ಹುಬ್ಬಳ್ಳಿ: ವಿಕಸಿತ ಭಾರತ ಬರೀ ಭಾರತದ ಸಂಕಲ್ಪ ಆಗಿಲ್ಲ. 2047ಕ್ಕೆ ಭಾರತ ಹೇಗೆಲ್ಲ ವಿಕಸಿತ ಆಗಬೇಕು ಎಂಬುದರ ಸ್ಪಷ್ಟ ಕಲ್ಪನೆಯಾಗಿದೆ. ವಿಕಸಿತ ಭಾರತದಿಂದ ದೇಶ ವಿಶ್ವ ಗುರುವಾಗುವುದು ನಿಶ್ಚಿತ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ವಿದ್ಯಾನಗರದ ಬಿವಿಬಿ ಬಯೋಟೆಕ್ ಸಭಾಭವನದಲ್ಲಿ ಹು-ಧಾ ಮಹಾನಗರ ಬಿಜೆಪಿ ವತಿಯಿಂದ ಭಾನುವಾರ ನಡೆದ ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ (ವಿಶ್ವಾಸ, ವಿಕಾಸ ಮತ್ತು ಜನ ಕಲ್ಯಾಣಕ್ಕೆ 12 ವರ್ಷ) ಮಾತನಾಡಿದರು.ವಿಕಸಿತ ಭಾರತದ ಸಂಕಲ್ಪದ ಸಾಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಇದಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.
ಮದ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದಿಂದ ಉಂಟಾದ ಎನರ್ಜಿ ಎಮರ್ಜೆನ್ಸಿಯಿಂದ ಜಗತ್ತಿನ ಬಹಳಷ್ಟು ದೇಶಗಳು ವರ್ಕ್ ಫ್ರಾಮ್ ಹೋಮ್ ಘೋಷಣೆ ಮಾಡಿದ್ದವು. ಆದರೆ, ದೇಶದಲ್ಲಿ ಒಂದೇ ಒಂದು ದಿನವೂ ಇಂಧನದ ಕೊರತೆ ಉಂಟಾಗಲಿಲ್ಲ ಸಮರ್ಪಕ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನೀಲ ಹಾಗೂ ಅಡುಗೆ ಎಣ್ಣೆಯನ್ನು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಯಾವುದೇ ತೊಂದರೆ ಆಗದಂತೆ ಮೋದಿ ಸರ್ಕಾರ ನೋಡಿಕೊಂಡಿದೆ. ಇಂದು ಎಪ್ಪತ್ತು ದಿನಗಳಿಗೆ ಆಗುವಷ್ಟು ಅಡುಗೆ ಎಣ್ಣೆ ಸ್ಟಾಕ್ ಇದೆ. ಅದನ್ನು 200 ದಿನಕ್ಕೆ ಹೆಚ್ಚಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು.ಅತಿ ಹೆಚ್ಚು ವರ್ಷದ ವರೆಗೆ ಆಡಳಿತ ನಡೆಸುತ್ತಿರುವ ಪ್ರಧಾನಿ ಎಂಬ ಹೆಗ್ಗಳಿಕೆ ಮೋದಿ ಅವರಿಗೆ ಸಲ್ಲುತ್ತದೆ.
ರಾಜಕಾರಣದ ಹಿನ್ನೋಟ ಗಮನಿಸಿದಾಗ 1951ರಿಂದ 1975ರ ವರೆಗಿನ ಚುನಾವಣೆಗಳು ಯಾವುದೇ ರೀತಿಯ ನಿರ್ಧಿಷ್ಟ ಹಾಗೂ ಜನ ಕಲ್ಯಾಣಕ್ಕೆ ಅನುಕೂಲಕರವಾದ ವಿಷಯಾಧಾರಿತ ಚುನಾವಣೆಗಳು ನಡೆಯಲಿಲ್ಲ. ಕಾಂಗ್ರೆಸ್ ಪಕ್ಷವನ್ನು ಸ್ಥಗಿತಗೊಳಿಸಿ ಎಂದು ಮಹಾತ್ಮ ಗಾಂಧೀಜಿ ಅವರೇ ಹೇಳಿದ್ದರೂ ಗಾಂಧಿ ಹೆಸರಿನ ಕುಟುಂಬ ಮುಂದುವರೆಸಿಕೊಂಡು ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಭಾರತದಲ್ಲಿ ಇರುವ ಕಲ್ಲಿದ್ದಲು ಸುಮಾರು 350 ವರ್ಷಕ್ಕೂ ಅಧಿಕ ಕಾಲ ಬಳಕೆ ಮಾಡುವಷ್ಟಿದೆ. ಆದರೂ ಅದನ್ನು ತೆಗೆದು ಬಳಸುವ ಸಾಮಾನ್ಯ ಪ್ರಯತ್ನವನ್ನು ಕಾಂಗ್ರೆಸ್ ಸರಕಾರದಲ್ಲಿ ಆಗಿರಲಿಲ್ಲ. ಆದ್ದರಿಂದ ಕಾಂಗ್ರೆಸ್ ಆಡಳಿತದಲ್ಲಿ ವರ್ಷಕ್ಕೆ 2 ಲಕ್ಷ 50 ಸಾವಿರ ಕೋಟಿ ಮೊತ್ತದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿತ್ತು. ಇಂದು ಕಲ್ಲಿದ್ದಲನ್ನು ರಫ್ತು ಮಾಡಲಾಗುತ್ತಿದೆ ಎಂದರು.
ನಕ್ಸಲ್ ಹಾಗೂ ಭಯೋತ್ಪಾದಕರ ಅಟ್ಟಹಾಸವನ್ನು ಸದೆ ಬಡಿಯಲಾಗಿದೆ. ಆರ್ಟಿಕಲ್ 370 ತೆಗೆದು ಹಾಕುವುದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಸಾಧಿಸಿ ತೋರಿಸಿದ ಹೆಮ್ಮೆ ಮೋದಿ ಸರ್ಕಾರದ್ದು ಎಂದರು.ಶಾಸಕ ಮಹೇಶ ಟೆಂಗಿನಕಾಯಿ, ಇಡೀ ಜಗತ್ತಿಗೆ ದೊಡ್ಡಣ್ಣ ಎಂದೇ ಕರೆಯುವ ಅಮೆರಿಕಾದ ಅಧ್ಯಕ್ಷ ಟ್ರಂಪ್ ಸಹ ಪ್ರಧಾನಿ ಮೋದಿ ಅವರ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ದೇಶದ ಹೆಮ್ಮೆಯ ಸಂಗತಿ ಎಂದರು.
ಹು-ಧಾ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಲಿಂಗರಾಜ ಪಾಟೀಲ, ಎಸ್.ವಿ. ಸಂಕನೂರ, ರಾಜ್ಯಸಭಾ ಸದಸ್ಯ ಎಂ.ನಾಗರಾಜ, ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚೌಹ್ವಾಣ, ಶಂಕರಣ್ಣ ಮುನವಳ್ಳಿ, ಜಯತೀರ್ಥ ಕಟ್ಟಿ, ಮಹೇಂದ್ರ ಕೌತಾಳ, ಸಂಜಯ್ ಕಪಟಕರ, ಪಾಲಿಕೆ ಸದಸ್ಯ ಶಿವು ಹಿರೇಮಠ ಇದ್ದರು.