ವಿಶ್ವಕರ್ಮರು ಪ್ರಪಂಚದ ಮೊದಲ ಎಂಜಿನಿಯರ್: ಮಮತಾ

| Published : Sep 27 2024, 01:23 AM IST / Updated: Sep 27 2024, 01:24 AM IST

ವಿಶ್ವಕರ್ಮರು ಪ್ರಪಂಚದ ಮೊದಲ ಎಂಜಿನಿಯರ್: ಮಮತಾ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಭಾರತ ಸೇರಿದಂತೆ ಜಗತ್ತಿನ ದೇವಾಲಯಗಳ ಸುಂದರ ವಾಸ್ತುಶಿಲ್ಪಗಳ ಕಲಾ ಸೌಂದರ್ಯಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ತಿಳಿಸಿದರು.

ನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಶ್ವಕರ್ಮ ಎಂದರೆ ವಿಶ್ವದ ಸೃಷ್ಟಿಕರ್ತ ಎಂದರ್ಥ. ಭಗವಾನ್ ಶ್ರೀಕೃಷ್ಣರ ದ್ವಾರಕ, ಪಾಂಡವರ ಇಂದ್ರಪ್ರಸ್ಥ, ಸುದರ್ಶನ ಚಕ್ರ, ಶಿವನ ತ್ರಿಶೂಲ ಹಾಗೂ ದೇವಾನು ದೇವತೆಯರಿಗೆ ಆಯುಧಗಳನ್ನು ವಿಶ್ವಕರ್ಮ ರಚಿಸಿಕೊಟ್ಟರು. ಅನೇಕ ದೇವಾಲಯಗಳ ವಾಸ್ತುಶಿಲ್ಪಗಳನ್ನು ರಚಿಸಿದ ವಿಶ್ವಕರ್ಮರು ಪ್ರಪಂಚದ ಮೊಟ್ಟಮೊದಲ ವಾಸ್ತುಶಿಲ್ಪಕಾರರಾಗಿದ್ದಾರೆ ಎಂದರೇ ತಪ್ಪಾಗಲಾರದು. ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ಪಾಲಿಸಬೇಕು ಎಂದು ಅವರು ತಿಳಿಸಿದರು.

ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ ಮಾತನಾಡಿ, ವಿಶ್ವಕರ್ಮ ಅವರು ವಿಶ್ವದಲ್ಲೇ ಶ್ರೇಷ್ಠ ವಾಸ್ತುಶಿಲ್ಪಿಗಳಾಗಿದ್ದಾರೆ. ರೈತರ ನೇಗಿಲಿನಿಂದ ಹಿಡಿದು ಅರಮನೆಗಳ ನಿರ್ಮಾಣದವರೆಗೂ ವಿಶ್ವಕರ್ಮರ ಕೊಡುಗೆ ಸಾಕಷ್ಟಿದೆ. ಜಗತ್ತಿನೆಲ್ಲೆಡೆ ದೇವಾಲಯ, ಪ್ರಾರ್ಥನಾ ಮಂದಿರಗಳನ್ನು ರಚಿಸಿರುವ ವಿಶ್ವಕರ್ಮರ ಸ್ಮರಣೆ ಪ್ರಸ್ತುತ ದಿನಗಳಲ್ಲಿ ಮುಖ್ಯವಾಗಿದೆ ಎಂದರು.

