ಸಾರಾಂಶ
ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಸೃಜನಶೀಲ ವಿಚಾರಧಾರೆಯುಳ್ಳವರಾಗಿದ್ದ ಶ್ರೀ ವಿಶ್ವಕರ್ಮ ಅವರು ಕೈಗೊಂಡ ಕಾರ್ಯ ಸ್ಮರಣೀಯವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜಕ್ಕೆ ದೈವಶಕ್ತಿ ಇರುವ ಕಾರಣ ಸಕಲ ಕಲೆಗಳನ್ನು ಕರಗತ ಮಾಡಿಕೊಂಡು ಸಮಾಜದಲ್ಲಿ ಸ್ಮರಣಿಯ ಸೇವೆಯಲ್ಲಿ ತೊಡಗಿದ್ದಾರೆ. ವಿಶ್ವಕರ್ಮ ಸಮಾಜವು ನಿರ್ಮಿಸಿದ ಶಿಲ್ಪಕಲೆಯು ಕಲಾ ಶ್ರೀಮಂತಿಕೆಯಿಂದ ಕೂಡಿದೆ ಎಂದರು.
ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ಕರಕುಶಲ ವಸ್ತು, ಕಲೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಕೌಶಲ್ಯ ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಕುಲಕಸುಬುದಾರರಿಗೆ ತರಬೇತಿ ಕಾರ್ಯಕ್ರಮ, ತರಬೇತಿ ಭತ್ಯೆ, ಸಾಲ ಮತ್ತು ಸಹಾಯಧನ ಹೀಗೆ ಹಲವಾರು ಸೌಲಭ್ಯಗಳಿದ್ದು, ಇವುಗಳ ಸದುಪಯೋಗ ಪಡೆದು ಅಭಿವೃದ್ಧಿ ಹೊಂದಬೇಕು ಎಂದರು.ಉಪನ್ಯಾಸ ನೀಡಿದ ವೀರಶೇಖರ ಬಿ. ಪತ್ತಾರ, ಶ್ರೀ ವಿಶ್ವಕರ್ಮ ಅವರು ನಿರಾಕಾರ, ನಿರ್ಗುಣ, ಅನಂತ, ಚೈತನ್ಯರೂಪಿಯಾಗಿದ್ದರು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಈಶಪ್ಪ ಬಡಿಗೇರ್, ವಿಶ್ವಕರ್ಮ ಸಮಾಜದ ಉದ್ದಾರಕ್ಕೆ ಶಿಕ್ಷಣದ ಅವಶ್ಯಕತೆ ಇದೆ. ತ್ರಿಮೂರ್ತಿಗಳು ಹುಟ್ಟದೇ ಇರುವಂತಹ ಸಂದರ್ಭದಲ್ಲಿ ಜಗತ್ತನ್ನು ಸೃಷ್ಠಿಸಿ, ಜಗತ್ತಿಗೆ ಕತೃತ್ವ ಮತ್ತು ಕರ್ತವ್ಯಗಳ ಬಗ್ಗೆ ವಿಶ್ವಕರ್ಮ ಅವರು ತಿಳಿಸಿಕೊಟ್ಟರು. ಇಡೀ ಪ್ರಪಂಚಕ್ಕೆ ಬೆಳಕು ನೀಡಿದವರು ವಿಶ್ವಕರ್ಮರಾಗಿದ್ದು, ಇದು ಪುರಾಣ, ವೇದಗಳಲ್ಲಿದೆ ಎಂದರು.ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾಗೇಶ ಕುಮಾರ್ ಮಾತನಾಡಿ, ವಿಶ್ವಕರ್ಮ ಸಮಾಜವು ಜಗತ್ತಿಗೆ ಅದ್ಭುತ ಕಲೆ ನೀಡಿದ ಸಮಾಜವಾಗಿದೆ. ಜಿಲ್ಲಾಡಳಿತ ನಮ್ಮ ಕಲೆಗೆ ಸಹಕರಿಸಿ ಬೇಕಾದ ಸೌಲಭ್ಯ ಒದಗಿಸುವಂತಾಗಲಿ. ಅದರಂತೆ ನಮ್ಮತನವನ್ನು ನಾವೆಂದಿಗೂ ಬಿಡದೇ ಕೆಲಸದಲ್ಲಿ ನಿರತರಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಕೊಪ್ಪಳ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ದೇವಪ್ಪ ಬಡಿಗೇರ, ಉಪಾಧ್ಯಕ್ಷ ಮಹಾದೇವಪ್ಪ ಕಮ್ಮಾರ ಮತ್ತು ರಾಮಣ್ಣ, ಕಾರಟಗಿ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಸೂಗೂರೇಶ್ವರ, ಕನಕಗಿರಿ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಂಜುನಾಥ ಪಂಡಿತ, ಕುಕನೂರು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ದೇವೇಂದ್ರಪ್ಪ ಬಡಿಗೇರ ಮತ್ತು ವಿಶ್ವಕರ್ಮ ಸಮಾಜದವರು ಇರಿದ್ದರು. ಲೇಖಕಿ ಸಾವಿತ್ರಿ ಮುಜಮದಾರ ನಿರೂಪಿಸಿದರು. ಚೈತ್ರಾ ಪತ್ತಾರ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಉಮೇಶ ಪತ್ತಾರ ವಂದಿಸಿದರು.