ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ನಾಡಿನ ಐತಿಹಾಸಿಕ ವಾಸ್ತುಶಿಲ್ಪ ಪರಂಪರೆಗೆ ಶಿಲ್ಪಗಳ ಕೊಡುಗೆ ಅಪಾರವಾದುದು. ಅಂತಹ ಅಪರೂಪದ ಕೊಡುಗೆಯನ್ನು ನಾಡಿಗೆ ನೀಡಿ ತಮ್ಮ ಕಲಾ ಕೌಶಲ್ಯ ಕೊಡುಗೆಯನ್ನು ನಾಡಿಗೆ ನೀಡಿ ಅಜರಾಮರನಾದವನು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿಯವರು ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಪಟ್ಟಣದ ಮಾರುತಿ ನಗರದಲ್ಲಿ ತಾಲೂಕು ವಿಶ್ವಕರ್ಮ ಸಮಾಜದಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವರು ಹೇಗಿದ್ದಾನೆ ಎಂಬುದನ್ನು ಶಿಲ್ಪದ ಮೂಲಕ ಜಗತ್ತಿಗೆ ತೋರಿಸಿಕೊಟ್ಟವರೇ ವಿಶ್ವಕರ್ಮರು. ಹಾಗಾಗಿ ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ಬಾಲರಾಮ ಮೂರ್ತಿ ಪ್ರತಿಷ್ಠಾಪನೆಗೊಂಡ ನಂತರ ಸಂಪೂರ್ಣ ಅಯೋಧ್ಯೆ ಪವಿತ್ರಗೊಂಡಿದೆ ಎಂದರೆ ಅದು ವಿಶ್ವಕರ್ಮರಿಂದಲೆ ಎಂದು ಶ್ಲಾಘಿಸಿದರು.ಅಮರಶಿಲ್ಪಿ ಜಕಣಾಚಾರಿ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ. ಇವರು ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ. ಇಂದಿಗೂ ದೇಶ ವಿದೇಶದಿಂದ ಪ್ರವಾಸಿಗರು ಇವರ ಕಲೆ ಹಾಗೂ ಶಿಲ್ಪಕಲೆಯನ್ನು ಮೆಚ್ಚುತ್ತಿದ್ದಾರೆ. ಈ ಮೂಲಕ ದೇಶದ ಸಂಸ್ಕೃತಿ ಪರಂಪರೆಯನ್ನು ಹಾಡಿ ಹೊಗಳುವಂತೆ ಮಾಡಿದ್ದಾರೆ. ಇದರಿಂದ ದೇಶದ ಘನತೆ ಕೂಡ ಹೆಚ್ಚಾಗಿದೆ ಎಂದರು.
ಒಳ್ಳೆಯ ಕೆಲಸ ಹಾಗೂ ಸೇವೆ ಮಾಡಿದರೆ ಸಮಾಜದಲ್ಲಿ ಸ್ಮರಣೀಯರಾಗುತ್ತೇವೆ. ಅಂತಹ ಕೆಲಸಗಳು ಕೂಡ ಶಾಶ್ವತವಾಗಿ ಉಳಿಯುತ್ತವೆ ಎಂದ ಅವರು, ಎಲ್ಲರೊಂದಿಗೆ ಸೌಹಾರ್ದತೆಯಿಂದ ಇರಬೇಕು. ವಿಶ್ವಕರ್ಮ ಸಮುದಾಯವು ಪಂಚ ಕಸುಬುಗಳನ್ನು ಅವಲಂಬಿಸಿದ್ದು, ಕಾಲಕ್ಕೆ ತಕ್ಕಂತೆ ಇಂದಿನ ಆಧುನಿಕ ತಂತ್ರಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮೂಲ ಪಂಚಕಸುಬುಗಳನ್ನು ಜೀವಂತವಾಗಿ ಉಳಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.ಚುನಾವಣೆಗಳು ಬಂದಾಗ ಮಾತ್ರ ತಮ್ಮ ಪಕ್ಷದ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಚುನಾವಣೆ ಮುಗಿದ ನಂತರ ಎಲ್ಲ ಜಾತಿ ಧರ್ಮದವರನ್ನು ಒಂದೇ ಎಂಬ ಭಾವನೆಯಿಂದ ಕಾಣುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಆದರೆ, ಇಂದು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಒಗ್ಗಟ್ಟಾಗಿರುವ ಸಮಾಜಗಳನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ವಿಷಾದಿಸಿದರು.