ನಗರಸಭಾ ಉಪಾಧ್ಯಕ್ಷರಾದ ಎಚ್.ಎಸ್.ಮಮತಾ ಮಾತನಾಡಿ, ಸಂಸ್ಕೃತದಲ್ಲಿ ವಿಶ್ವಕರ್ಮ ಎಂದರೆ ಎಲ್ಲವನ್ನು ಸಾಧಿಸಿದವರು ಎಂದರ್ಥ. ಅಲ್ಲದೆ ವಿಶ್ವಕರ್ಮ ಅವರೇ ಪ್ರಪಂಚದ ಮೊದಲ ಎಂಜಿನಿಯರ್ ಆಗಿದ್ದಾರೆ. ಶಿವ ಪಾರ್ವತಿಗೆ ಉಡುಗೊರೆ ನೀಡಲು ವಿಶ್ವಕರ್ಮ ಅವರು ಕೈಲಾಸದಲ್ಲಿ ಒಂದು ಬಂಗಲೆಯನ್ನೇ ನಿರ್ಮಿಸಿಕೊಟ್ಟಿದ್ದರು. ವಿಶ್ವಕರ್ಮರ ಸ್ಮರಣಾ ಕಾರ್ಯಕ್ರಮವನ್ನು ಅರ್ಥಪೂರ್ಣವನ್ನಾಗಿಸಬೇಕು ಎಂದು ಹೇಳಿದರು.

ಕೊಡಗಿನ ಬರಹಗಾರರು ಮತ್ತು ಹವ್ಯಾಸಿ ಸಂಶೋಧಕರಾದ ಸತೀಶ್ ಮುಳ್ಳೂರು ಮುಖ್ಯ ಭಾಷಣ ಮಾಡಿ ವಿಶ್ವಕರ್ಮ ಪ್ರಕೃತಿಯ ಎಲ್ಲಾ ಪ್ರಾಣಿಸಂಕುಲದಲ್ಲಿಯೂ ಜೀವಂತವಾಗಿದ್ದಾರೆ. ಹಳ್ಳಿಗಳಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮಗಳು ನಡೆಯುತ್ತಿದ್ದುದ್ದು ದೇವಾಲಯಗಳಲ್ಲಿ. ಅಂತಹ ದೇವಾಲಯಗಳ ಪರಿಕಲ್ಪನೆ ನೀಡಿದವರು ವಿಶ್ವಕರ್ಮ ಆಗಿರುವುದರಿಂದ ಹಳ್ಳಿಗಳು ಸಾಂಸ್ಕೃತಿಕವಾಗಿ ಬೆಳೆಯಲು ವಿಶ್ವಕರ್ಮ ಕಾರಣೀಭೂತರಾಗಿದ್ದಾರೆ ಎಂದರು.

ಪ್ರತಿಯೊಂದು ಮನೆಯಲ್ಲು ವಿಶ್ವಕರ್ಮರಿದ್ದಾರೆ. ಮನುಷ್ಯರಾಗಿ ಹುಟ್ಟಿದ ಪ್ರತಿಯೊಬ್ಬರು ವಿಶ್ವಕರ್ಮ ಜಯಂತಿ ಆಚರಿಸಬೇಕು. ವಿಶ್ವಕರ್ಮರು ಸುಮಂಗಲಿಯರಿಗೆ ಮಂಗಳಸೂತ್ರ, ಅತ್ಯುನ್ನತ ವಾಸ್ತುಶಿಲ್ಪವುಳ್ಳ ಸುಂದರ ದೇವಾಲಯ ಹಾಗೂ ದೇವರಿಗೆ ಆಯುಧಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ ಎಂದು ಸತೀಶ್ ಮುಳ್ಳೂರು ತಿಳಿಸಿದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯ್‌ಕುಮಾರ್. ಡಿವೈಎಸ್ಪಿ ಲಕ್ಷ್ಮಯ್ಯ, ಸಮಾಜದ ಜಿಲ್ಲಾಧ್ಯಕ್ಷ ಅನಂತಕುಮಾರ್, ಮುಖಂಡರಾದ ಕುಮಾರ್, ಲಿಂಗಣ್ಣಚಾರ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಿಂದ ಆರಂಭವಾಗಿ ವಿವಿಧ ಆಕರ್ಷಕ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಬೆಳ್ಳಿರಥದಲ್ಲಿ ಅಲಂಕೃತ ವಿರ್ಶ್ವಕರ್ಮ ಅವರ ಭಾವಚಿತ್ರ ಮೆರೆವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಡಳಿತ ಭವನದ ತಲುಪಿತು.