ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
12ನೇ ಶತಮಾನದಲ್ಲೇ ಸಮಾಜದ ಎಲ್ಲಾ ವರ್ಗದ ಜನರ ಬದುಕಿಗೆ ಜ್ಞಾನದ ಕಿರಣ ಸ್ಪರ್ಶ ನೀಡಿದವರು ಜಗಜ್ಯೋತಿ ಬಸವಣ್ಣನವರು. ಶತ ಶತಮಾನ ಕಳೆದರೂ ಬಸವಣ್ಣ ಈ ನಾಡಿಗೆ ನೀಡಿದ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೂವಿನಹಡಗಲಿ ಗವಿಸಿದ್ದೇಶ್ವರ ಶಾಖಾಮಠದ ಡಾ.ಹಿರಯ ಶಾಂತವೀರ ಮಹಾ ಸ್ವಾಮೀಜಿ ಹೇಳಿದರು.ಭಾನುವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ, ವೀರಶೈವ ಸಮಾಜ ಸೇವಾ ಸಂಘ, ವೀರಶೈವ ಸಂಘಟನೆಗಳ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಹಾನ್ ದಾರ್ಶನಿಕರ ಪ್ರತಿನಿಧಿಗಳಾಗಿ ನಾಡಿನೆಲ್ಲೆಡೆ ವೀರಶೈವರು ಧಾರ್ಮಿಕ ವಿಚಾರದಾರೆಗಳನ್ನು ಎಲ್ಲರಿಗೂ ತಿಳಿಸಿ ಬಸವಣ್ಣನವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದಾರೆ ಎಂದರು.
ಧಾರ್ಮಿಕ ಸಭೆಯಲ್ಲಿ ಜ್ಯೋತಿ ಬೆಳಗಿಸುವ ಉದ್ದೇಶವೆಂದರೆ ಅದರ ಪ್ರಕಾಶಮಾನದಲ್ಲಿ ನಮ್ಮೆಲ್ಲರ ಬದುಕು ಕಷ್ಟಗಳಿಂದ ದೂರವಾಗಲಿ ಎಂಬುದು. ಇಂದಿನ ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಬಂಧುಗಳು ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ. ಅವರೆಲ್ಲರ ಬದುಕು ಪ್ರಕಾಶಮಾನವಾಗಲಿ, ನಿವೃತ್ತ ನೌಕರರು ಸಹ ಆರೋಗ್ಯವಂತ, ಗುಣವಂತರಾಗಿ ಸಮಾಜ ಸೇವೆಯಲ್ಲಿ ತೊಡಗಲಿ ಎಂದು ಹಾರೈಸಿದರು.ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸಿ.ನಾಗರಾಜು, ವೀರಶೈವ ಸಮಾಜ ಇಂದು ತನ್ನದೇಯಾದ ಸಂಘಟನೆಯನ್ನು ಬಲಪಡಿಸುವಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದೆ. ಪ್ರತಿ ವರ್ಷವೂ ನೌಕರರ ಕ್ಷೇಮಾಭಿವೃದ್ಧಿ ಸಂಘ ಪ್ರತಿಭಾಪುರಸ್ಕಾರ ಹಾಗೂ ನಿವೃತ್ತ ನೌಕರರ ಸೇವೆಯನ್ನು ಸ್ಮರಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ. ವೀರಶೈವ ಸಮಾಜದ ಬಂಧುಗಳು ಮುಂದಿನ ದಿನಗಳಲ್ಲೂ ಸಹ ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಬೇಕು. ನಾವು ಮುಂದೆ ಹೆಜ್ಜೆ ಇಟ್ಟರೆ ನಮ್ಮನ್ನು ಇತರರು ಅನುಸರಿಸುತ್ತಾರೆ ಎಂದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಮೈಸೂರಿನ ಬ್ಯಾಂಕ್ ನೋಟ್ ಪೇಪರ್ ವ್ಯವಸ್ಥಾಪಕ ನಿರ್ದೇಶಕ ಎಸ್.