ವಿಶ್ವಕರ್ಮ ಸಮಾಜದ ಮಕ್ಕಳ ಶೈಕ್ಷಣಿಕ ಮತ್ತು ಆರ್ಥಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ನನ್ನ ಅಧಿಕಾರವಧಿಯಲ್ಲಿ ಶಕ್ತಿ ಮೀರಿ ಸರ್ಕಾರದ ಅನುದಾನ ಒದಗಿಸಿಕೊಡಲು ಪ್ರಯತ್ನಿಸುತ್ತೇನೆ. ಜೊತೆಗೆ ಮುದ್ದೇಬಿಹಾಳದ ಸಮಾಜಕ್ಕೆ ದೊಡ್ಡದಾದ ಸಮುದಾಯ ಭವನ ನಿರ್ಮಿಸಲು ಒಳ್ಳೆ ನಿವೇಶನ ಗೊತ್ತುಪಡಿಸಿದರೆ ಸಮುದಾಯ ಭವನ ನಿರ್ಮಾಣಕ್ಕೆ ಪ್ರಯತ್ನಿಸುವೆ. ಜತೆಗೆ ಆ ಸಮುದಾಯದ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.ಶಹಾಪೂರ ಏಕದಂಡಗಿಮಠದ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಮಾತನಾಡಿ, ರಾಜ್ಯದ ರಾಜಕಾರಣಿಗಳಲ್ಲೇ ಶಾಸಕ ಸಿ.ಎಸ್.ನಾಡಗೌಡರು ಅತ್ಯಂತ ಸರಳ, ಸಜ್ಜನಿಕೆ ಸಂಭಾವಿತ ರಾಜಕಾರಣಿಯಾಗಿದ್ದಾರೆ. ಅವರು ನಮ್ಮ ಸಮಾಜದ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ನಮ್ಮ ಸಮಾಜದಲ್ಲಿ ಆಂತರಿಕ ಕಚ್ಚಾಟಗಳು ಇರಕೂಡದು. ಯಾವುದೇ ಒಂದು ಸಮಾಜ ಅಭಿವೃದ್ಧಿಯಾಗಬೇಕಾದರೆ ಒಗ್ಗಟ್ಟು ಮುಖ್ಯ ಎಂದರು.
ದ್ವೇಷ ಅಸೂಯೆ ಭಾವನೆಯಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ವಿಶ್ವಕರ್ಮದವರು ಸಮಾಜದ ಅಭಿವೃದ್ಧಿ ಹಿತದೃಷ್ಟಿಯಿಂದ ಎಲ್ಲ ವೈಮನಸ್ಸುಗಳನ್ನು ಮರೆತು ಒಗ್ಗಟ್ಟಾಗಿ ಸಮಾಜದ ಶಕ್ತಿ ಹೆಚ್ಚಿಸಲು ಶ್ರಮಿಸಬೇಕು. ಮೌನೇಶ್ವರರ ಕಾಲದಲ್ಲಿ ಲಿಂಗನಬಂಡಿಯಲ್ಲಾದ ತಪ್ಪು ಘಟನೆ ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಮರುಕಳಿಸದಂತೆ ಜಾಗೃತಿ ವಹಿಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.ಈ ವೇಳೆ ಸಮಾಜದ ಏಳಿಗೆ ಶ್ರಮಿಸಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಚಂದ್ರಶೇಖರ ಬಸಣ್ಣ ಪತ್ತಾರ, ವಿರುಪಾಕ್ಷಿ ವೀರಣ್ಣ ಪತ್ತಾರ, ಆನಂದ ಗಂಗಾಧರ ಪತ್ತಾರ, ಕಾಳಪ್ಪ ಮಾನಪ್ಪ ಪತ್ತಾರ ಸೇರಿದಂತೆ ಅನೇಕರಿಗೆ ಸಮಾಜದಿಂದ ಸನ್ಮಾನಿಸಲಾಯಿತು.
ಈ ವೇಳೆ ತಾಳಿಕೋಟಿಯ ಸಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾದ ನಿರ್ದೇಶಕ ಶ್ರೀಕಾಂತ ಪತ್ತಾರ, ಶಿಕ್ಷಕಿ ಗೀತಾ ಶಿರವಾಳ, ತಾಳಿಕೋಟಿ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಪಿ ಐ ಬಡಿಗೇರ ಅವರು ಮಾತನಾಡಿದರು.ಸಿಂದಗಿ ಮೂರುಜಾವದ ಮಠದ ಶ್ರೀ ರಾಮಚಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು, ಕಾಳಿಕಾದೇವಿ ಅರ್ಚಕ ಸುರೇಶ ಆಚಾರ, ಶಿವಶಂಕರಗೌಡ ಹಿರೇಗೌಡರ, ಅಸ್ಕಿ ಫೌಂಡೇಷನ್ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಹಿರಿಯ ಮುಖಂಡರಾದ ಮಾನಪ್ಪ ಪತ್ತಾರ(ತಮದಡ್ಡಿ) ಮನೋಹರ ಶಿರವಾಳ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಮಲ್ಲಣ್ಣ ಎಸ್ ಪತ್ತಾರ (ತಾರನಾಳ), ಮನೋಹರ ಎಸ್ ಪತ್ತಾರ(ಶಳ್ಳಗಿ), ಮನೋಜ ಬಡಿಗೇರ, ಶಶಿಧರ ಪತ್ತಾರ(ಬಾವೂರ), ಶ್ರೀನಿವಾಸ ಸೋನಾರ, ಪುರಸಭೆ ಸದಸ್ಯೆ ಸಹನಾ ಬಡಿಗೇರ, ರಮೇಶ ಪತ್ತಾರ(ತಮದಡ್ಡಿ), ಪ್ರತಿಭಾ ಪ್ರಭುಲಿಂಗ ವಿಶ್ವಕರ್ಮ, ವಿಜಯಕುಮಾರ ಬಡಿಗೇರ, ಕಾಶಿನಾಥ ಈರಣ್ಣ ಪತ್ತಾರ(ಕಾಳಗಿ) ಇಲಾಳಗ್ರಾಮದ ಸಮಾಜದ ಹಿರಿಯ ಮುಖಂಡ ಗಣೇಶ ಪತ್ತಾರ, ಸೇರಿದಂತೆ ಹಲವರು ಇದ್ದರು. ಶಿಕ್ಷಕ ಟಿ ಡಿ ಲಮಾಣಿ ನಿರೂಪಿಸಿದರು. ಪತ್ರಕರ್ತ ನಾರಾಯಣ ಮಾಯಾಚಾರಿ ಸ್ವಾಗತಿಸಿದರು.