ನಾಗರಿಕತೆ ಬೆಳವಣಿಗೆಗೆ ವಿಶ್ವಕರ್ಮರ ಕೊಡುಗೆ ಅಮೂಲ್ಯ: ಡಾ.ಸೋಮಣ್ಣ

| Published : Sep 12 2024, 01:51 AM IST

ಸಾರಾಂಶ

ಗೋಣಿಕೊಪ್ಪ ಅನುದಾನಿತ ಪ್ರೌಢಶಾಲಾ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪೊನ್ನಂಪೇಟೆ ತಾಲೂಕು ಮತ್ತು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಗೋಣಿಕೊಪ್ಪ ಪ್ರೌಢಶಾಲೆ ಆಶ್ರಯದಲ್ಲಿ ದಿ.ಸಂಪಾಜೆ ಸಣ್ಣಯ್ಯ ಪಟೇಲ್, ದಿ. ಪುಟ್ಟಮ್ಮ, ದಿ.ಹೆಬ್ಬಾಲೆ ನಂಜಾಚಾರ್ ಜ್ಞಾಪಕಾರ್ಥ ಉಪನ್ಯಾಸ ನಡೆಯಿತು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ನಾಗರಿಕತೆಯ ಬೆಳವಣಿಗೆಗೆ ಮೂಲ ಕಾರಣಗಳಲ್ಲಿ ವಿಶ್ವಕರ್ಮ ಸಮುದಾಯ ಸೇವೆ ಸರ್ವಶ್ರೇಷ್ಠ ಎಂದು ಸಾಹಿತಿ ಡಾ.ಜೆ. ಸೋಮಣ್ಣ ಪ್ರತಿಪಾದಿಸಿದ್ದಾರೆ.

ಗೋಣಿಕೊಪ್ಪ ಅನುದಾನಿತ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ದಿ.ಸಂಪಾಜೆ ಸಣ್ಣಯ್ಯ ಪಟೇಲ್, ದಿ. ಪುಟ್ಟಮ್ಮ, ದಿ.ಹೆಬ್ಬಾಲೆ ನಂಜಾಚಾರ್ ಜ್ಞಾಪಕಾರ್ಥದ ಉಪನ್ಯಾಸದಲ್ಲಿ ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ವಿಷಯವಾಗಿ ಅವರು ಮಾತನಾಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪೊನ್ನಂಪೇಟೆ ತಾಲೂಕು ಮತ್ತು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಗೋಣಿಕೊಪ್ಪ ಪ್ರೌಢಶಾಲೆ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಜಗತ್ತಿನ ನಿರ್ಮಾಣದಲ್ಲಿ ವಿಶ್ವಕರ್ಮ ಸಮುದಾಯ ಕೊಡುಗೆ ಮಹತ್ವದ್ದು. ಯಾವುದೇ ಆಧುನಿಕ ತಂತ್ರಜ್ಞಾನಗಳ ಇಲ್ಲದೆ ಇರುವ ಕಾಲಘಟ್ಟದಲ್ಲಿ ಎಂಜಿನಿಯರ್ ಪದ ಹುಟ್ಟುವ ಪೂರ್ವದಲ್ಲಿ ವಿಶ್ವಕರ್ಮರು ತಮ್ಮದೇ ಆದ ಚಿಂತನೆಯಲ್ಲಿ ಈ ಜಗತ್ತನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.

ನಿವೃತ್ತ ಉಪಾಧ್ಯಾಯಿನಿ ಎಚ್‌.ಜೆ. ಸಾವಿತ್ರಿ ಗ್ರಾಮೀಣ ಜನಪದ ಸೊಗಡು ವಿಷಯವಾಗಿ ಮಾತನಾಡಿ, ಒಂದಾಗಿ ಬದುಕಲು ಸದೃಢ ಸಮಾಜ ನಿರ್ಮಿಸಲು ಜಾನಪದ ಅಂದಿನ ಶ್ರೇಷ್ಠತೆಯಾಗಿ ಉಳಿದುಕೊಂಡಿತು. ಇಂದು ಆಧುನಿಕತೆಯ ನೆಪದಡಿ ಸಾಮಾಜಿಕ ಮೌಲ್ಯಗಳನ್ನು ಕಳೆದುಕೊಂಡು ತನ್ನ ಸುತ್ತಮುತ್ತಲಿನ ಪರಿಸರದ ನಡೆ ನುಡಿಗಳನ್ನು ಕಲಿತುಕೊಳ್ಳಲಾಗದ ಅಸಹಾಯಕತೆಯಲ್ಲಿ ಬಳಲುವ ಪರಿಸ್ಥಿತಿ ಎದುರಾಗಿದೆ ಎಂದರು.

ಮೊಬೈಲ್, ಟಿ.ವಿ.ಗಳಂತಹ ಸಾಧನಗಳು ಇಲ್ಲದೆ ಇದ್ದಂತಹ ಆ ಕಾಲಘಟ್ಟದಲ್ಲಿ ಪ್ರತಿಯೊಬ್ಬನಲ್ಲಿಯೂ ಅಡಕವಾಗಿದ್ದ ಕಲೆ ಪ್ರದರ್ಶನವಾಗುತ್ತಿತ್ತು. ಅದು ಜಾನಪದ ನೃತ್ಯಗಳಾಗಿಯೂ, ಹಾಡುಗಳಾಗಿಯೂ, ಆಟಗಳಾಗಿಯೂ ಕಾಣಿಸಿಕೊಳ್ಳುತ್ತಿತ್ತು. ಇಂದು ಅಂತಹ ಜಾನಪದ ಸೊಗಡದಿಂದ ಹೊರಗುಳಿದು ಖಿನ್ನತೆಗೆ ಒಳಗಾಗುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಪೊನ್ನಂಪೇಟೆ ಕನ್ನಡ ಸಾಹಿತ್ಯ ಪರಿಷತ್‌ ಹೋಬಳಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ, ಗೋಣಿಕೊಪ್ಪ ಪ್ರೌಢಶಾಲೆಯ ಕಾರ್ಯದರ್ಶಿ, ಕುಪ್ಪಂಡ ತಿಮ್ಮಯ್ಯ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಪ್ರಾಸ್ತವಿಕ ನುಡಿಗಳನಾಡಿದರು. ಪ್ರೌಢಶಾಲೆ ಮುಖ್ಯೋಪಾಧ್ಯಾಯ ರತೀಶ್ ರೈ, ಪೊನ್ನಪೇಟೆ ತಾಲೂಕು ಕ.ಸಾ.ಪ. ಅಧ್ಯಕ್ಷ ಕೋಳೆರ ದಯ ಚಂಗಪ್ಪ, ದತ್ತಿದಾನಿಗಳ ಸಂಬಂಧಿಗಳಾದ ರೋಹಿಣಿ, ಶಿವರಾಮ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಮನೆಯಪಂಡ ಶೀಲಾ ಬೋಪಣ್ಣ, ಚಂದನ್ ಕಾಮತ್, ಉಳ್ಳುವಂಗಡ ಕಾವೇರಿ ಉದಯ, ಮಂಜುನಾಥ್ ಇದ್ದರು.

ಕಂದಾಯ ಇಲಾಖೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಬಾನಂಗಡ ಅರುಣ್ ಮತ್ತು ಗೋಣಿಕೊಪ್ಪ ಗ್ರಾಮ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅವರನ್ನು ಗೌರವಿಸಲಾಯಿತು.