ತಾಳ್ಕೇರಪ್ಪ ಮಾತನಾಡಿ, ಸಮಾಜದಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಬೇಕು. ಕೇವಲ ಸಮುದಾಯ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರವಲ್ಲದೆ, ಅವರಿಗೆ ಕೌಶಲ್ಯ ತರಬೇತಿಯನ್ನು ಹಮ್ಮಿಕೊಂಡು ಮಾರ್ಗದರ್ಶ ಮಾಡಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಗುರುಸಿದ್ದಮೂರ್ತಿ, ಕಳೆದ ಹಲವಾರು ವರ್ಷಗಳಿಂದ ವೀರಶೈವ ಸಮಾಜದ ಇತರೆ ಸಂಘಟನೆಯೊಂದಿಗೆ ಈ ಕಾರ್ಯ ನೆರವೇರಿಸಲಾಗುತ್ತಿದೆ. ಯಾವುದೇ ಹಂತದಲ್ಲೂ ವೀರಶೈವ ಸಮಾಜದ ಬೇರೆ ಯಾವುದೇ ಸಮಾಜವನ್ನು ದೂಷಿಸುವುದಿಲ್ಲ. ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ, ಸಹಕಾರದೊಂದಿಗೆ ಸಂಘಟಿತ ಜೀವನ ನಡೆಸುತ್ತಾ ಬಂದಿದೆ. ನೌಕರರ ಕ್ಷೇಮಾಭಿವೃದ್ಧಿ ಸಂಘ ಇನ್ನೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮ ಪಡಿಸುವಂತಹ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ ಎಂದರು.
ಈ ವೇಳೆ ಯುವ ವಾಣಿಜ್ಯೋದ್ಯಮಿ ಎನ್.ಸತೀಶ್‌ಬಾಬು, ಛೇಂಬರ್ ಕಾರ್ಯದರ್ಶಿ ವಂದನ ಕೆ.ಬಸವರಾಜು, ದಲ್ಲಾಳರ ಸಂಘದ ಅಧ್ಯಕ್ಷ ಕೆ.ಎಂ.ಅರವಿಂದ್, ಗ್ರಾಮಾಂತರ ಸಂಘದ ಅಧ್ಯಕ್ಷ ಕಿರಣ್‌ಶಂಕರ್, ಸೌಹಾರ್ಧ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್, ಟೌನ್ ಕ್ಲಬ್ ಅಧ್ಯಕ್ಷ ಎಸ್.ಟಿ.ವಿಜಯ್, ಪದ್ಮ ನಾಗರಾಜು, ವಿ.ಮಂಜುನಾಥ, ಟಿ.ಪ್ರಭುದೇವ್, ಎಚ್.ವಿ.ನಾಗರಾಜು, ಬಿ.ಎಸ್.ಶಿವಪುತ್ರಪ್ಪ, ನಗರಸಭಾ ಸದಸ್ಯರಾದ ಸಿ.ಎಂ.ವಿಶುಕುಮಾರ್, ಎಂ.ಸಾವಿತ್ರಮ್ಮ, ನಾಮಿನಿ ಸದಸ್ಯ ಕೆ.ಎಂ.ನಟರಾಜು, ಜಿ.ವಿ.ರಾಜಣ್ಣ, ಎಚ್.ಮಂಜುನಾಥ, ಶಿವಕೀರ್ತಿ, ನಾಗರಾಜು, ಎಂ.ಆರ್.ರೇವಣ್ಣ, ಎಂ.ಬಿ.ವಿಜಯೇಂದ್ರ, ಎಸ್.ರೇವಣ್ಣ, ಎಚ್.ಎಲ್.ಅಶೋಕ್, ಡಿ.ಎಂ.ತಿಪ್ಪೇಸ್ವಾಮಿ, ವಿ.ಮಂಜುನಾಥ ಮುಂತಾದವರು ಪಾಲ್ಗೊಂಡಿದ್ದರು.