಯಾಗಿದ್ದಾರೆ ಎಂದರು.

ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಬಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ, ರಾಜ್ಯ ಸರ್ಕಾರಕ್ಕೆ ಬಜರಂಗದಳ ನಿಷೇಧ ಮಾಡಲು ಸಾಧ್ಯವಾಗಿಲ್ಲ, ಆಗುವುದೂ ಇಲ್ಲ. ಮುಂದಿನ ಚುನಾವಣೆಯಲ್ಲಿ ಮುಸಲ್ಮಾನರ ಮತ ಪಡೆಯಲು ಈಗ ಹನುಮಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಶರಣ್ ಪಂಪ್‌ವೆಲ್ ಆರೋಪಿಸಿದರು.

ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಮಾತನಾಡಿ, ರಾಜ್ಯ ಸರ್ಕಾರ ಕೆರಗೋಡು ಗ್ರಾಮಸ್ಥರ ವಿಶ್ವಾಸ ಪಡೆದು ಮುನ್ನಡೆಯುತ್ತಿದ್ದರೆ ಗಲಾಟೆ ನಡೆಯುತ್ತಿರಲಿಲ್ಲ.ಅನ್ಯಾಯವಾದಾಗ ಪ್ರತಿಭಟಿಸುವುದು ನಮ್ಮ ಹಕ್ಕು. ಕೆರಗೋಡಿನಲ್ಲಿ ರಾಜ್ಯ ಸರ್ಕಾರ ಮತ್ತೆ ಹನುಮಧ್ವಜ ಏರಿಸಬೇಕು ಎಂದು ಆಗ್ರಹಿಸಿದರು.

ವಿಹಿಂಪ ಮಂಗಳೂರು ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್, ಪ್ರಮುಖರಾದ ಮನೋಹರ ಸುವರ್ಣ, ಪುನೀತ್ ಅತ್ತಾವರ, ಲತೀಶ್ ಗುಂಡ್ಯ, ಶ್ರೀಕಾಂತ್ ಕಾಟಿಪಳ್ಳ, ಶ್ರೀಧರ್ ಮತ್ತಿತರರಿದ್ದರು.

ಉಡುಪಿಯಲ್ಲಿ ಹನುಮಾನ್ ಚಾಲೀಸ ಪಠಣ: ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದ ಹಾರಿಸಲಾಗಿದ್ದ ಹನುಮಾನ್‌ ಧ್ವಜವನ್ನು ರಾಜ್ಯ ಸರ್ಕಾರ ಇಳಿಸಿದ ಪ್ರಕರಣದ ವಿರುದ್ಧ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಹನುಮಾನ್ ಚಾಲೀಸ್ ಪಠಣ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಬಜರಂಗದಳ ಕರ್ನಾಟಕ ದಕ್ಷಣ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್., ರಾಜ್ಯ ಕಾಂಗ್ರೆಸ್ ಸರ್ಕಾರ ತಕ್ಷಣ ಮತ್ತೇ ಹನುಮಾನ್ ಧ್ವಜ ಹಾರಾಟಕ್ಕೆ ವ್ಯವಸ್ಥೆ ಮಾಡಬೇಕು, ಇಲ್ಲದಿದ್ದಲ್ಲಿ ರಾಜ್ಯಾದ್ಯಂತದಿಂದ ವಿಹಿಂಪ - ಬಜಜರಂಗದಳದ ಲಕ್ಷಾಂತರ ಕಾರ್ಯಕರ್ತರು ಮಂಡ್ಯ ಚಲೋ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರಗಳು ಸ್ವಾತಂತ್ರ್ಯ ಸಿಕ್ಕಿದಂದಿನಿಂದ ಹಿಂದೂ ತುಷ್ಟೀಕರಣಕ್ಕೆ, ಅಲ್ಪಸಂಖ್ಯಾತರ ಓಲೈಕೆಗೆ ಕೇಸರಿ ಧ್ವಜದ ವಿರುದ್ಧ ನಾನಾ ಕಾರ್ಯಗಳನ್ನು ನಡೆಸಿದೆ. ಆದರೇ ಇಂದು ಹಿಂದೂ ಸಮಾಜ ಜಾಗೃತಗೊಂಡಿದೆ. ಆದ್ದರಿಂದ ಕೆರೆಗೋಡು ಘಟನೆಯ ವಿರುದ್ದ ರಾಜ್ಯಾದ್ಯಂತ ಅಭಿಯಾನ ಆರಂಭವಾಗಿದೆ. ಮುಂದೆ ಪ್ರತಿ ಹಿಂದೂ ಮನೆಯ ಮೇಲೆ ಕೇಸಿ ಧ್ವಜ ಹಾರಾಡಲಿದೆ ಎಂದರು.

ಇನ್ನಾದರೂ ಕಾಂಗ್ರೆಸ್ ಸರ್ಕಾರ ಹಿಂದು ಭಾವನೆಗಳಿಗೆ ಬೆಲೆ ನೀಡಬೇಕು, ಇಲ್ಲದಿದ್ದಲ್ಲಿ ಹಿಂದುಗಳು ತನ್ನ ಸ್ವಾಭಿಮಾನವನ್ನು ತೋರಿಸಬೇಕಾಗುತ್ತದೆ ಎಂದರು.

ನಂತರ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ವಿಹಿಪಂ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಮುಂತಾದವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.