ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ವಿಶ್ವ ಹಿಂದು ಪರಿಷತ್ (ವಿಹಿಂಪ) ಸ್ಥಾಪನೆಯಾಗಿ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಒಂದು ಲಕ್ಷ ಹಳ್ಳಿಗಳಲ್ಲಿ ವಿಹಿಂಪ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ವಿಹಿಂಪ ಕೇಂದ್ರೀಯ ಸಹ ಪ್ರಧಾನ ಕಾರ್ಯದರ್ಶಿ ಸ್ಥಾನು ಮಲಯನ್ ಹೇಳಿದ್ದಾರೆ.ಮಂಗಳೂರಿನಲ್ಲಿ ಎರಡು ದಿನಗಳ ವಿಹಿಂಪ ಕರ್ನಾಟಕ ಪ್ರಾಂತ ಬೈಠಕ್‌ನ ಮುಕ್ತಾಯ ದಿನ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.1964ರಲ್ಲಿ ಸ್ಥಾಪನೆಯಾದ ವಿಹಿಂಪಗೆ ಈಗ 60 ವರ್ಷ ತುಂಬುತ್ತದೆ. ಪ್ರಸಕ್ತ ವಿಹಿಂಪ ದೇಶದ 60 ಸಾವಿರ ಹಳ್ಳಿಗಳಲ್ಲಿ ಘಟಕಗಳನ್ನು ಹೊಂದಿದೆ, ಇದನ್ನು ಒಂದು ಲಕ್ಷಕ್ಕೆ ತಲುಪಿಸುವ ಗುರಿ ಹೊಂದಲಾಗಿದೆ. ಜಗತ್ತಿನ 32 ರಾಷ್ಟ್ರಗಳಲ್ಲಿ ವಿಹಿಂಪ ಘಟಕಗಳು ಇವೆ. ವಿಹಿಂಪದ ಸಹವರ್ತಿ ಸಂಘಟನೆಗಳಾದ ಬಜರಂಗದಳ, ದುರ್ಗಾ ವಾಹಿನಿ, ಮಾತೃ ಶಕ್ತಿ ಸೇರಿದಂತೆ 18 ವಿವಿಧ ಶಾಖೆಗಳಿದ್ದು, ಇವು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದರು.
ಠರಾವು ಮಂಡನೆ:ಮಂಗಳೂರಿನಲ್ಲಿ ನಡೆದ ಎರಡು ದಿನಗಳ ವಿಹಿಂಪ ಬೈಠಕ್‌ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಎರಡು ಠರಾವು ಮಂಡಿಸಲಾಗಿದೆ.
ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಕಾಯಿದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಲಾಯಿತು. ವಿಧಾನಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನು ಹಾಗೂ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟವನ್ನು ಖಂಡಿಸಲಾಯಿತು. ಬಾಂಬ್ ಸ್ಫೋಟ ಘಟನೆಯ ತನಿಖೆ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ನಡೆಸುತ್ತಿದೆ. ಆದ್ದರಿಂದ ಆರೋಪಿಗಳ ಪತ್ತೆಗೆ ಎಲ್ಲ ರೀತಿಯ ಸಹಕಾರ ನೀಡಲು ತೀರ್ಮಾನಿಸಲಾಯಿತು.1-ಹಿಂದು ದೇವಸ್ಥಾನಗಳ ಹಿಂದುಗಳ ಖಾಸಗಿ ಸಂಸ್ಥೆಗಳಾಗಿದ್ದು, ಅವುಗಳ ಆಡಳಿತದಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಬಾರದು. ತಿದ್ದುಪಡಿ ಪ್ರಕಾರ, ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನು ಸರ್ಕಾರನೇ ನೇಮಿಸುವ ಪ್ರಸ್ತಾಪ ಇದೆ. ಇದನ್ನು ಕೈಬಿಟ್ಟು ಸದಸ್ಯರೇ ಅಧ್ಯಕ್ಷರ ಆಯ್ಕೆ ಮಾಡುವ ಹಿಂದಿನ ವಿಧಾನವನ್ನೇ ಕಾರ್ಯರೂಪಕ್ಕೆ ತರುವಂತೆ ಆಗ್ರಹಿಸಲಾಯಿತು ಎಂದು ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಹೇಳಿದರು.
