ಸಾರಾಂಶ
ಭಾರತ ವಿಶ್ವ ಪ್ರಸಿದ್ಧ ತಾಣವಾಗಲು ವಿಶ್ಚಕರ್ಮರ ಕೊಡುಗೆ ಅಪಾರವಾದುದು. ವಿವಿಧ ಮಂದಿರಗಳಲ್ಲಿ ತನ್ನದೇ ಶೈಲಿಯ ಶಿಲ್ಪಕಲೆ ಮೂಲಕ ಇಡೀ ಪ್ರಪಂಚವನ್ನೇ ದೇಶದತ್ತ ನೋಡುವಂತೆ ಮಾಡಿರುವ ವಿಶ್ವಕರ್ಮರ ಸೇವೆ ಅನನ್ಯ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
- ಜಿಲ್ಲಾ ವಿಶ್ವಕರ್ಮ ಸಮುದಾಯ ಭವನದಲ್ಲಿ ಸಂಘ ಉದ್ಘಾಟನೆ । ಸಾಮೂಹಿಕ ಉಪನಯನ ಕಾರ್ಯಕ್ರಮ
--- ದೇಶ, ನಾಡಿನ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ವಿಶ್ವಕರ್ಮರ ಶಿಲ್ಪಕಲೆಗೆ ಮನ್ನಣೆ
-ಕಲೆಯ ಮೂಲಕ ದೇಶದ ಶ್ರೀಮಂತಿಕೆ ಹೆಚ್ಚಿಸುವಲ್ಲಿ ಈ ಸಮಾಜದ ಕೊಡುಗೆ- ಕಲೆ, ಸಾಹಿತ್ಯ-ಸಂಸ್ಕೃತಿಯಲ್ಲಿ ಭಾರತ ವಿಶ್ವದಲ್ಲಿಯೇ ಪ್ರಸಿದ್ಧ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭಾರತ ವಿಶ್ವ ಪ್ರಸಿದ್ಧ ತಾಣವಾಗಲು ವಿಶ್ಚಕರ್ಮರ ಕೊಡುಗೆ ಅಪಾರವಾದುದು. ವಿವಿಧ ಮಂದಿರಗಳಲ್ಲಿ ತನ್ನದೇ ಶೈಲಿಯ ಶಿಲ್ಪಕಲೆ ಮೂಲಕ ಇಡೀ ಪ್ರಪಂಚವನ್ನೇ ದೇಶದತ್ತ ನೋಡುವಂತೆ ಮಾಡಿರುವ ವಿಶ್ವಕರ್ಮರ ಸೇವೆ ಅನನ್ಯ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಜಿಲ್ಲಾ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಭಾಯಿಂದ ನಗರದ ಜಿಲ್ಲಾ ವಿಶ್ವಕರ್ಮ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಉಪನಯನ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ದೇಶ ಹಾಗೂ ನಾಡಿನ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ವಿಶ್ವಕರ್ಮರು ಶಿಲ್ಪಕಲೆ ಕೆತ್ತನೆ ಮೂಲಕ ಮನ್ನಣೆ ಗಳಿಸಿದವರು. ಬೇಲೂರು, ಹಳೇಬೀಡು ಸೇರಿದಂತೆ ಇತರೆ ದೇಗುಲಗಳಲ್ಲಿ ಅನಾದಿಕಾಲದಲ್ಲೇ ಯಾವುದೇ ತಂತ್ರಗಾರಿಕೆಯಿಲ್ಲದೇ ಕೇವಲ ಬುದ್ದಿಶಕ್ತಿಯಿಂದಲೇ ಸಾಧಾರಣ ಕಲ್ಲಿಗೆ ವಿಶಿಷ್ಟ ರೂಪ ನೀಡಿದವರು ಎಂದರು. ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯಲ್ಲಿ ಭಾರತ ವಿಶ್ವದಲ್ಲಿಯೇ ಪ್ರಸಿದ್ಧವಾಗಿ ಗುರುತಿಸಿಕೊಂಡಿದೆ, ಕಲೆಯ ಮೂಲಕ ದೇಶದ ಶ್ರೀಮಂತಿಕೆ ಹೆಚ್ಚಿಸುವಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆ ಹೇಳತೀರದು. ದೇಶದಲ್ಲಿನ ಐತಿಹಾಸಿಕ ದೇವಾಲಯ ದಲ್ಲಿನ ಶಿಲ್ಪಕಲೆ ನಿರ್ಮಾಣ ವಿಶ್ವಕರ್ಮ ಸಮುದಾಯದ ಬಹು ದೊಡ್ಡ ಕೊಡುಗೆ ಎಂದು ತಿಳಿಸಿದರು. ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಆರ್.ಶ್ರೀನಿವಾಸ್ ಆಚಾರ್ ಮಾತನಾಡಿ, ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ವಿಶ್ವಕರ್ಮರು ಪ್ರಸ್ತುತ ಹಿಂದುಳಿದ ವರ್ಗವಾಗಿದೆ. ಸಾಮಾಜಿಕ ಹಾಗೂ ರಾಜಕೀಯವಾಗಿ ವಿಧಾನಸಭಾ ಅಥವಾ ನಿಗಮ ಮಂಡಳಿಗಳಲ್ಲಿ ಸ್ಥಾನ ದೊರೆಯದಿರುವುದು ಬೇಸರದ ಸಂಗತಿ ಎಂದು ಹೇಳಿದರು. ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸುವ ಜೊತೆಗೆ ವಿಶ್ವಕರ್ಮ ಜಯಂತಿಗೆ ಅಧಿಕೃತವಾಗಿ ಚಾಲನೆ ನೀಡಿದ್ದರು. ಇತ್ತೀಚೆಗೆ ನಡೆದ ಸಂಪುಟದಲ್ಲೂ ಮುಜರಾಯಿ ಇಲಾಖೆ ಯಡಿ ದೇವಾಲಯಗಳಲ್ಲಿ ವಿಶ್ವಕರ್ಮ ಸಮಾಜದ ಓರ್ವರನ್ನು ನಾಮ ನಿರ್ದೇಶನ ಮಾಡಲು ತೀರ್ಮಾನಿಸಿರುವುದು ಉತ್ತಮ ಸಂಗತಿ ಎಂದರು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ವಿಶ್ವಕರ್ಮರನ್ನು ಸಮಾಜದ ಮುಂಚೂಣಿಗೆ ತರುವಲ್ಲಿ ಶ್ರಮವಹಿಸಬೇಕು. ಸಮುದಾಯ ಏಳಿಗೆಗೆ ಹೆಚ್ಚು ಒತ್ತು ನೀಡುವ ಸಲುವಾಗಿ ಪ್ರಸ್ತುತ ಜನಾಂಗ ದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಎಚ್.ಆರ್.ಉಮಾಶಂಕರ್, ಕುಲಕಸುಬಿನ ಮೂಲಕ ದೇಶದ ಶ್ರೇಷ್ಟತೆಯನ್ನು ವಿಶ್ವಮಟ್ಟದಲ್ಲಿ ಸಾರಿದವರಲ್ಲಿ ವಿಶ್ವಕರ್ಮರು, ಸಮಾಜಕ್ಕೆ ತನ್ನದೇ ಆದ ಹಿರಿಮೆಯಿದೆ. ಸಮಾಜದಲ್ಲಿ ಏಕತೆ ಭಾವವಿದೆ. ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ ಸಮಾಜ ವಿಶ್ವಕರ್ಮ ಎಂದು ಹೇಳಿದರು. ಚಿತ್ರಕಲಾ ಅಕಾಡೆಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್.ಪಿ.ಜಯಣ್ಣಾಚಾರ್ ಅವರಿಗೆ ಸಭಾದಿಂದ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಬಳಿಕ 5 ಮಂದಿ ಯುವಕರಿಗೆ ಸಾಮೂಹಿಕ ಉಪನಯನ ನಡೆಸಲಾಯಿತು. ಇದೇ ವೇಳೆ ಚಿಕ್ಕಮಗಳೂರು ತಾಲೂಕು ನೂತನ ಅಧ್ಯಕ್ಷ ಕೆ.ಪಿ.ದಿವಾಕರ, ಗೌರವ ಅಧ್ಯಕ್ಷ ಕೆ.ಎನ್. ಜಗನ್ನಾಥ್, ಉಪಾಧ್ಯಕ್ಷ ಲಕ್ಷ್ಮಣಚಾರ್, ಎ.ಟಿ.ಮಹೇಶ್, ಎಸ್.ವಿ.ಹರೀಶ್ ಆಚಾರ್ಯ, ಕಾರ್ಯದರ್ಶಿ ನಾಗಭೂಷಣಾಚಾರ್, ಖಜಾಂಚಿ ಬಿ.ಎಂ.ಇಂದ್ರೇಶ್, ಸಹ ಕಾರ್ಯದರ್ಶಿ ಅರುಣ್ ಆಚಾರ್ಯ, ಸಂಘಟನಾ ಕಾರ್‍ಯದರ್ಶಿ ಬಿ.ಡಿ.ದಿನೇಶ್, ಸಂತೋಷ್, ಮಂಜಾಚಾರ್ ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಭಾದ ಗೌರವಾಧ್ಯಕ್ಷ ಎಂ.ಎನ್.ವಿಠಲಾಚಾರ್ಯ, ಉಪಾಧ್ಯಕ್ಷ ಎಂ.ಜೆ.ಚಂದ್ರಶೇಖರ್, ಕಾರ್ಯದರ್ಶಿ ಬಿ.ಪಿ.ರತೀಶ್, ಖಜಾಂಚಿ ಬಿ.ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿಗಳಾದ ಹೆಚ್.ನಾರಾಯಣಚಾರ್, ಸಿ.ಎಸ್.ಅರುಣ್, ನಿರ್ದೇಶಕರಾದ ಎಂ.ಜೆ.ಮಹೇಶ್ ಆಚಾರ್ಯ, ರುದ್ರಯ್ಯಚಾರ್, ಕೆ.ರಾಮಪ್ಪಚಾರ್ ಉಪಸ್ಥಿತರಿದ್ದರು. 4 ಕೆಸಿಕೆಎಂ 4ಚಿಕ್ಕಮಗಳೂರು ಜಿಲ್ಲಾ ವಿಶ್ವಕರ್ಮ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಉಪನಯನ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಉದ್ಘಾಟನೆಯನ್ನು ಮಾಜಿ ಸಚಿವ ಸಿ.ಟಿ. ರವಿ ನೆರವೇರಿಸಿದರು. ಆರ್.ಶ್ರೀನಿವಾಸ್ ಆಚಾರ್, ಎಚ್.ಆರ್.ಉಮಾಶಂಕರ್ ಇದ್ದರು.