ದೇವಸ್ಥಾನಗಳಿಗೆ ಮೂಲಭೂತ ಅಂಶಗಳನ್ನು ಕೊಡುವುದು ಸರ್ಕಾರ ಮತ್ತು ಸ್ಥಳೀಯಾಡಳಿತಗಳ ಜವಾಬ್ದಾರಿ. ಅದಕ್ಕಾಗಿ ಮೂಲಸೌಕರ್ಯ ಯೋಜಿಸಲು ಸಮಿತಿ ರಚಿಸುವಂತೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಇದಕ್ಕೆ ದೇವಸ್ಥಾನಗಳ ಹಣ ವಿನಿಯೋಗಿಸಬಾರದು. ದೇವಸ್ಥಾನಗಳ ಹಣ ದೇವಸ್ಥಾನಗಳ ಅಭಿವೃದ್ಧಿಗೆ ಮಾತ್ರ ಬಳಕೆಯಾಗಬೇಕು. ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಲು ತೊಂದರೆ ಇಲ್ಲ ಎಂದರು.2-ಸಂವಿಧಾನದಲ್ಲಿ ಅವಕಾಶ ಇಲ್ಲದಿದ್ದರೂ ಅಲ್ಪ ಸಂಖ್ಯಾತರಿಗೆ 10 ಸಾವಿರ ಕೋಟಿ ರು. ಹಣ ನೀಡುವ ವಾಗ್ದಾನ ಮೂಲಕ ಹಿಂದು ಮತ್ತು ಅಲ್ಪಸಂಖ್ಯಾತರ ನಡುವೆ ತಾರತಮ್ಯ ನೀತಿ ಕೈಬಿಡಬೇಕು. ಅಲ್ಪಸಂಖ್ಯಾತರಿಂದ ಹಿಂದು ದೇವರಿಗೆ ಅವಮಾನ ಮಾಡುವ ಘಟನೆಗಳು, ಮಂಗಳೂರಿನ ಜೆರೋಸಾ ಪ್ರಕರಣ, ಶಾಸಕರ ವಿರುದ್ಧ ವಿನಾ ಕಾರಣ ದೂರು ದಾಖಲು ಮಾಡಲಾಗಿದೆ. ಆದರೆ ಆರೋಪಿ ಶಿಕ್ಷಕಿ ವಿರುದ್ಧ ಕ್ರಮ ಕೈಗೊಂಡಿಲ್ಲ.
ಪ್ರಾಣಿಗಳ ಶುಶ್ರೂಷೆಗ ನೀಡಿದ 600 ಕೋಟಿ ರು. ಬೆಲೆ ಬಾಳುವ ಬೆಂಗಳೂರು ಚಾಮರಾಜಪೇಟೆಯ ಪಶುಸಂಗೋಪನಾ ಇಲಾಖೆಯ 2 ಎಕರೆ ಜಾಗವನ್ನು ಅಲ್ಪಸಂಖ್ಯಾತ ಇಲಾಖೆಗೆ ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಏಕರೂಪ ಬದಲು ರಂಜಾನ್‌ಗೆ ಮುಸ್ಲಿಂ ಮಕ್ಕಳಿಗೆ ಪ್ರತ್ಯೇಕ ನಿಯಮ, ಪ್ರತ್ಯೇಕತೆಯ ವಿಷಬೀಜ ಬಿತ್ತಲಾಗುತ್ತಿದೆ. ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಮೀಸಲಾದ ಮೊತ್ತವನ್ನು ದುರುಪಯೋಗಪಡಿಸಿ ಅಲ್ಪಸಂಖ್ಯಾತರಿಗೆ ಹೆಚ್ಚು ಹಣ ನೀಡಲಾಗುತ್ತಿದೆ. ಇವುಗಳನ್ನೆಲ್ಲ ರಾಜ್ಯ ಸರ್ಕಾರ ಸರಿಪಡಿಸುವಂತೆ ಆಗ್ರಹಿಸಲಾಗಿದೆ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿಯೂ ಹೋರಾಟ ನಡೆಸಲಾಗುವುದು ಎಂದರು.ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಇದ್ದರು. ರಾಮ ಮಂದಿರ ನಿರ್ಮಾಣಕ್ಕೆ ಕೃತಜ್ಞತೆ, ರಾಮ ಮಂದಿರದಿಂದ ರಾಮ ರಾಜ್ಯದತ್ತ ಹೆಜ್ಜೆ ಹಾಗೂ ಈ ಬಾರಿ ಶೇ.ನೂರರಷ್ಟು ಮತದಾನವಾಗುವಂತೆ ನೋಡಿಕೊಳ್ಳುವುದೇ ಮೊದಲಾದ ಪ್ರಮುಖ ತೀರ್ಮಾನಗಳನ್ನು ಅಯೋಧ್ಯೆಯಲ್ಲಿ ಫೆ.25ರಿಂದ 27ರ ವರೆಗೆ ನಡೆದ ವಿಹಿಂಪ ಟ್ರಸ್ಟ್‌ಗಳ ಮಂಡಳಿ ಮತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಕುರಿತು ಪ್ರಾಂತ ಬೈಠಕ್‌ನಲ್ಲಿ ಪ್ರಸ್ತಾಪಿಸಲಾಯಿತು ಎಂದು ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ತಿಳಿಸಿದರು.
ರಾಷ್ಟ್ರೀಯ ಹಿತಾಸಕ್ತಿಯಡಿ ಶೇ.ನೂರರಷ್ಟು ಮತ ಚಲಾಯಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ. ರಾಷ್ಟ್ರೀಯವಾದಿ, ಹಿಂದು ಸ್ನೇಹಿ ಸರ್ಕಾರ ಹೊಂದುವುದು ಬಹಳ ಮುಖ್ಯ ಎಂದರು.